ಮೈಸೂರಿನ ಶ್ರೀನಟರಾಜ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶಾಮನೂರು ಶಿವಶಂಕಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಶ್ರೀ ಚಿದಾನಂದ ಸ್ವಾಮೀಜಿ, ಅಂಶಿ ಪ್ರಸನ್ನಕುಮಾರ್, ಡಾ.ಎಂ. ಶಾರದಾ, ಡಾ.ಮಹೇಶ್ ದಳಪತಿ, ವಿ.ಡಿ. ಸುನೀತಾರಾಣಿ, ಡಾ.ಎಂ. ರಾಜೇಶ್, ಪವಿತ್ರಾ, ದಿಲೀಪ್, ಪದ್ಮಾ, ಮಮತಾ, ವಿ. ಪ್ರದೀಪ್ ಇದ್ದರು.  
ಮೈಸೂರು

ಶಾಮನೂರು ಶಿವಶಂಕರಪ್ಪ ಕೊಡುಗೈ ದಾನಿ: ಪ್ರೊ.ಎಸ್. ಶಿವರಾಜಪ್ಪ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಶಾಮನೂರು ಶಿವಶಂಕರಪ್ಪ ಅವರು ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ
  • ದಾವಣಗೆರೆ ವಿಶ್ವವಿದ್ಯಾಲಯ ಆರಂಭಿಸಲು 35 ಎಕರೆ ಜಮೀನನ್ನು ದಾನ ಮಾಡಿದ್ದರು
ಮೈಸೂರು: ಶಾಮನೂರು ಶಿವಶಂಕರಪ್ಪ ಅವರು ಕೊಡುಗೈ ದಾನಿಯಾಗಿದ್ದು, ಜಾತ್ಯತೀತವಾಗಿ ಎಲ್ಲ ವರ್ಗದ ಜನರಿಗೆ ಸಹಾಯ ಮಾಡಿದರು ಎಂದು ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ  ಸ್ಮರಿಸಿದರು.
ನಗರದ ಶ್ರೀ ನಟರಾಜ ಶಿಕ್ಷಣ ಸಂಸ್ಥೆಗಳ ವತಿಯಿಂದ  ಆಯೋಜಿಸಿದ್ದ ಶಾಮನೂರು ಶಿವಶಂಕಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮನ್ನು ಅಗಲಿದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ.  ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಜತೆ ಜತೆಗೆ ಮಾಡಿದ ಸಮಾಜ ಸೇವೆಯೂ ಇದಕ್ಕೆ ಕಾರಣ. ‘ಶರಣರಿಗೆ ಮರಣವೇ ಮಹಾನವಮಿ’ ಎನ್ನುವಂತೆ  ಶಾಮನೂರು ಅವರ ನಿಧನರಾದಾಗ ಜಾತ್ಯತೀತ, ಪಕ್ಷಾತೀತವಾಗಿ ಬಂದ ಜನಸಾಗರವನ್ನು ನೋಡಿದಾಗ ಇದು ನಿಜ ಎನಿಸುತ್ತದೆ ಎಂದರು. 
ದಾವಣಗೆರೆಯಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ, ಸುತ್ತಮುತ್ತಲಿನ ಜನರಿಗೆ ಶಿಕ್ಷಣ ನೀಡುವುದರ ಜತೆ ಜತೆಗೆ ಆಸ್ಪತ್ರೆಗಳನ್ನು ಆರಂಭಿಸುವ ಮೂಲಕ ಆರೋಗ್ಯ ಸೇವೆಯನ್ನು ಒದಗಿಸಿದರು. ದಾವಣಗೆರೆ ವಿಶ್ವವಿದ್ಯಾಲಯ ಆರಂಭಿಸಲು 35 ಎಕರೆ ಜಮೀನನ್ನು ದಾನವಾಗಿ ನೀಡಿದರು. ಹಾಗೆ ನೋಡಿದರೆ ಆ ವಿವಿಗೆ ಶಾಮನೂರು ಶಿವಶಂಕರಪ್ಪ ವಿಶ್ವವಿದ್ಯಾನಿಲಯ ಎಂದೇ ಹೆಸರಿಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಶಾಮನೂರು ಅವರು ಕೇವಲ ದಾವಣಗೆರೆಗೆ ಸೀಮಿತವಾಗಿರಲಿಲ್ಲ. ಚಿತ್ರದುರ್ಗ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲೂ ಜನರಿಗೆ ನೆರವಾದವರು. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ  ಸಂಗಮದಲ್ಲಿ ಮಹದೇವ ತಾತರ ಗದ್ದುಗೆ ನವೀಕರಣ, ಕ್ಷೇತ್ರದಲ್ಲಿ ಭವನ ನಿರ್ಮಾಣಕ್ಕೆ ಕಾರಣರಾದರು ಎಂದು ಅವರು ಹೇಳಿದರು.
ಇದಲ್ಲದೇ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಸುದೀರ್ಘಕಾಲ ಕೆಲಸ ಮಾಡಿ, ಹತ್ತು ಹಲವು ಮಹತ್ಕಾರ್ಯಗಳನ್ನು ಮಾಡಿದರು. ಸುತ್ತೂರು ಶ್ರೀಕ್ಷೇತ್ರ ಸೇರಿದಂತೆ ಮೈಸೂರು ಭಾಗದಲ್ಲಿಯೂ ತಮ್ಮ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ ಅವರು ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ಬಿ.ಇಡಿ ಕಾಲೇಜಿನ ಡಾ.ಮಹೇಶ್ ದಳಪತಿ, ಪಿಯು ಕಾಲೇಜಿನ ವಿ.ಡಿ. ಸುನೀತಾರಾಣಿ, ನರ್ಸಿಂಗ್ ಕಾಲೇಜಿನ ಡಾ.ಎಂ. ರಾಜೇಶ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಪವಿತ್ರಾ, ದಿಲೀಪ್, ಪದ್ಮಾ, ಮಮತಾ, ವಿ. ಪ್ರದೀಪ್ ಇದ್ದರು. ಚೂಡಾಮಣಿ ವಚನ ಗಾಯನ ನಡೆಸಿಕೊಟ್ಟರು. ಬಿ. ರಾಧಾ ಕಾರ್ಯಕ್ರಮ ನಿರೂಪಿಸಿದರು.
-----------
** ಪೋಟೋ ಇದೆ-----ಸೆಲೆಕ್ಟ್----4
==============