ಗಣ್ಯರು ರಾಜೇಂದ್ರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಶಂಕರ ದೇವನೂರು, ಪ್ರೊ.ಬಿ.ವಿ.ಸಾಂಬಶಿವಯ್ಯ, ಎಚ್.ಪಿ.ಮಹಾದೇವಸ್ವಾಮಿ ಇದ್ದರು.
- ಸಂಸ್ಕೃತಿ ಚಿಂತಕ ಶಂಕರ ದೇವನೂರು ಹೇಳಿಕೆ
- ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ
ರಾಜೇಂದ್ರ ಶ್ರೀಗಳು ಬಾಲ್ಯದಿಂದಲೂ ವೈರಾಗ್ಯದ ಅಂತಃಕರಣವನ್ನು ರೂಢಿಸಿಕೊಂಡಿದ್ದರು ಎಂದು ಸಂಸ್ಕೃತಿ ಚಿಂತಕ ಶಂಕರ ದೇವನೂರು ಹೇಳಿದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 111ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಗಳು ತಮ್ಮ ಹನ್ನೆರಡನೇ ವಯಸ್ಸಿಗೆ ಹಲವು ಸಾಮಾಜಿಕ ಜವಾಬ್ದಾರಿಗಳನ್ನು ಹೊತ್ತಿದ್ದರು. ಹಸಿವು, ಬಡತನ, ಮೌಢ್ಯ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ಅವರು ಮಠಾಧಿಪತಿಗಳಾದರು. ಆಗ ಅವರ ಕಣ್ಣಮುಂದೆ ಇದ್ದದ್ದು ಮಕ್ಕಳ ಹೊಟ್ಟೆಯ ಮತ್ತು ಜ್ಞಾನದ ಹಸಿವನ್ನು ನೀಗಿಸುವ ಗುರಿ. ಅದನ್ನು ಅವರು ಹಲವು ನೆಲೆಗಳಲ್ಲಿ ಶ್ರಮಿಸಿ ಓದುವ ಮಕ್ಕಳ ದಾರಿದೀಪವಾದರು ಎಂದರು.
ಶ್ರೀಗಳವರ ದೂರದೃಷ್ಟಿತ್ವ ಅಪೂರ್ವವಾದದ್ದು. ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಸದಾ ಕಾಲ ಸ್ಮರಣೀಯವಾದದ್ದು. ಪರಂಪರೆಯ ಪ್ರಜ್ಞೆ ವಿಸ್ತಾರವಾಗಿತ್ತು. ಆದ್ದರಿಂದ ಅವರ ಅಂತಃಕರಣ ಮಾತೃತ್ವದ ಶಕ್ತಿಯಿಂದ ರೂಪುಗೊಂಡಿತ್ತು. ಅಜ್ಞಾನದ ಕತ್ತಲೆಯನ್ನು ಶಿಕ್ಷಣ ಎಂಬ ಜ್ಯೋತಿಯಿಂದ ಬೆಳಗಬೇಕು ಎಂದು ಅರಿತಿದ್ದರು. ಅದಕ್ಕೆ ಪೂರ್ವದಲ್ಲಿ ಶಿಕ್ಷಣ ಪಡೆಯುವ ಜತೆಗೆ ಅನ್ನದ ಹಸಿವನ್ನು ನೀಗಿಸುವ ಸವಾಲು ಅವರಲ್ಲಿತ್ತು ಎಂದರು.
ಶ್ರೀಗಳು ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದರು. ಸಂಪತ್ತಿಗಿಂತ ಸೇವೆ ಮುಖ್ಯ, ಅಧಿಕಾರಕ್ಕಿಂತ ಅಂತಃಕರಣ ಮುಖ್ಯ ಎಂಬುದನ್ನು ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡಿದ್ದರು. ಎಲ್ಲವನ್ನು ಒಳಗು ಮಾಡಿಕೊಂಡು ತಾರತಮ್ಯ ರಹಿತ ಸಮಾಜವನ್ನು ಕಟ್ಟುವ ಬಯಕೆ ಅವರಿಗಿತ್ತು. ಅದಕ್ಕಾಗಿ ಎಲ್ಲರಿಗೂ ಮುಕ್ತವಾದ ಅವಕಾಶವನ್ನು ನೀಡಿ ಏಳಿಗೆಗೆ ಪ್ರೋತ್ಸಾಹಿಸಿದರು. ಈ ಮೂಲಕ ಶರಣ ಪರಂಪರೆಯಲ್ಲಿ ಶಿವಚಿಂತಕ, ಶಿವಭಕ್ತ, ಶಿವಜ್ಞಾನಿ ಎಂಬುದಕ್ಕೆ ಪ್ರತೀಕವಾದರು ಎಂದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ರಾಜೇಂದ್ರ ಶ್ರೀಗಳವರು ಈ ನಾಡನ್ನು ಉದ್ಧರಿಸುವುದಾಕ್ಕಾಗಿಯೇ ಉದಯಿಸಿದರು. ಧರ್ಮ ಎಂದರೆ ಜನಸೇವೆ ಎಂಬುದು ಶ್ರೀಗಳ ಜೀವನದ ದೊಡ್ಡ ಸಂದೇಶವಾಗಿತ್ತು. ಬಡತನ, ಅಜ್ಞಾನ ಮತ್ತು ಅಸಮಾನತೆಗಳು ಸಮಾಜದ ಪ್ರಗತಿಗೆ ಅಡ್ಡಿಯಾಗಿದೆ ಎಂದು ಅರಿತಿದ್ದರು ಎಂದರು.
ಅದಕ್ಕಾಗಿಯೇ ಧಾರ್ಮಿಕ ಸೇವೆಯನ್ನು ಶಿಕ್ಷಣ, ಅನ್ನ ದಾಸೋಹ ಮತ್ತು ಆರೋಗ್ಯ ಸೇವೆಯೊಂದಿಗೆ ಜೋಡಿಸಿದರು. ಅಕ್ಷರ ದಾಸೋಹ ಸಮಾಜಕ್ಕೆ ನೀಡಿದ ಅವರ ವಿಶೇಷ ಕೊಡುಗೆ. ಜನಸಾಮಾನ್ಯರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಜ್ಞಾನದ ಕೊರತೆಯೇ ಕಾರಣ ಎಂಬುದನ್ನು ಗುರುತಿಸಿದ್ದರು. ಅದಕ್ಕಾಗಿ ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ವಿಸ್ತರಿಸಿದರು ಎಂದರು.
ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಪಿ.ಮಹಾದೇವಸ್ವಾಮಿ ಇತರರಿದ್ದರು.
ಇದೇ ವೇಳೆ ರಾಜೇಂದ್ರ ಶ್ರೀಗಳವರ ಸ್ಮರಣಾರ್ಥಆಯೋಜಿಸಿದ್ದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.