ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಆರ್.ಐಶ್ವರ್ಯಾ ಮಾತನಾಡಿದರು. ಡಾ. ಸುದರ್ಶನ್ ಇದ್ದರು.
- ಅರ್ಥಪೂರ್ಣ ಆಚರಣೆಗೆ ಅಪರ ಜಿಲ್ಲಾಧಿಕಾರಿ ಐಶ್ವರ್ಯಾ ಸೂಚನೆ
ಸಾಧಕರ ಸಂದೇಶಗಳನ್ನು ಸಮಾಜಕ್ಕೆ ಸಾರಲು, ಅವರ ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ವಿವಿಧ ಮಹನೀಯರ ಜಯಂತಿಗಳ ಆಚರಣೆ ಮಾಡಲಾಗುತ್ತಿದ್ದು, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯ ಆಚರಣೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೇ 20ರಂದು ಬೆಳಗ್ಗೆ 11.30ಕ್ಕೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದೆ. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಗೀತ ಗಾಯನ ಏರ್ಪಡಿಸಬೇಕು. ಸಮುದಾಯದ ಮುಖಂಡರ ಸಲಹೆಯಂತೆ ಸೂಚಿಸುವ ವ್ಯಕ್ತಿಯನ್ನು ಸಾನ್ನಿಧ್ಯ ಹಾಗೂ ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸಬೇಕು ಎಂದು ಸೂಚಿಸಿದರು.
ಜಯಂತಿಗಳ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲ ಸಮುದಾಯದವರು ಸೇರಿ ಜಯಂತಿಗಳ ಆಚರಣೆ ಮಾಡಬೇಕು. ಜಯಂತಿಗಳ ಆಚರಣೆಯ ಉದ್ದೇಶ ಮಹನೀಯರ ಆದರ್ಶಗಳನ್ನು ಪಾಲನೆ ಮಾಡುವುದಾಗಿದೆ. ಮಹನೀಯರ ತತ್ವ ಆದರ್ಶಗಳನ್ನು ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆಯ ಮೇಲೆ ಗಣ್ಯರಿಗೆ ಹೂ ಗುಚ್ಚ ನೀಡಿ ಸ್ವಾಗತ ಮಾಡುವ ಬದಲು ಆಯಾ ಜಯಂತಿಗಳಲ್ಲಿ ಆಯ ಮಹನೀಯರ ಜೀವನ ಚರಿತ್ರೆ ಕುರಿತ ಪುಸ್ತಕಗಳನ್ನು ನೀಡಿ ಸ್ವಾಗತ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಯಂತಿಗಳು ನಡೆಯುವ ಸ್ಥಳದ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ತಳಿರು ತೋರಣ, ಹಾಗೂ ಶಾಮಿಯಾನ ವ್ಯವಸ್ಥೆಯನ್ನು ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಮಾಡಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುದರ್ಶನ್ ಮಾತನಾಡಿ, ಜಯಂತಿಗಳ ಆಚರಣೆಗೆ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳು, ಮುಖಂಡರಿಗೆ ಆಹ್ವಾನ ನೀಡಲಾಗುವುದು. ಕಲಾಮಂದಿರದಲ್ಲಿ ಗೀತಾ ಗಾಯನ ಏರ್ಪಡಿಸಲಾಗುವುದು ಎಂದು ತಿಳಿಸಿದರು.