.ಹುಣಸೂರು ತಾಲೂಕು ಉಮ್ಮತ್ತೂರು ಗ್ರಾಮದಲ್ಲಿ ಕೆಪಿಎಸ್-ಮ್ಯಾಗ್ನೆಟ್ ಶಾಲೆಯನ್ನು ವಿರೋಧಿಸಿ ಎಐಡಿಎಸ್‌ಒ ಸಂಘಟನೆ ಸಹಯೋಗದಲ್ಲಿ ಗ್ರಾಮಸ್ಥರು ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ವಾತಿ, ಜೀವನ್, ಸುನಿಲ್ ಮತ್ತು ಗ್ರಾಮಸ್ಥರು ಇದ್ದಾರೆ.
ಶಿಕ್ಷಣ ಇಲಾಖೆ ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳೆಂಬ ಹೊಸ ಪದ್ಧತಿ ಜಾರಿಗೆ ತರಲು ಹೊರಟಿದ್ದು, ಪರೋಕ್ಷವಾಗಿ ಗ್ರಾಮೀಣ ಭಾಗದ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಜಿಲ್ಲೆಯಲ್ಲಿ ಒಟ್ಟು 34 ಶಾಲೆಗಳನ್ನು (ರಾಜ್ಯದಲ್ಲಿ 800 ಶಾಲೆಗಳು)ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿದೆ. ಅಂತೆಯೇ ತಾಲೂಕಿನಲ್ಲಿ ಗುರುಪುರ ಹಿರಿಯ ಪ್ರಾಥಮಿಕ ಮತ್ತು ಕಟ್ಟೆಮಳಲವಾಡಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳಾಗಲಿವೆ. ಕೆಪಿಎಸ್ ಮ್ಯಾಗ್ನೆಟ್ ಕೇಂದ್ರವಾಗುವ ಶಾಲೆ ಸುತ್ತಮುತ್ತಲ ಒಂದರಿಂದ 5 ಕಿ.ಮೀ.ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಯೊಳಗೆ ವಿಲೀನ (ಮರ್ಜ್) ಮಾಡುವ ಮೂಲಕ ಒಂದೇ ಸೂರಿನಡಿ ಶಿಕ್ಷಣ ಎನ್ನುವುದರೊಂದಿಗೆ ಗ್ರಾಮೀಣ ಭಾಗದ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಲು ಸರ್ಕಾರ ಹೊರಟಿದೆ ಎಂಬ ದೂರುಗಳು ಪಾಲಕರದ್ದು.
ಏನಿದು ಕೆಪಿಎಸ್-ಮ್ಯಾಗ್ನೆಟ್ ಶಾಲೆ?
ಒಂದೇ ಸೂರಿನಡಿ ಎಲ್‌ಕೆಜಿಯಿಂದ ಪಿಯು ವ್ಯಾಸಂಗದವರೆಗಿನ ಶಿಕ್ಷಣ ದೊರಕಬೇಕೆನ್ನುವ ಉದ್ದೇಶದಿಂದ 2018ರಲ್ಲಿ ಸರ್ಕಾರ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್) ಶಾಲೆಗಳನ್ನು ಆರಂಭಿಸಿತು. ಈ ಶಾಲೆಯಲ್ಲಿ ಪೂರ್ವ ಪ್ರಾಥಮಿಕದಿಂದ ಆರಂಭಗೊಂಡು ಪಿಯು ಹಂತದವರೆಗೂ ವಿದ್ಯಾರ್ಥಿಗಳು ವ್ಯಾಸಂಗ ಮಾಡಿಕೊಳ್ಳುತ್ತಿದ್ದರು. ಇದಕ್ಕಾಗಿ ಸರ್ಕಾರ ವಿಶೇಷ ಅನುದಾನದೊಂದಿಗೆ ಸುಸಜ್ಜಿತ ಮೂಲಸೌಕರ್ಯಗಳನ್ನೂ ನೀಡಿತ್ತು. ರಾಜ್ಯದಲ್ಲಿ 47,493 ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳಿವೆ. ಈ ಪೈಕಿ ಎಲ್‌ಕೆಜಿಯಿಂದ 12ನೇ ತರಗತಿವರಿಗೆ ಒಂದೇ ಸೂರಿನಡಿ ಶಿಕ್ಷಣ ನೀಡುತ್ತಿರುವ ಶಾಲೆಗಳು ಕೇವಲ 309 ಮಾತ್ರ. 2015ರಲ್ಲಿ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ 47.1 ಲಕ್ಷ ಇದ್ದದ್ದು, 2025-26ಕ್ಕೆ 38.2 ಲಕ್ಷ(ಶೇ.19ರಷ್ಟು ಕುಸಿತ) ಆಗಿದೆ. ಇದೇ ವೇಳೆ ಖಾಸಗಿ ಶಿಕ್ಷಣ ಸಂಸ್ಥೆಗಳ ದಾಖಲಾತಿ ಪ್ರಮಾಣ ಶೇ.29ರಷ್ಟು ಏರಿಕೆಯಾಗಿದೆ. ಶಾಲೆಗಳಿಂದ ಹೊರಗುಳಿಯುವ ವಿದ್ಯಾರ್ಥಿಗಳ ದರ(ಡ್ರಾಪ್‌ಔಟ್ ರೇಟ್)ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ.2.50, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ.2.91 ಮತ್ತು ಪ್ರೌಢಶಾಲೆ ವಿಭಾಗದಲ್ಲಿ ಶೇ.22.88 ಆಗಿದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರತಿ ತಾಲೂಕಿನಲ್ಲೂ ಕೆಪಿಎಸ್‌ನ ಮುಂದುವರಿದ ಭಾಗವಾಗಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಸ್ಥಾಪನೆಗೆ ಶಿಕ್ಷಣ ಇಲಾಖೆ ಮುಂದಾಗಿದೆ.
ಕೆಪಿಎಸ್-ಮ್ಯಾಗ್ನೆಟ್ ಶಾಲೆ ಸ್ಥಾಪನೆಯಲ್ಲಿ ಹಳ್ಳಿಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯನ್ನೂ ಬಿಡದಂತೆ ಕೇಂದ್ರ ಶಾಲೆಗೆ ವಿಲೀನ ಮಾಡುವ ಪ್ರಸ್ತಾವನೆಯೇ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹಳ್ಳಿಯಲ್ಲಿ ಒಂದು ಶಾಲೆ ಇದೆ ಎಂದರೆ ಆ ಊರಿನ ಜನರ ಭಾವನಾತ್ಮಕ ಸಂಬಂಧದೊಂದಿಗೆ ನಾಲ್ಕಕ್ಷರ ಕಲಿಯಲಿ ಎನ್ನುವ ಆಸೆ, ಆಕಾಂಕ್ಷೆಗಳನ್ನು ಊರ ಹಿರಿಯರು ಹೊಂದಿರುತ್ತಾರೆ. ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿರುತ್ತಾರೆ. ಆದರೆ, ಸರ್ಕಾರ ವಿದ್ಯಾರ್ಥಿಗಳ ಕೊರತೆ ಎಂಬ ಕಾರಣಕ್ಕೆ ಶಾಲೆಯನ್ನು ಮುಚ್ಚುತ್ತೇವೆ ಎಂದು ನೇರವಾಗಿ ಹೇಳಲಾಗದೆ ಮ್ಯಾಗ್ನೆಟ್ ಎನ್ನುವ ಮೂಲಕ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಪರಿಸರವೇ ಇಲ್ಲದಂತೆ ಮಾಡಲು ಹೊರಟಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್(ಎಐಡಿಎಸ್‌ಒ)ನ ಜಿಲ್ಲಾ ಸಮಿತಿ ಸದಸ್ಯ ಟಿ.ಆರ್.ಸುನಿಲ್ ಆರೋಪಿಸುತ್ತಾರೆ.
ಕೆಪಿಎಸ್-ಮ್ಯಾಗ್ನೆಟ್ ಶಾಲೆಗೆ ಮರ್ಜ್ ಆಗಲು ಅಕ್ಕಪಕ್ಕದ ಶಾಲೆಗಳ ಪರಿಮಿತಿ 1ರಿಂದ 5 ಕಿ.ಮೀ.ವರೆಗೆ ಎಂದು ಸರ್ಕಾರ ತಿಳಿಸಿದೆ. ಅಂದರೆ ಕೆಪಿಎಸ್-ಮ್ಯಾಗ್ನೆಟ್ ಶಾಲೆಯಿರುವ ಸ್ಥಳದಿಂದ 5 ಕಿ.ಮೀ.ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳು, ಪಿಯು ಕಾಲೇಜು ಎಲ್ಲವೂ ಈ ಶಾಲೆಯೊಳಗೆ ಸೇರಿಕೊಳ್ಳುತ್ತದೆ. ಕನಿಷ್ಠ 1,200 ವಿದ್ಯಾರ್ಥಿಗಳು ಒಂದೇ ಸೂರಿನಡಿ ವ್ಯಾಸಂಗ ಮಾಡಬೇಕೆನ್ನುವ ಉದ್ದೇಶ ಸರ್ಕಾರ ಹೊಂದಿದೆ. ಆರಂಭದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಮಾಡಿಕೊಡಲಾಗುವುದು. ನಂತರದ ವರ್ಷಗಳಲ್ಲಿ ಈ ಹೊಣೆಗಾರಿಕೆ ಎಸ್‌ಡಿಎಂಸಿ ತಲೆ ಮೇಲೆ ಬೀಳಲಿದೆ ಎನ್ನಲಾಗುತ್ತಿದೆ.
ತಾಲೂಕಿನ ಗುರುಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್-ಮ್ಯಾಗ್ನೆಟ್ ಸ್ಕೂಲ್ ಆಗಿ ಪರಿವರ್ತಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಮೊದಲ ಹಂತವಾಗಿ ಕೊಡಗು ಹೊಸೂರು ಕಾಲನಿ, ಉಮ್ಮತ್ತೂರು, ನಲ್ಲೂರುಪಾಲ ಕುರುಬರ ಹೊಸಳ್ಳಿಯ ಶಾಲೆಗಳನ್ನು ಮರ್ಜ್ ಮಾಡಲು ನಿರ್ಧರಿಸಿದೆ. ನಂತರ ಹಂತ ಹಂತವಾಗಿ ಈ ವ್ಯಾಪ್ತಿಯ ಉಯಿಗೊಂಡನಹಳ್ಳಿ, ಸಂಜೀವನಗರ, ದೇವಲಾಪುರ, ಕುಟ್ಟವಾಡಿ ಬಿ, ಕೆಂಡಗಣ್ಣಪುರ, ದೇವಗಳ್ಳಿ, ಕಾಡುವಡ್ಡರಗುಡಿ, ಕರೀಮುದ್ದನಹಳ್ಳಿ, ಹನುಮಂತಪುರ, ಕಾಡುವಡ್ಡರಗುಡಿ ಎ, ಉರ್ದು ನಲ್ಲೂರುಪಾಲ, ಕೊಟ್ಟಿಗೆ ಕಾವಲ್, ಹಂಚ್ಯ, ಹಂಚ್ಯ ಕಾಲನಿ, ಉಮ್ಮತ್ತೂರು, ಅಂಬೇಡ್ಕರ್‌ನಗರ, ಗೋವಿಂದನಹಳ್ಳಿ, ಅಜಾದ್ ನಗರ, ಹಳೇ ಚಿಕ್ಕಹುಣಸೂರು, ಕುರುಬರಹಳ್ಳಿ ಶಾಲೆಗಳನ್ನು ಮರ್ಜ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ.
ಹೋರಾಟ ನಡೆಸುತ್ತಿರುವ ಎಐಡಿಎಸ್‌ಒ
ತಾಲೂಕಿನ ಎರಡು ಕಡೆಗಳಲ್ಲಿ ಕೆಪಿಎಸ್ ಮ್ಯಾಗ್ನೆಟ್ ಸ್ಕೂಲ್ ಆರಂಭಿಸುವ ಸರ್ಕಾರದ ನಿರ್ಧಾರದ ವಿರುದ್ಧ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ ವತಿಯಿಂದ ಪ್ರತಿಭಟನೆಗಳು ನಡೆದಿವೆ. ಗ್ರಾಮೀಣ ಜನರ ಬೆಂಬಲದೊಂದಿಗೆ ಹೋರಾಟಕ್ಕಿಳಿದಿವೆ. ಜೂ.2ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ಟಿ.ಆರ್.ಸುನಿಲ್ ವಿಜಯವಾಣಿಗೆ ತಿಳಿಸಿದರು.
ಕೆಪಿಎಸ್-ಮ್ನಾಗ್ನೆಟ್ ಶಾಲೆಗಳ ಮೂಲಕ ಒಂದೇ ಸೂರಿನಡಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ಸರ್ಕಾರ ಯೋಜನೆ ರೂಪಿಸಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಯಾವುದೇ ಆದೇಶಗಳೂ ಬಂದಿಲ್ಲ. ಅಂತಹ ಉದ್ದೇಶವೂ ನಮಗಿಲ್ಲ.
ಕಾಳನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ, ಹುಣಸೂರು
ಆದರ್ಶ, ಮುರಾರ್ಜಿಯಂತಹ ವಿವಿಧ ವಸತಿ ಶಾಲೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಸರ್ಕಾರಿ ಶಾಲೆಗಳನ್ನು ಮುಚ್ಚಿ ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳನ್ನು ತೆರೆದು ಈ ಎಲ್ಲ ಶಾಲೆಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣಗೊಳಿಸಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ. ಇದರ ವಿರುದ್ಧ ಎಐಡಿಎಸ್‌ಒ ಅವಿರತ ಹೋರಾಟ ನಡೆಸಲಿದೆ. ಬಡಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳಲು ಬಿಡುವುದಿಲ್ಲ.
ಟಿ.ಆರ್.ಸುನಿಲ್, ಎಐಡಿಎಸ್‌ಒ, ಮೈಸೂರು
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆಯಿದ್ದರೆ ಮೂಲಸೌಕರ್ಯ ಕಲ್ಪಿಸಿ ಪಾಲಕರ ಮನವೊಲಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು. ಅದು ಬಿಟ್ಟು ದೊಡ್ಡ ಕ್ಯಾಂಪಸ್, ಖಾಸಗಿಯವರ ಅನುದಾನ, ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಾಲ ಸೌಲಭ್ಯಗಳನ್ನು ಸರ್ಕಾರ ಪಡೆದು ಈ ನೆಲದ ಬಡಮಕ್ಕಳಿಗೆ ಶಿಕ್ಷಣದಿಂದ ವಂಚಿತಗೊಳಿಸುವುದು ಯಾವ ನ್ಯಾಯ? ಸರ್ಕಾರ ಕೂಡಲೇ ಈ ಯೋಜನೆ ನಿಲ್ಲಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಿದ್ದೇವೆ.
ಹೊಸೂರು ಕುಮಾರ್, ಜಿಲ್ಲಾಧ್ಯಕ್ಷ, ರೈತಸಂಘ, ಹುಣಸೂರು