.ಹುಣಸೂರಿನಲ್ಲಿ ಬಾಬು ಜಗಜೀವನರಾಂ ಜಯಂತಿ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಹರೀಶ್‌ಗೌಡ ಮಾತನಾಡಿದರು. ನಿಂಗರಾಜ ಮಲ್ಲಾಡಿ, ಜೆ.ಮಂಜುನಾಥ್, ಕೆ.ಹೊಂಗಯ್ಯ, ಎಂ.ಬಿ.ಸುರೇಂದ್ರ, ಬಸವಲಿಂಗಯ್ಯ ಇತರರಿದ್ದಾರೆ. 
ಮೈಸೂರು

ಬಾಬೂಜಿ, ಅಂಬೇಡ್ಕರ್ ಜಯಂತಿ ಪ್ರತ್ಯೇಕ ಆಚರಣೆ

ಪ್ರಮುಖ ಮುಖ್ಯಾಂಶಗಳು

  • Babuji, Ambedkar Jayanti
ಹುಣಸೂರು: ಏ.5ರಂದು ಡಾ.ಬಾಬುಜಗಜೀವನರಾಮ್ ಜಯಂತಿ ಹಾಗೂ ಏ.14ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಷ್ಟ್ರೀಯ ಹಬ್ಬಗಳ ಸಮಿತಿಯ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಬಾಬು ಜಗಜೀವನರಾಮ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮುಖಂಡರ ಸಲಹೆ ಆಲಿಸಿದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ನಿಮ್ಮ ಅಭಿಪ್ರಾಯದಂತೆ ಇಬ್ಬರು ಮಹನೀಯರ ಜಯಂತಿಯನ್ನು ಪ್ರತ್ಯೇಕವಾಗಿ ಆಚರಿಸೋಣ, ಜಯಂತಿಗೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳುವಂತೆ ತಹಸೀಲ್ದಾರ್ ಮಂಜುನಾಥರಿಗೆ ಸೂಚಿಸಿ, ತಾವು ಎಲ್ಲ ರೀತಿಯ ಸಹಕಾರ ನೀಡುತ್ತೇನೆಂದರು.
ಮುಖಂಡ ಸತೀಶ್ ಸೇರಿದಂತೆ ಹಲವು ಮುಖಂಡರು ಮಾತನಾಡಿ, 15 ವರ್ಷಗಳಾದರೂ ಬಾಬು ಜಗಜೀವನರಾಮ್ ಭವನ ಪೂರ್ಣಗೊಂಡಿಲ್ಲ. ಮುಂದಿನ ಜಯಂತಿ ಒಳಗಾದರೂ ಪೂರ್ಣಗೊಳಿಸಬೇಕೆಂಬ ಒತ್ತಾಯಿಸಿದರು. ಈಗಾಗಲೆ ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ ಅವರು 20 ಲಕ್ಷ ರೂ. ಅನುದಾನ ನೀಡಿದ್ದಾರೆ. ಇನ್ನು 25 ಲಕ್ಷ ರೂ. ಅವಶ್ಯವಿದ್ದು, ಈ ಬಗ್ಗೆ ಸದನದಲ್ಲಿ ಮಾಡಿದ ಪ್ರಸ್ತಾಪಕ್ಕೆ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.
ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿದರು. ಸಭೆಯಲ್ಲಿ ಪೌರಾಯುಕ್ತೆ ಎಂ.ಮಾನಸಾ, ತಾಪಂ ಇಒ ಹೊಂಗಯ್ಯ, ಸಮಾಜ ಕಲ್ಯಾಣಾಧಿಕಾರಿ ಭರತ್‌ಕುಮಾರ್, ಬಿಇಒ ಮಹದೇವ, ಸಿಡಿಪಿಒ ಹರೀಶ್, ಎಇಇಗಳಾದ ಜಗದೀಶ್, ಯತೀಶ್, ಟಿಎಚ್‌ಒ ಕಚೇರಿಯ ರಾಜೇಶ್ವರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕು ಜೆಡಿಎಸ್ ಅಧ್ಯಕ್ಷ ಸುರೇಂದ್ರ, ಮುಖಂಡರಾದ ಬಸವಲಿಂಗಯ್ಯ, ಪರಶುರಾಮ, ಮಹೇಶ್, ಶೇಖರ್, ಮೋಹನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.