ಮೈಸೂರಿನ ನವಕರ್ನಾಟಕ ಪ್ರಕಾಶನದಲ್ಲಿ ಭಾನುವಾರ ಆಯೋಜಿಸಿದ್ದ ಕೃತಿ ಬಿಡುಗಡೆ ಸಮಾರಂಭದಲ್ಲಿ ಶಶಿಧರ ಡೋಂಗ್ರೆ, ಸಾಹಿತಿ ಕೊಳ್ಳೆಗಾಲ ಶರ್ಮಾ, ಜೆ.ಎಲ್. ಅನಿಲ್‌ಕುಮಾರ್, ಡಾ.ಸಿದ್ದನಗೌಡ ಪಾಟೀಲ ಇದ್ದರು.
ಮೈಸೂರು: ವಿಜ್ಞಾನ ಸಾಹಿತ್ಯ ರಚಿಸುವ ಸಂದರ್ಭ ಇತ್ತೀಚಿನ ವಿಜ್ಞಾನದ ಬೆಳವಣಿಗೆಯ ಅರಿವು ಅಗತ್ಯ ಎಂದು ಲೇಖಕ ಶಶಿಧರ ಡೋಂಗ್ರೆ ಹೇಳಿದರು.
ನಗರದ ನವಕರ್ನಾಟಕ ಪ್ರಕಾಶನ ವತಿಯಿಂದ ಸಂಸ್ಥೆಯ ಮಳೆಯಲ್ಲಿ ಭಾನುವಾರ ಜೆ.ಎಲ್. ಅನಿಲ್ ಕುಮಾರ್ ರಚನೆಯ ‘ಚಾರ್ಮಿಂಗ್ ಮೂವ್‌ಮೆಂಟ್ ವಿಥ್ ಸೈಂಟಿಸ್ಟ್’ , ಕೊಳ್ಳೆಗಾಲ ಶರ್ಮ ರಚನೆಯ ‘ಬೆರಗಿನ ಬಾಗಿಲು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ವಿಜ್ಞಾನ ಕ್ಷೇತ್ರದ ಬರವಣಿಗೆಗೆ ತನ್ನದೇ ಆದ ಪ್ರಾಮುಖ್ಯತೆ ಇದ್ದರೂ ಅದಕ್ಕೆ ಮನ್ನಣೆ ದೊರೆತಿಲ್ಲ ಎಂಬುದು ಬೇಸರದ ಸಂಗತಿ ಎಂದರು.
ಚಾರ್ಮಿಂಗ್ ಮೂವ್‌ಮೆಂಟ್ ವಿಥ್ ಸೈಂಟಿಸ್ಟ್ ಪುಸ್ತಕದಲ್ಲಿ ಒಳ್ಳೆಯ ಪದ ಪ್ರಯೋಗ, ವ್ಯಾಕರಣ ಬಳಕೆ ಚೆನ್ನಾಗಿದೆ. ಇಂಟರ್‌ನೆಟ್ ನಂತಹ ಯಾವುದೇ ಮಾಧ್ಯಮಗಳು ಇಲ್ಲದ 60 ವರ್ಷಗಳ ಹಿಂದೆ ವಿಜ್ಞಾನಿಗಳ ಕುರಿತು ಮಾಹಿತಿ ಕಲೆಹಾಕಿ ಅದಕ್ಕೆ 88 ಲೇಖನಗಳನ್ನು ಒಳಗೊಂಡ ಪುಸ್ತಕ ರೂಪ ನೀಡಿರುವುದು ನಿಜಕ್ಕೂ ಸೋಜಿಗ ಎಂದರು.
ಬೆರಗಿನ ಬಾಗಿಲು ಕೃತಿಯಲ್ಲಿ ‘ನಾಯಿ ಬುದ್ಧಿ’ ಕತೆ ರಸವತ್ತಾಗಿ ಮೂಡಿಬಂದಿದೆ. ಇಲ್ಲಿ ಕೇವಲ ವಿಜ್ಞಾನವಲ್ಲದೆ ಪ್ರೇಮ ವಿಚಾರವೂ ಇದೆ. ಪಾತರಗಿತ್ತಿ ಪಕ್ಕ ಮುರಿಯುತ್ತೇನೆ ಅಕ್ಕ ಎಂಬ ಕತೆೆಯಲ್ಲಿ ಅತ್ಯಂತ ಸಣ್ಣ ಡ್ರೋನ್‌ಗಳ ಕುರಿತ ಕತೆ ಅತ್ಯಂತ ಮನಮುಟ್ಟುವಂತೆ ರಚನೆಯಾಗಿದೆ ಎಂದು ಹೇಳಿದರು.
ರೀಜನಲ್ ಕಾಲೇಜ್ ಆಫ್ ಎಜಿಕೇಷನ್ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಎನ್. ಪ್ರಸಾದ್, ಸಾಹಿತಿ ಕೊಳ್ಳೆಗಾಲ ಶರ್ಮಾ, ಲೇಖಕ ಜೆ.ಎಲ್. ಅನಿಲ್‌ಕುಮಾರ್, ನವಕರ್ನಾಟಕ ಪ್ರಕಾಶನ ವ್ಯವಸ್ಥಾಪಕ ನಿರ್ದೇಶಕ ಡಾ.ಸಿದ್ದನಗೌಡ ಪಾಟೀಲ, ಮೆಸೂರು ಶಾಖಾ ವ್ಯವಸ್ಥಾಪಕ ಎಸ್.ಕೆ. ಸತ್ಯನಾರಾಯಣ ಹಾಗೂ ಇತರರು ಇದ್ದರು.