ಶಾಲಾ ಆರಂಭೋತ್ಸವ 
ಮೈಸೂರು

ಶಾಲೆಗಳ ಪುನರಾರಂಭ; ಮೇಳೈಸಿದ ಮಕ್ಕಳ ಕಲವರ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಎರಡು ತಿಂಗಳ ಬಳಿಕ ತರಗತಿಗೆ ಬಂದ ವಿದ್ಯಾರ್ಥಿಗಳು
  • ಶಾಲಾ ಆರಂಭೋತ್ಸವ
  • ಕೆಲವೆಡೆ ಎತ್ತಿನ ಗಾಡಿ, ತೆರೆದ ಜೀಪುಗಳಲ್ಲಿ, ಪೂರ್ಣಕುಂಭದೊಂದಿಗೂ ಮಕ್ಕಳಿಗೆ ಸ್ವಾಗತ
ಮೈಸೂರು: ಜ್ಞಾನಾರ್ಜನೆಯ ಅಕ್ಷರ ಗುಡಿಯಾಗಿರುವ ಸರ್ಕಾರಿ ಶಾಲೆಗಳು ಸೋಮವಾರ ಜಿಲ್ಲೆಯಲ್ಲಿ ಪುನರಾರಂಭಗೊಂಡಿದ್ದು, 2026-27ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಸೋಮವಾರದಿಂದ ಶುರುವಾಗಿವೆ. ಇದರೊಂದಿಗೆ ಶಾಲೆಗಳಲ್ಲಿ ಮಕ್ಕಳ ಕಲವರ ಚಿಗುರೊಡೆಯಿತು.
ರಾಜ್ಯ ಪಠ್ಯಕ್ರಮ ಬೋಧನೆ ಮಾಡುವ ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಆಯೋಜಿಸಿದ್ದ ‘ಶಾಲಾ ಆರಂಭೋತ್ಸವ’ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು. ಇದು ಚಿಣ್ಣರಿಗೆ ಸಂಭ್ರಮದ ವಾತಾವರಣ ಸೃಷ್ಟಿಸಿತ್ತು.
ತಳಿರು ತೋರಣಗಳಿಂದ ಅಲಂಕಾರದಿಂದ ಕಂಗೊಳಿಸುತ್ತಿದ್ದ ಶಾಲೆಗಳಿಗೆ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮೊದಲ ದಿನವೇ ಸಿಹಿ ಊಟ ಉಣಬಡಿಸಲಾಯಿತು. ಕೆಲವೆಡೆ ಎತ್ತಿನ ಗಾಡಿ, ತೆರೆದ ಜೀಪುಗಳಲ್ಲಿ, ಪೂರ್ಣಕುಂಭದೊಂದಿಗೂ ಮಕ್ಕಳನ್ನು ಕರೆತರಲಾಯಿತು. ಹೀಗೆ ವಿಭಿನ್ನ, ವಿಶಿಷ್ಟವಾಗಿ ಆಯಾ ಸರ್ಕಾರಿ ಶಾಲೆಗಳಲ್ಲಿ ನಡೆದ ಶಾಲಾ ಆರಂಭೋತ್ಸವ ಮಕ್ಕಳ ಸ್ಮತಿ ಪಟಲದಲ್ಲಿ ನೆನಪಿನಲ್ಲಿ ಉಳಿಯುವಂತೆ ಮಾಡಿತು.
‘ಉತ್ತಮ ಕಲಿಕೆ, ಉಜ್ಜಲ ಭವಿಷ್ಯ’ ಘೋಷವಾಕ್ಯದಡಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ಪಾಲಕರು ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಬೇಸಿಗೆ ರಜೆ ಬಳಿಕ ಮಕ್ಕಳು ಹೊಸ ಉತ್ಸಾಹದಿಂದ ಶಾಲೆಯತ್ತ ಮುಖ ಮಾಡುವ ಮೂಲಕ ಪಾಠ ಪ್ರವಚನದಲ್ಲಿ ತಲ್ಲೀನರಾದರು.

ಎತ್ತಿನ ಗಾಡಿಯಲ್ಲಿ ಬಂದರು:

ಚಾಮುಂಡೇಶ್ವರಿ ಕ್ಷೇತ್ರದ ರಟ್ನಹಳ್ಳಿ ಗ್ರಾಮದಲ್ಲಿ ಎತ್ತಿನಗಾಡಿಯಲ್ಲಿ ಮಕ್ಕಳನ್ನು ಕರೆತರಲಾಯಿತು. ಇವರಿಗೆ ಶಾಸಕ ಜಿ.ಟಿ.ದೇವೇಗೌಡ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಉದಯಕುಮಾರ್, ಬಿಇಒ ಪ್ರಕಾಶ್ ಸಾಥ್ ನೀಡಿದರು. ಪೂರ್ಣಕುಂಭ ಸ್ವಾಗತ, ಪೂಜಾಕುಣಿತ, ನಗಾರಿ ಹೀಗೆ ವಿವಿಧ ಜಾನಪದ ತಂಡಗಳು ಮೆರುಗು ನೀಡಿದವು. ರಟ್ನಹಳ್ಳಿ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಸಾಕ್ಷಿಯಾದರು.

ತೆರೆದ ಜೀಪನಲ್ಲಿ ಬಂದ ಮಕ್ಕಳು

ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಕುವೆಂಪುನಗರದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲಿನ ಮಕ್ಕಳನ್ನು ತೆರೆದ ಜೀಪನಲ್ಲಿ ಕರೆತರಲಾಯಿತು. ಶಿಕ್ಷಕಿಯರು, ಮಹಿಳೆಯರು ಸ್ಕೂಟರ್‌ನಲ್ಲಿ ಮೆರವಣಿಗೆ ತೆರಳಿದರು. ‘ಸೇರಿಸಿ ಸೇರಿಸಿ ಸರ್ಕಾರಿ ಶಾಲೆಗೆ ಸೇರಿ’, ‘ವಿದ್ಯೆಯೇ ಜೀವನದ ಆಧಾರ’ ಇತ್ಯಾದಿ ಫಲಕಗಳನ್ನು ಹಿಡಿದು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.
ಶಾಸಕ ಟಿ.ಶ್ರೀವತ್ಸ ಮಾತನಾಡಿ, ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲ ಇದೀಗ ದೂರವಾಗಿದೆ. ಗುಣಮಟ್ಟದ ಶಿಕ್ಷಣ, ಅತ್ಯಾಧುನಿಕ ಸೌಲಭ್ಯದೊಂದಿಗೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ. ಸರ್ಕಾರಿ ಶಾಲೆಯಲ್ಲಿ 2023ರ ಎಸ್‌ಎಸ್‌ಎಲ್‌ಸಿಯಲ್ಲಿ 620 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 4 ಇತ್ತು. ಇದು ಏರಿಕೆಯಾಗುತ್ತಿದ್ದು, ಗುಣಾತ್ಮಕ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳೂ ಸಾಕ್ಷಿಯಾಗುತ್ತಿವೆ.
ಹೊಸ ಕಟ್ಟಡಗಳು, ಅತ್ಯಾಧುನಿಕ ಶೌಚಗೃಹಗಳು, ಪೂರಕವಾದ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಲ್ಲಿ ‘ಸ್ಟೆಮ್ ಲ್ಯಾಬ್‌ಗಳ ಸ್ಥಾಪನೆಯಾಗಿದ್ದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಲಭ್ಯವಾಗುತ್ತಿದೆ ಎಂದರು. ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಗುಲಾಬಿ ಹೂವಿನೊಂದಿಗೆ ಸ್ವಾಗತ

ನಂಜನಗೂಡಿನ ಹಳ್ಳದಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಮಕ್ಕಳಿಗೆ ಗುಲಾಬಿ ಹಾಗೂ ಸಿಹಿ ನೀಡುವುದರೊಂದಿಗೆ ಮಕ್ಕಳನ್ನು ಸ್ವಾಗತಿಸಿದರು. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಲಿ ಎಂದು ದಾಖಲಾತಿ ಆಂದೋಲನಕ್ಕೆ ಹಸಿರು ನಿಶಾನೆ ತೋರಿ ಶುಭವನ್ನೂ ಕೋರಿದರು.
ಉಚಿತ ಪಠ್ಯಪುಸ್ತಕ, ಸಮವಸ್ತ್ರಗಳನ್ನು ನೀಡಿ ಮಕ್ಕಳು ಚೆನ್ನಾಗಿ ಓದಿ ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ಎಂದು ಕಿವಿಮಾತು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಬಸವರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೋಮಶೇಖರ್, ಸಿಆರ್‌ಪಿ ಗಂಗಾಧರ್ ಭಾಗವಹಿಸಿದ್ದರು.

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ

ಕುಕ್ಕರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಕಲಿಕಾ ಹಬ್ಬ ಕಳೆಗಟ್ಟಿತ್ತು. ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್ ವಿತರಿಸುವ ಮೂಲಕ ವಿದ್ಯಾರ್ಥಿಗಳಿಗೆ ಶುಭಕೋರಲಾಯಿತು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಯಾವುದೇ ರೀತಿಯ ತಾರತಮ್ಯವಿಲ್ಲದೆ ಎಲ್ಲ ಮಕ್ಕಳಿಗೂ ಸಮಾನ, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪ್ರತಿಯೊಬ್ಬ ಮಗುವಿನ ಅಗತ್ಯಕ್ಕೆ ತಕ್ಕಂತೆ ಶಿಕ್ಷಕರು ಉತ್ತಮ ಬೋಧನೆ ಮಾಡುತ್ತಿದ್ದಾರೆ. ಸಾರ್ವಜನಿಕರು, ವಿವಿಧ ಮಹನೀಯರು ಉದಾರವಾಗಿ ದಾನ-ದತ್ತಿ ನೀಡುವ ಮೂಲಕ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಬೆಳೆಸಲು ಕೈಜೋಡಿಸುತ್ತಿದ್ದಾರೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಹೇಳಿದರು.
ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣವನ್ನು ಪಡೆದುಕೊಂಡಾಗ ಮಾತ್ರ ಜೀವನದಲ್ಲಿ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯ. ಶಿಕ್ಷಣದಲ್ಲಿ ಪರಿಣಿತಿ, ಜ್ಞಾನ ಗಳಿಸಿಕೊಂಡಾಗ ಮಾತ್ರ ಬದುಕಿನಲ್ಲಿ ಉತ್ತಮ ಅವಕಾಶ ಹುಡುಕಿಕೊಂಡು ಬರುತ್ತವೆ ಎಂದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದ ಮೌಲ್ಯ ಹೆಚ್ಚಾಗಿದೆ. 10ನೇ ತರಗತಿಯವರು ಈಗಿನಿಂದಲೇ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು. ಶಿಕ್ಷಕರು ಮಾಡುವ ಪಾಠ-ಪ್ರವಚನವನ್ನು ಶ್ರದ್ಧೆಯಿಂದ ಕೇಳಿ, ಉತ್ತಮ ಅಂಕ ಗಳಿಸಬೇಕು. ಆಗ ಮಾತ್ರ ಉನ್ನತ ಶಿಕ್ಷಣಕ್ಕಾಗಿ ಉತ್ತಮ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ ಮಾತನಾಡಿ, ಬಹಳಷ್ಟು ಗಣ್ಯರೆಲ್ಲರೂ ಬಡತನ ಮತ್ತು ಕಷ್ಟಗಳ ನಡುವೆಯೇ ಸರ್ಕಾರಿ ಶಾಲೆಯಲ್ಲೇ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣ, ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ಗುಣಾತ್ಮಕ ಶಿಕ್ಷಣ ಪಡೆಯಬೇಕು. ಆ ಮೂಲಕ ದೇಶದ ಜವಾಬ್ದಾರಿಯುತ, ಉತ್ತಮ ಪ್ರಜೆಯಾಗಿ ರೂಪುಗೊಂಡು ಉನ್ನತ ಮಟ್ಟಕ್ಕೇರಬೇಕು ಎಂದು ಹೇಳಿದರು.
ಡಿಪಿಇಒ ವಿಜಯ್ ಕುಮಾರ್, ಶಿಕ್ಷಕರಾದ ಆರ್.ಚಂದ್ರ, ಎನ್.ವಿಕ್ಟೋರಿಯ, ಸುಧೀರ್, ಸುರೇಶ, ಮಾಜಿ ಸೈನಿಕ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.