ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನದ ಅಂಗವಾಗಿ ನಂಜನಗೂಡಿನಲ್ಲಿ ಶುಕ್ರವಾರ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಧೀಶ ಡಿ. ಕಮಲಾಕ್ಷ ಅವರು ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಎಸ್.ಶ್ರುತಿ, ಎಂ.ಎ.ಸರಿತಾಕುಮಾರಿ, ಕೃತಿಕಾ ಪಿ.ಪವಾರ್, ರಾಜಣ್ಣ, ವೈ.ಆರ್.ಅಂಬಿಕಾ ಇದ್ದರು.
ನಂಜನಗೂಡು: ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ. ತಾಲೂಕು ಪಂಚಾಯಿತಿ, ತಾಲೂಕು ಕಾರ್ಮಿಕ ಇಲಾಖೆ, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ನಂಜನಗೂಡು ಸಹಯೋಗದಲ್ಲಿ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನದ ಅಂಗವಾಗಿ ಶುಕ್ರವಾರ ಜಾಗೃತಿ ಜಾಥಾ ನಡೆಸಲಾಯಿತು.
ಹಿರಿಯ ಸಿವಿಲ್ ನ್ಯಾಯಧೀಶ ಡಿ.ಕಮಲಾಕ್ಷ ಅವರು ಹಸಿರು ಬಾವುಟ ತೋರಿಸುವ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಇದಕ್ಕೂ ಮೊದಲು ಬಾಲಕಾರ್ಮಿಕರನ್ನು ಕೆಲಸಕ್ಕೆ ಸೇರಿಕೊಳ್ಳಲುವುದಿಲ್ಲ ಮತ್ತು ಬಾಲಕಾರ್ಮಿಕರಿಗೆ ಶಾಲೆಗೆ ಕಳುಹಿಸಿ ಕೊಡುತ್ತೇವೆ ಎಂದು ನ್ಯಾಯಾಲಯದ ಆವರಣದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಜಾಥಾವು ನ್ಯಾಯಲಯದ ಅವರಣದಿಂದ ಮೈಸೂರು-ಊಟಿ ಮುಖ್ಯರಸ್ತೆಯಲ್ಲಿ ಸಾಗಿ ಚಿಂತಾಮಣಿ ಗಣಪತಿ ವೃತ್ತದಿಂದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಅಂತ್ಯಗೊಂಡಿತು. ಜಾಥಾದಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನ್ಯಾಯಾಧೀಶ ಡಿ.ಕಮಲಾಕ್ಷ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ದೇಶದ ನಾಳಿನ ಉನ್ನತ ಪ್ರಜೆಗಳು. ಹುಟ್ಟಿನಿಂದ 6 ವರ್ಷದಿಂದ 15 ವರ್ಷದವರೆಗೆ ಮಕ್ಕಳಿದೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕೆಂಬುದು ಸಂವಿಧಾನದಲ್ಲಿ ಉಲ್ಲೇಖವಾಗಿದೆ. ಸರ್ಕಾರವೂ ಇದನ್ನೇ ಹೇಳುತ್ತದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ದುಡಿಮೆಗೆ ಕಳುಹಿಸಿದರೆ ಅವರ ಮುಂದಿನ ಉಜ್ಜಲ ಭವಿಷ್ಯ ಹಾಳಾಗುತ್ತದೆ. ಒಳ್ಳೆಯ ಪ್ರಜೆಯನ್ನು ಕಳೆದುಕೊಂಡಂತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವ್ಯವಸಾಯ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಚಿಕ್ಕ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ಬಾಲಕಾರ್ಮಿಕ ಪದ್ಧತಿ ಅಧಿಕವಾಗುತ್ತಿದೆ, ಕಡಿಮೆ ಖರ್ಚಿನಲ್ಲಿ ಅಧಿಕ ವೇಳೆ ಕೆಲಸ ಮಾಡಿಸಿ ಕೊಳ್ಳಬಹುದು ಎಂಬುದು ಮಾಲೀಕರ ಆಲೋಚನೆ ಆಗಿರುತ್ತದೆ. ಮಕ್ಕಳ ಬಾಲ್ಯದ ಜೀವನವನ್ನು ಯಾರೂ ಕಸಿದುಕೊಳಬಾರದು. ಅದು ಅಮೂಲ್ಯವಾದ ಗಳಿಗೆ. ಬಾಲ್ಯದಲ್ಲಿ ಮಕ್ಕಳು ತಪ್ಪು ದಾರಿ ಹಿಡಿದರೆ ಅವರು ದೇಶಕ್ಕೆ ಧಾತುಕರಾಗಿ ಪರಿಣಮಿಸಬಹುದು. ಈ ಹಿನ್ನೆಲೆಯಲ್ಲಿ ಬಾಲಕಾರ್ಮಿಕರನ್ನು ತಡೆಗಟ್ಟುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರುತಿ, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಎ.ಸರಿತಾಕುಮಾರಿ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಕೃತಿಕಾ ಪವಾರ್, ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ, ವೈ.ಆರ್.ಅಂಬಿಕಾ ಇತರರಿದ್ದರು.