ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ವಿಶ್ವ ಹಿರಿಯ ನಾಗರಿಕರ ದಿನದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ್ದ ’ಸೀನಿಯರ್ ಸಿಟಿಜನ್ ಪ್ರೀಮಿಯರ್ ಲೀಗ್ 2026’ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಹಿರಿಯರು. 
ಮೈಸೂರು

ಕ್ರೀಡಾಕೂಟದಲ್ಲಿ ಮಿಂದೆದ್ದ ಹಿರಿಯ ನಾಗರಿಕರು

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಜೀವನದ ಬೇಸರದಿಂದ ಹೊರಬಂದ ಹಿರಿಯರು, ಕ್ರೀಡಾಂಗಣದಲ್ಲಿ ಬಾಲ್ಯದ ದಿನಗಳಿಗೆ ಮರಳಿದರು.
  • ಆರೋಗ್ಯಕರವಾಗಿರಲು ಹಾಗೂ ಖುಷಿಯಾಗಿರಲು ವಯಸ್ಸು ಅಡ್ಡಿಯಾಗುವುದಿಲ್ಲ
ಮೈಸೂರು:ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ವಿಶ್ವ ಹಿರಿಯ ನಾಗರಿಕರ ದಿನದ ಅಂಗವಾಗಿ ನಗರದ ಮಣಿಪಾಲ್ ಆಸ್ಪತ್ರೆ ಆಯೋಜಿಸಿದ್ದ ‘ಸೀನಿಯರ್ ಸಿಟಿಜನ್ ಪ್ರೀಮಿಯರ್ ಲೀಗ್ 2026’ ಕ್ರೀಡಾಕೂಟದಲ್ಲಿ 150ಕ್ಕೂ ಹೆಚ್ಚು ಹಿರಿಯರು ಅತ್ಯಂತ ಉತ್ಸಾಹ, ಲವಲವಿಕೆಯಿಂದ ಪಾಲ್ಗೊಂಡು ಗಮನ ಸೆಳೆದರು.
ನಗರದ ಡೀ ಸ್ಪೋರ್ಟ್ಸ್ ಮೈದಾನದಲ್ಲಿ ಆಯೋಜಿಸಿದ್ದ ಈ ವಿನೂತನ ಕ್ರೀಡಾಹಬ್ಬ, ಹಿರಿಯರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜತೆಗೆ ಜನರೊಂದಿಗೆ ಬೆರೆಯುವಿಕೆಯ ಮಹತ್ವವನ್ನು ಸಾರಿತು.
ಬಾಲ್ ಪಾಸಿಂಗ್, ನಿಂಬೆಹಣ್ಣು - ಚಮಚ ಓಟ, ಪೆನಾಲ್ಟಿ ಫುಟ್ಬಾಲ್ ಕಿಕ್, ವಿಕೆಟ್ ಬೌಲಿಂಗ್ ಹಾಗೂ ಮ್ಯೂಸಿಕಲ್ ಚೇರ್‌ನಂತಹ ಮನರಂಜನಾ ಆಟಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸುವ ಮೂಲಕ ಪರಸ್ಪರ ನಗು, ಸಂತೋಷವನ್ನು ಹಂಚಿಕೊಂಡರು.
ನಿವೃತ್ತ ಜೀವನದ ಬೇಸರದಿಂದ ಹೊರಬಂದ ಹಿರಿಯರು, ಕ್ರೀಡಾಂಗಣದಲ್ಲಿ ಬಾಲ್ಯದ ದಿನಗಳಿಗೆ ಮರಳಿದರು. ಆರೋಗ್ಯಕರವಾಗಿರಲು ಹಾಗೂ ಖುಷಿಯಾಗಿರಲು ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ಕಾರ್ಯಕ್ರಮ ತೋರಿಸಿಕೊಟ್ಟಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ಮಣಿಪಾಲ್ ಹಾಸ್ಪಿಟಲ್ಸ್‌ನ ಆರ್ಥೋಪೆಡಿಕ್ಸ್ ವಿಭಾಗದ ಸೀನಿಯರ್ ಕನ್ಸ್‌ಲ್ಟೆಂಟ್ ಡಾ. ಅಜಯ್ ಹೆಗ್ಡೆ, ವಯಸ್ಸಾದ ಮೇಲೂ ಯಾರ ಹಂಗಿಲ್ಲದೆ ಸುಲಭವಾಗಿ ಓಡಾಡಿಕೊಂಡಿರಲು ಪ್ರತಿನಿತ್ಯದ ದೈಹಿಕ ಚಟುವಟಿಕೆಯೇ ಅತ್ಯುತ್ತಮ ಸೂತ್ರ. ಮೂಳೆಗಳ ಗಟ್ಟಿತನ, ಮಾಂಸಖಂಡಗಳ ಬಲ ಮತ್ತು ಕೀಲುಗಳ ಆರೋಗ್ಯ ಕಾಪಾಡಿಕೊಳ್ಳಲು ಸದಾ ಚಟುವಟಿಕೆಯಿಂದಿರಬೇಕು ಎಂದು ಹೇಳಿದರು.
ಪ್ರತಿದಿನದ ನಡಿಗೆ, ಸರಳ ವ್ಯಾಯಾಮಗಳು ಹಾಗೂ ಇಂತಹ ವಿನೋದಭರಿತ ಆಟಗಳು ಹಿರಿಯರಿಗೆ ಹೊಸ ಚೈತನ್ಯ ನೀಡುತ್ತವೆ. ಗಾಯಗಳಾಗದಂತೆ ಫಿಟ್‌ನೆಸ್ ಕಾಯ್ದುಕೊಳ್ಳಲು ಜಾಣತನದಿಂದ ತರಬೇತಿ ಪಡೆಯುವುದೇ ಮುಖ್ಯ ಎಂದು ತಿಳಿಸಿದರು.
ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುಲರ್ ಸರ್ಜರಿ ವಿಭಾಗದ ಸೀನಿಯರ್ ಕನ್ಸಲ್‌ಟೆಂಟ್ ಡಾ.ಉಪೇಂದ್ರ ಶೆಣೈ ಮಾತನಾಡಿ, ವಯಸ್ಸಾದಂತೆ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಜಿಮ್‌ಗೆ ಹೋಗುವುದು ಅಥವಾ ಕಠಿಣ ವ್ಯಾಯಾಮಗಳೇ ಬೇಕಿಲ್ಲ. ಪ್ರತಿದಿನದ ನಡಿಗೆ ಹಾಗೂ ದೇಹಕ್ಕೆ ಆಯಾಸವಾಗದಂತಹ ಮಿತವಾದ ಚಟುವಟಿಕೆಗಳು ಹೃದಯವನ್ನು ಸದೃಢವಾಗಿರಿಸುತ್ತವೆ ಎಂದು ಸಲಹೆ ನೀಡಿದರು.
ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಸೀನಿಯರ್ ಕನ್ಸ್‌ಲ್ಟೆಂಟ್ ಡಾ.ಸಿ.ಬಿ.ಕೇಶವಮೂರ್ತಿ, ಹಿರಿಯರಿಗೆ ಆರೋಗ್ಯ ಸಲಹೆಗಳನ್ನು ನೀಡಿದರು. ಆಸ್ಪತ್ರೆಯ ನಿರ್ದೇಶಕ ಬಿ.ಜೆ.ಸಂದೀಪ್ ಪಟೇಲ್ ಮಾತನಾಡಿ, ಕಾಯಿಲೆ ಬಂದಾಗ ಚಿಕಿತ್ಸೆ ನೀಡುವುದಕ್ಕಷ್ಟೇ ಆಸ್ಪತ್ರೆಯ ಕೆಲಸ ಸೀಮಿತವಾಗಿಲ್ಲ. ಸಮಾಜದಲ್ಲಿ ಆರೋಗ್ಯಕರ ಜೀವನಶೈಲಿ ಬೆಳೆಸುವುದು ನಮ್ಮ ಉದ್ದೇಶ ಎಂದರು.