ತಿಲಕ್‌ನಗರದ ಹೆಲೆನ್ ಕೆಲ್ಲರ್ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶನಿವಾರ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಆಯೋಜಿಸಿದ್ದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಡಾ.ಸುಜಾತಾ ಅಕ್ಕಿ, ಇಂದಿರಾ ನಾಯರ್, ಆರ್.ರಾಘವೇಂದ್ರ, ಮೀರಜ್, ಎಚ್.ಎಸ್.ಮುರುಳಿ , ರಂಗನಾಥ್, ತಾರಾಮಣಿ, ಎ.ಸುರೇಶ್, ಡಾ.ಶಾಂಭವಿಸ್ವಾಮಿ, ಕನ್ಯಾ ಇತರರು ಇದ್ದರು.
- ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರವಾದದ್ದು
- ಶೇಷ ಅಗತ್ಯವುಳ್ಳ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರನ್ನು ತಯಾರಿಸುವುದು ನಿಜಕ್ಕೂ ಪವಿತ್ರ ಕಾರ್ಯ
ಮೈಸೂರು:ಗುರುವಂದನೆ ಎನ್ನುವುದು ಕೇವಲ ಸತ್ಕಾರವಲ್ಲ, ಅದು ಜ್ಞಾನದೀಪ ಹಚ್ಚಿದ ಗುರುಗಳಿಗೆ ಸಲ್ಲಿಸುವ ಶ್ರದ್ಧೆ, ಪ್ರೀತಿಯ ನಮನ ಎಂದು ನಾಟಕಕಾರ್ತಿ ಹಾಗೂ ಪ್ರಾಧ್ಯಾಪಕಿ ಡಾ.ಸುಜಾತಾ ಅಕ್ಕಿ ಹೇಳಿದರು.
ತಿಲಕ್‌ನಗರದ ಹೆಲೆನ್ ಕೆಲ್ಲರ್ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶನಿವಾರ 2001ರಿಂದ 2026ರವರೆಗಿನ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಆಯೋಜಿಸಿದ್ದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದ್ದು, ಸಾವಿತ್ರಿಬಾಯಿ ಫುಲೆ ಆರಂಭಿಸಿದ ಹೋರಾಟ ಮತ್ತು ತ್ಯಾಗವೇ ಇಂದು ಮಹಿಳಾ ಶಿಕ್ಷಣ ಕ್ರಾಂತಿಗೆ ಭದ್ರ ಅಡಿಗಲ್ಲಾಯಿತು. ವಿಶೇಷ ಮಕ್ಕಳ ಶಿಕ್ಷಣ ಕ್ಷೇತ್ರದ ಸೇವೆಯ ಮಹತ್ವದ್ದಾಗಿದೆ ಎಂದರು.
ಹಿರಿಯ ರಂಗಭೂಮಿ ಕಲಾವಿದೆ ಹಾಗೂ ವಿಶೇಷ ಮಕ್ಕಳ ಶಿಕ್ಷಕಿ ಇಂದಿರಾ ನಾಯರ್ ಮಾತನಾಡಿ, 2001ರಲ್ಲಿ ಈ ತರಬೇತಿ ಕೇಂದ್ರ ಆರಂಭವಾದ ದಿನಗಳು ಇನ್ನೂ ಮನಸಿನಲ್ಲಿ ಹಸಿರಾಗಿವೆ. ಅಂದಿನ ಶಿಕ್ಷಕರ ಸಮರ್ಪಣೆ, ಶಿಸ್ತು ಮತ್ತು ಪರಿಶ್ರಮ ಇಂದಿನ ತಲೆಮಾರಿನ ಶಿಕ್ಷಕರಿಗೆ ಮಾದರಿಯಾಗಬೇಕು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ರಾಘವೇಂದ್ರ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರನ್ನು ತಯಾರಿಸುವುದು ನಿಜಕ್ಕೂ ಪವಿತ್ರ ಕಾರ್ಯ. ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸ್ಮರಿಸಿ ಗೌರವಿಸುತ್ತಿರುವುದು ಸಮಾಜಕ್ಕೆ ಉತ್ತಮ ಮಾದರಿ ಎಂದು ಶ್ಲಾಘಿಸಿದರು.
ಎರಡೂವರೆ ದಶಕಗಳಿಂದ ಸಾವಿರಾರು ವಿಶೇಷ ಶಿಕ್ಷಕರನ್ನು ರೂಪಿಸಿದ 28ಕ್ಕೂ ಹೆಚ್ಚು ಹಿರಿಯ ಹಾಗೂ ಪ್ರಸ್ತುತ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದ ಆಶಾ ವಿ.ಹಿರೇಮಠ, ಎನ್.ಆರ್.ವಿಜಯ್, ಎಸ್.ಗಿರೀಶ್, ಅನ್ನಪೂರ್ಣಾ, ಡಾ.ಸಂಗೀತಾ, ಮಂಜುಳಾ ಪಾಟೀಲ್, ಸಿಸ್ಟರ್ ಲೀನಾ, ಎ.ಸುರೇಶ್ ಇತರರನ್ನು ಗೌರವಿಸಲಾಯಿತು.
ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ 2001ರಿಂದ 2026ರವರೆಗಿನ ವಿವಿಧ ಸಾಲಿನ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ತರಬೇತಿ ದಿನಗಳ ಸ್ಮತಿಗಳನ್ನು ಹಂಚಿಕೊಂಡರು. ತಮ್ಮ ವೃತ್ತಿ ಜೀವನದ ಅನುಭವಗಳು, ವಿಶೇಷ ಮಕ್ಕಳ ಶಿಕ್ಷಣ ಕ್ಷೇತ್ರದ ಸವಾಲುಗಳು ಮತ್ತು ಸಾಧನೆಗಳ ಕುರಿತು ಆತ್ಮೀಯ ಚರ್ಚೆಗಳು ನಡೆಯುವ ಮೂಲಕ ಕಾರ್ಯಕ್ರಮ ಮತ್ತಷ್ಟು ಅರ್ಥಪೂರ್ಣವಾಯಿತು.
ಅಂಧ ಮಕ್ಕಳ ಶಾಲೆಯ ಅಧೀಕ್ಷಕ ಕೆ.ಎಸ್.ಸತೀಶ್, ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಅಧೀಕ್ಷಕ ಮೀರಜ್, ಎಚ್.ಎಸ್.ಮುರುಳಿ, ರಂಗನಾಥ್, ತಾರಾಮಣಿ, ಎ.ಸುರೇಶ್, ಡಾ.ಶಾಂಭವಿಸ್ವಾಮಿ, ಕನ್ಯಾ ಇತರರು ಇದ್ದರು.