ಹುಣಸೂರಿನ ಬಾಲಕಿಯರ ಕಾಲೇಜಿನಲ್ಲಿ ನಡೆದ ಸೇವಾದಳ ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜವನ್ನು ಅರಳಿಸುವ ಮೂಲಕ ಸೇವಾದಳದ ಜಿಲ್ಲಾ ಸಮಿತಿಯ ಅಧ್ಯಕ್ಷ ಎನ್.ನರಸಿಂಹಸ್ವಾಮಿ ಹಾಗೂ ಗಣ್ಯರು ಉದ್ಘಾಟಿಸಿದರು. ಜಗದೀಶ್ ಸುಧಾ ಇದ್ದರು. 
ಮೈಸೂರು

ಸ್ವಾತಂತ್ರ್ಯ ಚಳವಳಿಗೆ ಸೇವಾದಳ ಕೊಡುಗೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಸಮಿತಿಯ ಅಧ್ಯಕ್ಷ ಎನ್. ನರಸಿಂಹಸ್ವಾಮಿ ಹೇಳಿಕೆ
ಹುಣಸೂರು: ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ ನಾಯಕತ್ವದ ಸ್ವಾತಂತ್ರ್ಯ ಚಳವಳಿಯಲ್ಲಿ ಸಾಕಷ್ಟು ಕೊಡುಗೆ ನೀಡಿದ ಸೇವಾದಳ ಸ್ವತಂತ್ರ ಭಾರತಕ್ಕೂ ಸಾಕಷ್ಟು ಕೊಡುಗೆಯನ್ನು ನೀಡುತ್ತಲೇ ಬಂದಿದೆ ಎಂದು ಭಾರತ ಸೇವಾದಳದ ಮೈಸೂರು ಜಿಲ್ಲಾ ಸಮಿತಿಯ ಅಧ್ಯಕ್ಷ ಎನ್. ನರಸಿಂಹಸ್ವಾಮಿ ತಿಳಿಸಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಕಾಲೇಜಿನ ಕಸ್ತೂರಬಾ ಘಟಕದ ಸಹಭಾಗಿತ್ವದಲ್ಲಿ ನಡೆದ ಸೇವಾದಳ ಸಪ್ತಾಹದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಸೇವಾದಳವು ಶಾಲಾ, ಕಾಲೇಜು ಮಕ್ಕಳಲ್ಲಿ ಸೇವಾ ಮನೋಭಾವನೆಯನ್ನು ಉದ್ದೀಪಿಸುವ ಕಾರ್ಯದಲ್ಲಿ ಅನುದಿನವೂ ತನ್ನ ಕಾರ್ಯವನ್ನು ಇಂದಿಗೂ ಮುಂದುವರಿಸುತ್ತಿದೆ. ವಿದ್ಯಾರ್ಥಿಗಳು ಓದಿನೊಂದಿಗೆ ಸೇವಾದಳದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎಂದರು.
ರಾಜ್ಯ ಸೇವಾದಳದ ಸಂಪನ್ಮೂಲ ವ್ಯಕ್ತಿ ಡಿ.ಆರ್.ಶೇಷಾಚಲ ಮಾತನಾಡಿ, ಮಕ್ಕಳು ಮೊಬೈಲ್‌ನಲ್ಲಿ ಕಳೆದು ಹೋಗಿರುತ್ತಾರೆಂಬ ಸಾಮಾನ್ಯ ದೂರು ಇದೆ. ಆದರೆ ಸೂಕ್ತ ತರಬೇತಿ ನೀಡಿದರೆ, ಮಕ್ಕಳು ಸೇವಾಮನೋಭಾವದಿಂದ ಸಮಾಜಮುಖಿ ಕಾರ್ಯಗಳನ್ನು ಮಾಡಬಲ್ಲರು ಎನ್ನುವುದಕ್ಕೆ ಭಾರತ ಸೇವಾದಳ ಸ್ವಯಂಸೇವಕರೆ ಉತ್ತಮ ಉದಾಹರಣೆ. ಇತ್ತೀಚೆಗೆ ನಡೆದ ದಸರಾ ಶಿಬಿರದಲ್ಲಿ ಇದೇ ಕಾಲೇಜಿನ ಮೂವತ್ತು ಮಕ್ಕಳು ಮೊಬೈಲ್ ಇಲ್ಲದೆ ಒಂದು ವಾರ ಪೂರ್ಣ ಕಳೆದರು. ಸೇವಾದಳದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇದಕ್ಕೆ ಸೇವಾದಳ ವೇದಿಕೆ ಕಲ್ಪಿಸಲಿದೆ ಎಂದರು.
ಭಾರತ ಸೇವಾದಳದ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬೀರಿಹುಂಡಿ ಬಸವಣ್ಣ, ಮೈಸೂರು ವಲಯ ಸಂಘಟಕ ಕೆ.ಈರಯ್ಯ ತಾಲೂಕು ಸಮಿತಿ ಅಧ್ಯಕ್ಷ ಬಿಳಿಕೆರೆ ಪ್ರಸನ್ನ, ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎ.ರಾಮೇಗೌಡ, ಸೇವಾದಳದ ಕಸ್ತೂರಬಾ ಘಟಕದ ಶಾಖಾಧಿಕಾರಿ ಆರ್.ಸದಾನಂದ ತಾಲೂಕು ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ಎಸ್.ರಮೇಶ್ ಮಾತನಾಡಿದರು.
ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್, ಕಲ್ಕುಣಿಕೆ ಸರಕಾರಿ ಹಿ.ಪ್ರಾ. ಶಾಲೆಯ ದೈಹಿಕ ಶಿಕ್ಷಕಿ ಸುಧಾ ಇದ್ದರು. ಸಮಾಜಸೇವಕ ಕೆ.ಎಚ್.ವೀರಭದ್ರಪ್ಪರನ್ನು ಗೌರವಿಸಲಾಯಿತು. ಬಾಲಕಿಯರ ಕಾಲೇಜು ಮತ್ತು ಕಲ್ಕುಣಿಕೆ ಶಾಲೆಯ ಸೇವಾದಳದ ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಡಿದ್ದರು.