ಪಿರಿಯಾಪಟ್ಟಣಕ್ಕೆ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ತಾಲೂಕಿನ ವೀರಶೈವ ಮುಖಂಡರು ಸ್ವಾಗತ ಕೋರಿದರು. ಎಚ್.ಟಿ.ಪರಮೇಶ್, ಡಾ.ಶಿವಯೋಗ, ಪರಮಶಿವಯ್ಯ, ಸಿ.ಎಸ್.ಮಂಜುನಾಥ್ ಸ್ವಾಮಿ ಇದ್ದರು.
- ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ
- ತಾಲೂಕು ಅಧ್ಯಕ್ಷ ಎಚ್.ಟಿ.ಪರಮೇಶ್
ಪಿರಿಯಾಪಟ್ಟಣ: ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಸಮಾಜ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎಚ್.ಟಿ.ಪರಮೇಶ್ ತಿಳಿಸಿದರು.
ಪಟ್ಟಣಕ್ಕೆ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಸ್ವಾಗತ ಕೋರಿ ಮಾತನಾಡಿದರು. ಸುತ್ತೂರು ಜಾತ್ರಾ ಮಹೋತ್ಸವ 2026 ರ ಜ.15 ರಿಂದ ಜ.20 ರವರೆಗೆ ಮೈಸೂರಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಆರು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸ್ಪರ್ಧಾತ್ಮಕ ಕಾರ್ಯಕ್ರಮ ನಡೆಯಲಿದ್ದು, ಇದು ಕೇವಲ ಜಾತ್ರೆ ಆಗಿರದೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಮ್ಮೇಳನವಾಗಿದೆ ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಡಾ.ಶಿವಯೋಗ ಮಾತನಾಡಿ, ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಜನರಿಗೆ ಭಕ್ತಿಯೊಂದಿಗೆ ಜ್ಞಾನವೂ ಲಭಿಸಲಿದೆ. ಶರಣ ಸಂಸ್ಕೃತಿಯ ಅನಾವರಣದೊಂದಿಗೆ ಸಾಹಿತ್ಯ, ಕೃಷಿ, ನಾಟಕ ಮುಂತಾದ ವಿಚಾರಗಳ ಬಗ್ಗೆ ಜ್ಞಾನ ಅಭಿವೃದ್ಧಿವನ್ನು ಅಭಿವೃದ್ಧಿಪಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಜನರು ಈ ಜ್ಞಾನಾರ್ಜನೆಯನ್ನು ಪಡೆಯಬೇಕು ಎಂದು ತಿಳಿಸಿದರು.
ತಾಲೂಕು ವೀರಶೈವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ ಮಾತನಾಡಿ, ಜಾತ್ರಾ ಮಹೋತ್ಸವದ ಪ್ರಚಾರ ಪಿರಿಯಾಪಟ್ಟಣದಲ್ಲಿ ಎರಡು ದಿನಗಳ ನಡೆಯಲಿದೆ ಎಂದು ತಿಳಿಸಿದರು.
ವೀರಶೈವ ಮಹಾಸಭಾದ ತಾಲೂಕು ಮಾಜಿ ಅಧ್ಯಕ್ಷ ಸಿ.ಎಸ್.ಮಂಜುನಾಥ್ ಸ್ವಾಮಿ, ಪುರಸಭಾ ಮಾಜಿ ಸದಸ್ಯರಾದ ನಿರಂಜನ್, ಮಲ್ಲಿಕಾರ್ಜುನ್, ಮಹಾಸಭಾ ಮಾಜಿ ಕಾರ್ಯದರ್ಶಿ ಮುಖೇಶ್, ಯುವ ಘಟಕದ ಅಧ್ಯಕ್ಷ ಅಭಿ, ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಮುಖಂಡರಾದ ಶಿವಮೂರ್ತಿ, ಯುವರಾಜ್, ವೃಷಭೇಂದ್ರಪ್ಪ, ರಾವಂದೂರು ವಿಜಿ, ಪುಟ್ಟರಾಜು ಮತ್ತಿತರರಿದ್ದರು.