ಮೇಲೂರಿನಲ್ಲಿ ಶ್ರೀ ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. 
ಮೈಸೂರು

ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಮೇಲೂರು ಗ್ರಾಮ
  • ವಿಶೇಷ ಪೂಜಾ ಕಾರ್ಯಕ್ರಮ
ಸಾಲಿಗ್ರಾಮ: ತಾಲೂಕಿನ ಮೇಲೂರು ಗ್ರಾಮದಲ್ಲಿ ಶ್ರೀ ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಶಿವರಾತ್ರಿ ಹಬ್ಬದ ಪ್ರಯುಕ್ತ ಭಾನುವಾರ ರಾತ್ರಿ ಶಂಭುಲಿಂಗೇಶ್ವರ ಸ್ಮರಣೆಯೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಹಿರಿಯ ಅರ್ಚಕರಿಂದ ಹೋಮ ಹವನ ನಡೆಯಿತು. ತಾಲೂಕು ಸೇರಿದಂತೆ ವಿವಿಧ ತಾಲೂಕು ಮತ್ತು ಜಿಲ್ಲೆಗಳಿಂದ ಭಕ್ತರು ಆಗಮಿಸಿ ಶಿವನ ಸ್ಮರಣೆಯಲ್ಲಿ ಭಾಗವಹಿಸಿದ್ದರು.
ಜಾತ್ರಾ ಮಹೋತ್ಸವ, ಬಸವೇಶ್ವರ ಹಾಗೂ ಆಂಜನೇಯಸ್ವಾಮಿ ಮೆರವಣಿಗೆ ಉತ್ಸವದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಗ್ರಾಮದ ಹೊರ ವಲಯದಲ್ಲಿರುವ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಬಸವೇಶ್ವರರನ್ನು ತಂದು ವಿಶೇಷ ಪೂಜೆ ಸಲ್ಲಿಸಿ ಜಾತ್ರೆ ಮುಗಿದ ಬಳಿಕ ಮತ್ತೆ ಗ್ರಾಮದಲ್ಲಿ ಮೆರವಣಿಗೆ ಮಾಡಿ ನಂತರ ಬಸವೇಶ್ವರ ದೇವಸ್ಥಾನದಲ್ಲಿ ಇಡಲಾಯಿತು.
ಅನ್ನದಾಸೋಹ: ಮೇಲೂರು, ಕುರುಬಳ್ಳಿ, ಬಾಚಳ್ಳಿ, ಎಲೆಮುದ್ದನಹಳ್ಳಿ, ಸಂಕನಹಳ್ಳಿ ಸೇರಿದಂತೆ ಗ್ರಾಮಗಳ ಯಜಮಾನರು ಮಾಡಿರುವ ಸಮಿತಿಯಿಂದ ಪೂಜಾ ಕಾರ್ಯಕ್ರಮ ಮತ್ತು ಅನ್ನದಾಸೋಹ ನಡೆಯಿತು. ಸಮಿತಿ ಅಧ್ಯಕ್ಷ ತುಳಸಿರಾಮೇಗೌಡ ಸೇರಿದಂತೆ ಇತರ ಸದಸ್ಯರು ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿದ್ದರು. ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಾಗಿತ್ತು ಎಂದು ಸಮಿತಿ ಅಧ್ಯಕ್ಷರು ತಿಳಿಸಿದರು. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಜಾತ್ರೆ ಯಶಸ್ಸಿಗೆ ಸಹಕಾರ ನೀಡಿದರು.