- ಸಾರ್ವಜನಿಕ ವಲಯದ ಆಗ್ರಹ
- ಪಾರಂಪರಿಕ ಕಟ್ಟಡ, ಪ್ರವಾಸಿ ತಾಣಗಳ ಸಂರಕ್ಷಣೆಗೆ ಕ್ರಮ
ವಿಶ್ವವಿಖಾತ ಮೈಸೂರು ಅರಮನೆ ಅಂಗಳದಲ್ಲಿ ಅಗ್ನಿಶಾಮಕ ದಳ (ಫೈರ್ ಸ್ಕ್ವಾಡ್) ಸ್ಥಾಪಿಸಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಆಗ್ರಾದ ತಾಜ್‌ಮಹಲ್ ನಂತರ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡಿರುವ ಪ್ರವಾಸಿ ತಾಣಗಳಲ್ಲಿ ಮೈಸೂರಿನ ಅರಮನೆಯೂ ಒಂದು. ದೀಪದ ಬೆಳಕಿನಿಂದ ಕಂಗೊಳಿಸುವ ಅರಮನೆ ಸೊಬಗನ್ನು ನೋಡಲು ನಿತ್ಯ ದೇಶ- ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಸಾವಿರಾರು ಬಲ್ಬ್‌ಗಳನ್ನು ಅರಮನೆ ಆಕರ್ಷಣೆಗೆ ಅಳವಡಿಸಲಾಗಿರುವುದು ವಿಶೇಷ.
ಈ ಹಿಂದೆ 1897ರಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮರದ ಅರಮನೆ ಸಂಪೂರ್ಣ ಸುಟ್ಟು ಹೋಗಿತ್ತು. ರಾಜ್ಯದಲ್ಲಿ ಇತ್ತೀಚಿಗೆ ಅಗ್ನಿ ಅವಘಡಗಳು ಹೆಚ್ಚಾಗುತ್ತಿವೆ. ಇದಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಅಗ್ನಿ ಅವಘಡ ತಡೆಯುವ ಉದ್ದೇಶದಿಂದ ಅರಮನೆ ಆವರಣದಲ್ಲಿ ಫೈರ್ ಸ್ಕ್ವಾಡ್ ಸ್ಥಾಪಿಸಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಜತೆಗೆ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟದಲ್ಲಿ ಬೇಸಿಗೆ ಸಮಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಬೆಟ್ಟದ ಸಮೀಪ ಉಪ ಅಗ್ನಿಶಾಮಕ ಠಾಣೆಯೊಂದನ್ನು ಸ್ಥಾಪಿಸಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.
ಏನೆಲ್ಲಾ ಪ್ರಯೋಜನ?:
ಮೈಸೂರು ಅರಮನೆ ಸುತ್ತ ಕಾಡಾ ಕಚೇರಿ, ಜಗನ್ಮೋಹನ ಅರಮನೆ, ಮೈಸೂರು ಮೃಗಾಲಯ, ರೇಸ್ ಕೋರ್ಸ್, ಕೆ.ಆರ್.ಆಸ್ಪತ್ರೆ, ಆಯುರ್ವೇದ ಕಾಲೇಜು, ಕಾರಂಜಿಕೆರೆ ಸೇರಿದಂತೆ ಹಲವು ಪಾರಂಪರಿಕ ಕಟ್ಟಡ ಹಾಗೂ ಪ್ರವಾಸಿ ತಾಣಗಳಿವೆ. ಹಾಗಾಗಿ, ಅರಮನೆ ಒಳಗೆ ಫೈರ್ ಸ್ಕ್ವಾಡ್ ಸ್ಥಾಪನೆ ಆದರೆ ಅಗ್ನಿ ಅವಘಡ ಈ ಭಾಗದಲ್ಲಿ ಎಲ್ಲೇ ನಡೆದರೂ ತಕ್ಷಣ ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಲು ಅನುಕೂಲವಾಗಲಿದೆ.
ಏನಿದು ಫೈರ್ ಸ್ಕ್ವಾಡ್:
ರಾಜ್ಯದ ಪ್ರಮುಖ ಪ್ರವಾಸಿ ತಾಣ, ಕೇಂದ್ರ ಕಚೇರಿ ಹಾಗೂ ಗಣ್ಯರ ಮನೆ ಸಮೀಪ ಆಕಸ್ಮಿಕವಾಗಿ ಉಂಟಾಗುವ ಅಗ್ನಿ ಅವಘಡಗಳನ್ನು ತಡೆಯಲು ಅಗ್ನಿ ಶಾಮಕ ದಳ ಸ್ಥಾಪನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ವಿಧಾನಸೌಧ, ಹೈಕೋರ್ಟ್, ಕೆಜಿಐಡಿ ಬಿಲ್ಡಿಂಗ್, ಸಿಎಂ ನಿವಾಸ ಸೇರಿದಂತೆ 6ರಿಂದ 7 ಕಡೆ ಫೈರ್ ಸ್ಕ್ವಾಡ್ ಇದೆ. ಇಲ್ಲಿ ಏನಾದರೂ ಅವಘಡಗಳನ್ನು ಅಥವಾ ಶಾರ್ಟ್ ಸರ್ಕ್ಯೂಟ್ ಉಂಟಾದರೆ ತಕ್ಷಣ ಈ ತಂಡ ಸ್ಥಳಕ್ಕೆ ಧಾವಿಸಿ ಅಗ್ನಿ ಅನಾಹುತಗಳನ್ನು ತಪ್ಪಿಸುತ್ತದೆ.
ಟೇಕ್ ಆಫ್ ಆಗಲಿಲ್ಲ
ಅರಮನೆ ಆವರಣದಲ್ಲಿ ಅಗ್ನಿಶಾಮಕ ದಳ ಬೇಕು ಎಂಬ ಪ್ರಸ್ತಾವನೆ ಈ ಹಿಂದಿನ ಜಿಲ್ಲಾಧಿಕಾರಿ ಶಿಖಾ ಅವರ ಅವಧಿಯಲ್ಲಿ ಆಗಿತ್ತು. ನಂತರ ಅದು ಟೇಕ್ ಆಫ್ ಆಗಲಿಲ್ಲ. ಅರಮನೆ ಆಡಳಿತ ಮಂಡಳಿಯಿಂದ ಪ್ರಸ್ತಾವನೆ ಬಂದರೆ ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತಾವನೆ ಸಲ್ಲಿಕೆಯಾಗಿದೆ:
ಚಾಮುಂಡಿಬೆಟ್ಟ ಕುರುಚಲು ಕಾಡಿನಂತಿದ್ದು, ನೂರಾರು ವನ್ಯಜೀವಿಗಳು, ಹಕ್ಕಿಪಕ್ಷಿ ಗಳು ವಾಸಿಸುತ್ತಿವೆ. ಬೇಸಿಗೆಯಲ್ಲಿ ಕಾಡ್ಗಿಚ್ಚು ಉಂಟಾದರೆ ಗಿಡಮರ-ಪ್ರಾಣಿಪಕ್ಷಿಗಳು ಸುಟ್ಟು ಕರಕಲಾಗುತ್ತವೆ. ಈ ನಿಟ್ಟಿನಲ್ಲಿ ಬೆಟ್ಟಕ್ಕೊಂದು ಉಪ ಅಗ್ನಿಶಾಮಕ ಠಾಣೆ ಬೇಕಿದೆ. ಈ ಸಂಬಂಧ ಚಾಮುಂಡಿಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಟ್ಟದ ಸಮೀಪ ಉಪ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕೆಂಬ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಮರದ ಅರಮನೆ ಸುಟ್ಟುಹೋಗಿದ್ಯಾಕೆ?
1897ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರಿ ಮದುವೆ ಸಮಯದಲ್ಲಿ ಹೋಮ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮರದ ಅರಮನೆ ಸುಟ್ಟು ಹೋಯಿತು. ಆಗ ಮೈಸೂರಿನಲ್ಲಿ ಅಗ್ನಿಶಾಮಕ ಠಾಣೆ ಇರಲಿಲ್ಲ. ಮದ್ರಾಸ್‌ನಿಂದ ಅಗ್ನಿಶಾಮಕ ದಳ ಬರುವಷ್ಟರಲ್ಲಿ ಮರದ ಅರಮನೆ ಸುಟ್ಟು ಹೋಗಿತ್ತು. ಹೀಗಾಗಿ 1898ರಲ್ಲಿ ರಾಜ್ಯದ ಮೊದಲ ಅಗ್ನಿಶಾಮಕ ಠಾಣೆಯನ್ನು ಮೈಸೂರಿನ ಸರಸ್ವತಿಪುರಂನಲ್ಲಿ ಸ್ಥಾಪನೆ ಮಾಡಲಾಯಿತು. ನಂತರ ಈಗಿರುವ ಹೊಸ ಅರಮನೆ ಕಟ್ಟಲಾಯಿತು.
2017ರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅರಮನೆಯ ಪ್ರವೇಶ ದ್ವಾರದ ಬಳಿಯ ಎಟಿಎಂ ಕೌಂಟರ್‌ನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಆದರೆ, ಆ ಸಂದರ್ಭ ಯಾವುದೇ ಹಾನಿಯಾಗಿರಲಿಲ್ಲ.
ಅರಮನೆಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುವುದರಿಂದ ಫೈರ್ ಸ್ಕ್ವಾಡ್ ಅಗತ್ಯವಿದೆ. ಚಾಮುಂಡಿಬೆಟ್ಟದಲ್ಲಿ ಉಪ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಸ್ತಾವನೆ ಸಲ್ಲಿಸಲಾಗಿದೆ.