ವಿಜಯನಗರದ ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಪಿಯು ಕಾಲೇಜಿನಲ್ಲಿ ಆಯೋಜಿಸಿರುವ ವಿಜ್ಞಾನ ಮತ್ತು ಗಣಿತ ಎಕ್ಸ್‌ಪೋ-2025 ಅನ್ನು ಡಾ.ಎಸ್.ಭಾರ್ಗವ ಉದ್ಘಾಟಿಸಿದರು. ಪ್ರೊ.ಎನ್.ರಾಮಮೋಹನ್, ಡಾ.ಎಂ. ವಿ.ರೂಪಾ, ಪ್ರೊ.ಎಂ.ಎಸ್.ಕೆ ನರಹರಿ ಬಾಬು, ಎಂ.ಡಿ.ಗೋಪಿನಾಥ್ ಇತರರು ಇದ್ದರು. 
ಮೈಸೂರು

ರಾಷ್ಟ್ರದ ತಾಂತ್ರಿಕ ಬೆಳವಣಿಗೆಯಲ್ಲಿ ವಿಜ್ಞಾನ, ಗಣಿತ ಪಾತ್ರ ಹಿರಿದು

ಪ್ರಮುಖ ಮುಖ್ಯಾಂಶಗಳು

  • ವಿಜ್ಞಾನ, ತಂತ್ರಜ್ಞಾನದ ಜತೆಗೆ ಗಣಿತರ ಪಾತ್ರವೂ ದೊಡ್ಡದು
  • ಎರಡು ದಿನಗಳ ವಿಜ್ಞಾನ ಮತ್ತು ಗಣಿತ ಎಕ್ಸ್‌ಪೋ-2025
ಮೈಸೂರು: ರಾಷ್ಟ್ರದ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಯಲ್ಲಿ ವಿಜ್ಞಾನ  ಮತ್ತು ಗಣಿತದ ಪಾತ್ರ ಬಹುದೊಡ್ಡದು ಎಂದು ಬಿಎಆರ್‌ಸಿ ಮಾಜಿ ಪ್ರಧಾನ ವಿಜ್ಞಾನಿ ಪ್ರೊ.ಎನ್.ರಾಮಮೋಹನ್ ಹೇಳಿದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳು ಮತ್ತು ಕಾವೇರಿ ಚಾರಿಟಬಲ್ ಟ್ರಸ್ಟ್‌ನಿಂದ ಮೈಸೂರು ವಿಜ್ಞಾನ ಪ್ರತಿಷ್ಠಾನದಿಂದ ವಿಜಯನಗರದ ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿರುವ ಎರಡು ದಿನಗಳ ವಿಜ್ಞಾನ ಮತ್ತು ಗಣಿತ ಎಕ್ಸ್‌ಪೋ-2025 ಅನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ರಾಷ್ಟ್ರ ಅಭಿವೃದ್ಧಿ ಕಾಣಬೇಕಾದರೆ, ವಿಜ್ಞಾನ, ತಂತ್ರಜ್ಞಾನದ ಜತೆಗೆ ಗಣಿತರ ಪಾತ್ರವೂ ದೊಡ್ಡದು. ರಾಷ್ಟ್ರದ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಯಲ್ಲಿ ಇವುಗಳನ್ನು ಕಡೆಗಣಿಸುವಂತಿಲ್ಲ ಎಂದರು. 
ಮುಂದಿನ ಪೀಳಿಗೆಯ ಇಂಧನವಾಗಿ ಹೈಡ್ರೋಜನ್ ಬಳಕೆ ಬಗ್ಗೆ ಚಿಂತನೆಗಳು ನಡೆಯುತ್ತಿದೆ. ವಿದ್ಯಾರ್ಥಿಗಳು ಇತ್ತ ಗಮನ ಹರಿಸಬೇಕು. ಉದಯೋನ್ಮುಖ ಇಂಧನ ತಂತ್ರಜ್ಞಾನಗಳ ಬಗ್ಗೆ ಹಾಗೂ ನವೀಕೃತ ಸಂಶೋಧನೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು. 
ಮೈಸೂರು ವಿಶ್ವವಿದ್ಯಾಲಯದ ಗಣಿತ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಭಾರ್ಗವ ಅವರು ಗಣಿತ ಎಕ್ಸ್‌ಪೋವನ್ನು ಉದ್ಘಾಟಿಸಿ, ಗಣಿತಕ್ಕೆ ಶ್ರೀನಿವಾಸ ರಾಮಾನುಜನ್ ಮತ್ತು ಅವರ ಗುರು ಡಾ. ವೆಂಕಟಾಚಲ ಅಯ್ಯಂಗಾರ್ ಅವರ ಕೊಡುಗೆಯನ್ನು ಸ್ಮರಿಸಿದರು. 
ಇಸ್ರೋದ ಚಂದ್ರಯಾನ-3 ರೋವರ್ ತಂಡದ ವಿಜ್ಞಾನಿ ಡಾ.ಎಂ.ವಿ.ರೂಪಾ ಅವರು ಇಸ್ರೋದಲ್ಲಿ ಉಪಗ್ರಹಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ, ರಾಕೆಟ್ ತಂತ್ರಜ್ಞಾನ, ಉಪಗ್ರಹದ ತಯಾರಿಕೆ ಮತ್ತು ವಿವಿಧ ಉದ್ದೇಶಗಳಿಗಾಗಿ ಇರುವ ಉಪಗ್ರಹಗಳ ಕುರಿತು ವಿವರಿಸಿದರು.
ಉಪಗ್ರಹ ಉಡಾವಣೆಯ ತಂತ್ರಜ್ಞಾನದಲ್ಲಿ ಗಣಿತಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಮತ್ತು ಭೌತಶಾಸ್ತ್ರದ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. 
ಕೋಲಾರದ ಗಣಿತ ತಜ್ಞ ವಿ.ಎಸ್.ಎಸ್. ಶಾಸ್ತ್ರಿ, ಸಿಎಸ್‌ಆರ್ ಟಿಐ ವಿಶ್ರಾಂತ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ, ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳು ಅಧ್ಯಕ್ಷ ಪ್ರೊ.ಎಂ.ಎಸ್.ಕೆ ನರಹರಿ ಬಾಬು, ಕಾರ್ಯದರ್ಶಿ ಎಂ.ಡಿ. ಗೋಪಿನಾಥ್, ಉಪಾಧ್ಯಕ್ಷ ಎಸ್. ಬಾಲಾಜಿ, ಸಹ ಕಾರ್ಯದರ್ಶಿ ಕೆ.ಎನ್.ಪಣೀಶ್ ಇತರರು ಇದ್ದರು.