ಬೆಟ್ಟದಪುರ ಸಮೀಪದ ಬೆಕ್ಕರೆ ಗ್ರಾಮದ ಶ್ರೀ ದುರ್ಗಾ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟನೆ ಸಂದರ್ಭ ಆರೋಗ್ಯ ಇಲಾಖೆ ನಿರೀಕ್ಷಕ ಎಚ್.ಎಸ್ ರವಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ವಿನಾಯಕ, ಸಮನ್ವಯಾಧಿಕಾರಿ ಸವಿತಾ, ಒಕ್ಕೂಟದ ಅಧ್ಯಕ್ಷೆ ಅನಸೂಯಾ ಇತರರು ಇದ್ದರು. 
ಮೈಸೂರು

ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

ಎ. ಆರ್. ರಘುರಾಮ
ಬೆಟ್ಟದಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ
ಸಮೀಪದ ಬೆಕ್ಕರೆ ಗ್ರಾಮದ ಶ್ರೀದುರ್ಗಾ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತೀಚೆಗೆ ಸಂಭ್ರಮದಿಂದ ನೆರವೇರಿತು.
ಆರೋಗ್ಯ ಇಲಾಖೆ ನಿರೀಕ್ಷಕ ಎಚ್.ಎಸ್ ರವಿ ಈ ಸಂದರ್ಭ ಮಾತನಾಡಿ, ಕುಟುಂಬದ ಆರೋಗ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದರು. ದೈಹಿಕ ಆರೋಗ್ಯದೊಂದಿಗೆ ನಾವೆಲ್ಲರೂ ಮಾನಸಿಕ ಆರೋಗ್ಯ ಪಾಲನೆಗೂ ಒತ್ತು ನೀಡಬೇಕು. ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ವಹಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ವಿನಾಯಕ ಮಾತನಾಡಿ, ಮಕ್ಕಳ ಬಗ್ಗೆ ಪಾಲಕರು ಜಾಗೃತಿ ವಹಿಸಬೇಕು ಎಂದರು. ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಉಪ ಕಸುಬನ್ನಾಗಿ ಮಾಡಿಕೊಳ್ಳಬೇಕು. ಜ್ಞಾನ ಅಭಿವೃದ್ಧಿಯಾದರೆ ನಮ್ಮೆಲ್ಲರ ಸ್ಥಿತಿ ಇನ್ನೂ ಉತ್ತಮವಾಗಿರುತ್ತದೆ ಎಂದರು. ಪತ್ರಕರ್ತ ಬೆಕ್ಕರೆ ಸತೀಶ ಆರಾಧ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ವೇಳೆ ಕೇಂದ್ರದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ
ವಿತರಣೆ ಮಾಡಲಾಯಿತು.
ಕೇಂದ್ರದ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಸವಿತಾ, ಒಕ್ಕೂಟದ ಅಧ್ಯಕ್ಷೆ ಅನಸೂಯಾ, ಕಾರ್ಯದರ್ಶಿ ಮಾಲತಿ ಆರಾಧ್ಯ, ಉಪಾಧ್ಯಕ್ಷೆ ಮಂಜುಳಾ, ಸಂಘಟನಾ ಕಾರ್ಯದರ್ಶಿ ಉಷಾ, ಕೋಶಾಧಿಕಾರಿ ಮಣಿ, ಸೇವಾ ಪ್ರತಿನಿಧಿ ಜ್ಯೋತಿ ಇತರರು ಇದ್ದರು.