ಕೆ.ಎಸ್. ಶಿಲ್ಪಾ 
ಮೈಸೂರು

ಕಾಮನ್‌ವೆಲ್ತ್ ಕ್ರೀಡಾಕೂಟ ಪ್ರತಿನಿಧಿಸಲಿದ್ದಾರೆ ಮೈಸೂರಿನ ಶಿಲ್ಪಾ

ಪ್ರಮುಖ ಮುಖ್ಯಾಂಶಗಳು

  • ಅಥ್ಲೆಟಿಕ್ಸ್ ವಿಭಾಗಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಪ್ಯಾರಾ ಅಥ್ಲೀಟ್
ನಾಲ್ಕು ವರ್ಷದ ಬಾಲಕಿಯಾಗಿದ್ದಾಗ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಡಗಾಲನ್ನು ಕಳೆದುಕೊಂಡರೂ, ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಸಾಧನೆಯ ಶಿಖರದತ್ತ ಸಾಗಿದ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಕೆ.ಎಸ್. ಶಿಲ್ಪಾ ಇದೀಗ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.
ಜುಲೈ 23ರಿಂದ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗಕ್ಕೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಪ್ಯಾರಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಶಿಲ್ಪಾ ಪಾತ್ರರಾಗಿದ್ದಾರೆ.
ರೈತ ಶೈಲ ಹಾಗೂ ಗೃಹಿಣಿ ಶಾಂತಾ ದಂಪತಿಯ ಪುತ್ರಿಯಾಗಿರುವ ಶಿಲ್ಪಾ, ಗ್ರಾಮೀಣ ಹಿನ್ನೆಲೆಯಲ್ಲೇ ಬೆಳೆದವರು. ಸ್ನಾತಕೋತ್ತರ ಪದವಿ ಹಾಗೂ ಬಿಎಡ್ ಪೂರ್ಣಗೊಳಿಸಿ ಮೈಸೂರಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ, ಸ್ನೇಹಿತೆ ಗೀತಾ ಅವರ ಪ್ರೇರಣೆಯಿಂದ 2019ರಲ್ಲಿ ಪ್ಯಾರಾ ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟರು.
ಆರಂಭದಲ್ಲಿ ಸಿಟ್ಟಿಂಗ್ ವಾಲಿಬಾಲ್‌ನಲ್ಲಿ ನಾಲ್ಕು ಬಾರಿ ಕರ್ನಾಟಕ ತಂಡವನ್ನು ಮುನ್ನಡೆಸಿದ ಶಿಲ್ಪಾ, ಬಳಿಕ ಕೋಚ್ ರಾಘವೇಂದ್ರ ಅವರ ಸಲಹೆಯಂತೆ ವೈಯಕ್ತಿಕ ಸ್ಪರ್ಧೆಗಳಾದ ಶಾಟ್‌ಪಟ್ ಮತ್ತು ಡಿಸ್ಕಸ್ ಥ್ರೋ ಕಡೆ ಗಮನ ಹರಿಸಿದರು. 2024ರಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ ಎಸ್.ಡಿ.ಈಶಾನ್ ಅವರಿಂದ ತರಬೇತಿ ಪಡೆದ ಅವರು, ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನಾರ್ಹ ಸಾಧನೆ ಮಾಡಿದರು.
2023ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಡಿಸ್ಕಸ್‌ನಲ್ಲಿ ಬೆಳ್ಳಿ ಹಾಗೂ ಜಾವೆಲಿನ್‌ನಲ್ಲಿ ಕಂಚಿನ ಪದಕ ಗೆದ್ದರು. 2024ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಶಾಟ್‌ಪಟ್‌ನಲ್ಲಿ ಪದಕ ಜಯಿಸಿದ ಅವರು, 2025ರಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಶಾಟ್‌ಪಟ್‌ನಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟದಲ್ಲಿ ಮಿಂಚಿದರು. ಈ ಸಾಧನೆಯ ಬಳಿಕ ಶಿಕ್ಷಕಿಯ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಪೂರ್ಣಾವಧಿ ಕ್ರೀಡೆಯನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು.
ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದರೂ ಆರ್ಥಿಕ ಸಂಕಷ್ಟ ಮಾತ್ರ ಅವರನ್ನು ಇನ್ನೂ ಕಾಡುತ್ತಿದೆ. ಯಾವುದೇ ಕಾರ್ಪೊರೇಟ್ ಸಂಸ್ಥೆಯ ಪ್ರಾಯೋಜಕತ್ವ ಇಲ್ಲದ ಕಾರಣ, ಅತ್ಯಾಧುನಿಕ ಕೃತಕ ಕಾಲಿನ ಬದಲು ಸಾಮಾನ್ಯ ಜೈಪುರ್ ಫುಟ್ ಬಳಸಿ ತರಬೇತಿ ಹಾಗೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
‘ಅಪಘಾತದ ಬಳಿಕ ನಮ್ಮ ಕುಟುಂಬಕ್ಕೆ ಭಾರಿ ಆಘಾತವಾಗಿತ್ತು. ಆದರೆ ನನ್ನ ಪಾಲಕರು ಎಂದಿಗೂ ನನ್ನನ್ನು ವಿಭಿನ್ನವಾಗಿ ನೋಡಲಿಲ್ಲ. ಆತ್ಮವಿಶ್ವಾಸದಿಂದ ಎಲ್ಲವನ್ನೂ ಪ್ರಯತ್ನಿಸು ಎಂದು ಸದಾ ಪ್ರೋತ್ಸಾಹಿಸಿದರು. ಭಾರತವನ್ನು ಪ್ರತಿನಿಧಿಸುವುದು ನನ್ನ ಹೆಮ್ಮೆ. ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ನನ್ನ ಗುರಿ. ಪ್ಯಾರಾ ಕ್ರೀಡಾಪಟುಗಳಿಗೆ ಕಾರ್ಪೊರೇಟ್ ಸಂಸ್ಥೆಗಳು ಹೆಚ್ಚಿನ ಬೆಂಬಲ ನೀಡಬೇಕು’ ಎನ್ನುತ್ತಾರೆ ಶಿಲ್ಪಾ.