ಕೆಎಸ್‌ಆರ್‌ಟಿಸಿಯ ಎಲೆಕ್ಟ್ರಿಕ್ ಬಸ್
ಮೈಸೂರು: ಪರಿಸರ ಸ್ನೇಹಿ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಸುತ್ತಿದ್ದಾರೆ. ಕೇವಲ ಜನರು ಮಾತ್ರವಲ್ಲದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೂಡ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದೆ. ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ ಪ್ರತ್ಯೇಕ ಡಿಪೋ ನಿರ್ಮಾಣಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ.
ಮುಂದಿನ 30 ರಿಂದ 50 ವರ್ಷಗಳಲ್ಲಿ ಡಿಸೇಲ್ ಚಾಲಿತ ವಾಹನಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿ ಪರಿಸರ ಸ್ನೇಹಿ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವ ಉದ್ದೇಶ ಹೊಂದಲಾಗಿದೆ. ಇದಕೋಸ್ಕರ ನಗರಕ್ಕೆ ಪ್ರತ್ಯೇಕ ಎಲೆಕ್ಟ್ರಿಕ್ ಬಸ್ ಡಿಪೋ ಮಂಜೂ ರಾಗಿದ್ದು, ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆ ಇದೆ.
ನಗರದ ಬನ್ನಿಮಂಟಪದಲ್ಲಿ ಸಬ್ ಅರ್ಬನ್ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿ ಭರದಿಂದ ಸಾಗಿರುವ ಬೆನ್ನಲ್ಲೇ ನೂರು ಎಲೆಕ್ಟ್ರಿಕ್ ಬಸ್‌ಗಳನ್ನು ನಿಲುಗಡೆ ಮಾಡುವಂತಹ ಡಿಪೋ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮೇ ತಿಂಗಳಾಂತ್ಯಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಹಣಕಾಸು ಒಪ್ಪಿಗೆ (ಫೈನಾನ್ಶಿಯಲ್ ಬಿಡ್) ದೊರೆಯಲಿದೆ.
ಬೆಂಗಳೂರು ನಗರದ ನಂತರ ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮಾಂತರ ವಿಭಾಗಗಳಿವೆ. ಈಗಾಗಲೇ ಮೈಸೂರು ನಗರ ವಿಭಾಗಕ್ಕೆ ಮೂರು ಡಿಪೋಗಳು ಸೇರಿವೆ. ಬನ್ನಿಮಂಟಪದಲ್ಲೇ ಮತ್ತೊಂದು ಬಸ್ ಡಿಪೋ ಪ್ರಾರಂಭಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿರುವಾಗಲೇ ರಾಜ್ಯ ಸರ್ಕಾರ ಎಲೆಕ್ಟ್ರಿಕ್ ಬಸ್ ಡಿಪೋಗೆ ಅನುಮೋದನೆ ನೀಡಿರುವುದು ಗಮನಾರ್ಹವಾಗಿದೆ.
‘ಶಕ್ತಿ ಯೋಜನೆ’ ಜಾರಿಯಾದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಾಗಲೇ ಬಸ್‌ಗಳ ಕೊರತೆಯೂ ಕಾಣಿಸಿಕೊಂಡಿದೆ. ಮೈಸೂರು ನಗರ ವ್ಯಾಪ್ತಿಗೆ ರಾಜ್ಯ ಸರ್ಕಾರದಿಂದ ನೂರು ಹೊಸ ಬಸ್‌ಗಳನ್ನು ಮಂಜೂರು ಮಾಡಿದ್ದು, ಈ ಬಸ್‌ಗಳು ಕಾರ್ಯಾಚರಣೆ ಶುರು ಮಾಡುವ ಹೊತ್ತಿಗೆ 75 ಬಸ್‌ಗಳ ಅವಧಿ ಮುಗಿದಿದ್ದರಿಂದ ಗುಜರಿಗೆ ಸೇರಲಿವೆ. ಹಾಗಾಗಿ, 25 ಬಸ್‌ಗಳು ಉಳಿಯಲಿದ್ದು, ಮತ್ತೆ ನೂರು ಬಸ್‌ಗಳನ್ನು ಖರೀದಿಸಲು ಬೇಡಿಕೆ ಸಲ್ಲಿಸಲಾಗಿದೆ. ಈಗ ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆ ಮಾಡಿದರೆ ಐಟಿ-ಬಿಟಿ ಸಂಸ್ಥೆಗಳು, ಪ್ರತಿಷ್ಠಿತ ಕಾಲೇಜುಗಳ ಮಾರ್ಗ, ಚಾಮುಂಡಿಬೆಟ್ಟದ ಮಾರ್ಗಕ್ಕೆ ಕಳುಹಿಸಲು ಅನುಕೂಲವಾಗಲಿದೆ ಎಂಬುದು ಅಧಿಕಾರಿಗಳ ನಿರೀಕ್ಷೆಯಾಗಿದೆ.
ಎಲ್ಲಿ ನಿರ್ಮಾಣ?: ಬನ್ನಿಮಂಟಪದ ಘಟಕ ಒಂದರ ಬಳಿ ಇರುವ 4.30 ಎಕರೆ ಪ್ರದೇಶದಲ್ಲಿ ನೂತನ ಎಲೆಕ್ಟ್ರಿಕ್ ಬಸ್ ಡಿಪೋ ಆರಂಭಿಸಲಾಗುತ್ತದೆ. 100 ಬಸ್‌ಗಳನ್ನು ನಿಲುಗಡೆ ಮಾಡುವಂತಹ ಡಿಪೋದಲ್ಲಿ ಏಕಕಾಲದಲ್ಲಿ 25 ಬಸ್‌ಗಳಿಗೆ ಚಾರ್ಜಿಂಗ್ ಪಾಯಿಂಟ್‌ಗಳು, ಚಾರ್ಜಿಂಗ್ ಸ್ಟೇಷನ್, ಚಾರ್ಜಿಂಗ್ ಎಕ್ವಿಪ್‌ಮೆಂಟ್ ಸ್ಟೋರ್, ಮೇಲ್ವಿಚಾರಕರು ಮತ್ತು ಇತರೆ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿಗಳು, ಭದ್ರತಾ ಸಿಬ್ಬಂದಿ ಕೊಠಡಿಗಳು, ಘಟಕದ ಉಸ್ತುವಾರಿ ಅಧಿಕಾರಿಗೆ ಪ್ರತ್ಯೇಕವಾದ ಕೊಠಡಿ ನಿರ್ಮಾಣವಾಗಲಿದೆ.
ಮೈಸೂರು ನಗರದಲ್ಲಿ ಎಲೆಕ್ಟ್ರಿಕ್ ಬಸ್ ಡಿಪೋ ನಿರ್ಮಾಣವಾದ ಮೇಲೆ ನೂರು ಹೊಸ ಬಸ್‌ಗಳನ್ನು ಒದಗಿಸಲಾಗುತ್ತದೆ. ಈ ಬಸ್‌ಗಳು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಕಾರ್ಯಾಚರಣೆ ಮಾಡಲಾಗುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನಿಗದಿಪಡಿಸುವ ಪ್ರಯಾಣ ದರವನ್ನು ಪ್ರಯಾಣಿಕರಿಂದ ಪಡೆದರೂ ನಿರ್ವಹಣೆಯು ಸಂಪೂರ್ಣವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಜಿಸಿಸಿ)ದಲ್ಲಿ ನಡೆಯಲಿದೆ.
ಪ್ರಯೋಜನವೇನು?: ಎಲೆಕ್ಟ್ರಿಕ್ ಬಸ್‌ಗಳ ಬಳಕೆಯಿಂದ ಹಲವಾರು ಪ್ರಯೋಜನಗಳು ಇವೆ. ಎಲೆಕ್ಟ್ರಿಕ್ ಬಸ್‌ಗಳು ಡೀಸೆಲ್ ಬಸ್‌ಗಳಂತೆ ಹೊಗೆ ಬಿಡುವುದಿಲ್ಲ. ಇದರಿಂದ ವಾಯು ಮಾಲೀನ್ಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ತಗ್ಗುತ್ತದೆ. ನಗರಗಳಲ್ಲಿ ಗಾಳಿ ಗುಣಮಟ್ಟ ಸುಧಾರಣೆ ಆಗುತ್ತದೆ. ಉಸಿರಾಟ ಸಂಬಂಧಿ ರೋಗಗಳ ಅಪಾಯ ಕಡಿಮೆ, ಶಬ್ದ ಮಾಲಿನ್ಯ ಕಡಿಮೆ ಆಗುತ್ತದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಒದಗಿಸುತ್ತದೆ. ಇಂಧನ ವೆಚ್ಚ ಕಡಿಮೆ (ವಿದ್ಯುತ್ ವೆಚ್ಚ ಸಾಮಾನ್ಯವಾಗಿ ಡೀಸೆಲ್‌ಗಿಂತ ಕಡಿಮೆ)ಯಾಗುತ್ತದೆ. ದೀರ್ಘಾವಧಿಯಲ್ಲಿ ಸರ್ಕಾರ ಮತ್ತು ಸಾರಿಗೆ ಸಂಸ್ಥೆಗಳಿಗೆ ಹಣ ಉಳಿತಾಯವಾಗುತ್ತದೆ.
ನಗರಕ್ಕೆ ಪ್ರತ್ಯೇಕ ಎಲೆಕ್ಟ್ರಿಕ್ ಬಸ್ ಡಿಪೋ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆತ್ತಿದೆ. ಮೇ ತಿಂಗಳಾಂತ್ಯಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಲಿದೆ. ಮುಂದಿನ ಜುಲೈ-ಆಗಸ್ಟ್ ತಿಂಗಳಲ್ಲಿ ಕಾಮಗಾರಿ ಆರಂಭಿಸಲು ಅಗತ್ಯ ಸಿದ್ಧತೆ ಮಾಡಲಾಗಿದೆ. ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ ಹೆಚ್ಚಳದಿಂದ ಪರಿಸರಕ್ಕೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿದಂತೆ ಆಗುತ್ತದೆ.
ಎಚ್.ಟಿ. ವೀರೇಶ್, ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ