ಕೃಷ್ಣಮೂರ್ತಿಪುರಂನ ಬಿಎಸ್‌ಎಸ್ ವಿದ್ಯೋದಯ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.
- ವಿದ್ಯಾರ್ಥಿಗಳಿಗೆ ಗುಲಾಬಿ ನೀರು ಹಾಗೂ ಚಂದನದ ತಿಲಕದೊಂದಿಗೆ ಸಾಂಪ್ರದಾಯಿಕ ಸ್ವಾಗತ
- ಆತ್ಮವಿಶ್ವಾಸ, ದೃಢಸಂಕಲ್ಪದೊಂದಿಗೆ ತಮ್ಮ ಗುರಿ ಸಾಧಿಸಿ
ಮೈಸೂರು:ಕೃಷ್ಣಮೂರ್ತಿಪುರಂನ ಬಿಎಸ್‌ಎಸ್ ವಿದ್ಯೋದಯ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಆರಂಭವನ್ನು ಸಂಭ್ರಮದಿಂದ ಆಚರಿಸಲಾಯಿತು.
1ರಿಂದ 8ನೇ ತರಗತಿಯ ವಿದ್ಯಾರ್ಥಿಗಳನ್ನು ಗುಲಾಬಿ ನೀರು ಹಾಗೂ ಚಂದನದ ತಿಲಕದೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಸಂತಸದಿಂದ ಬರಮಾಡಿಕೊಳ್ಳಲಾಯಿತು. ವಿಶೇಷ ಪ್ರಾರ್ಥನಾ ಸಭೆಯೊಂದಿಗೆ ಆರಂಭಗೊಂಡ ಕಾಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿ ಮುರಳೀಧರ ಭಟ್, ಸಂಯೋಜಕರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲೆ ನವ್ಯಾ ಜಗದೀಶ್, ಪ್ರತಿದಿನ ನಗುಮುಖದಿಂದ ಶಾಲೆಗೆ ಬಂದು ಲಭ್ಯವಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಆತ್ಮವಿಶ್ವಾಸ, ದೃಢಸಂಕಲ್ಪದೊಂದಿಗೆ ತಮ್ಮ ಗುರಿಗಳನ್ನು ಸಾಧಿಸುವಂತೆ ಹೇಳಿದರು.
ವಿದ್ಯಾರ್ಥಿಗಳಿಗಾಗಿ ವಿವಿಧ ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. 1ರಿಂದ 4ನೇ ತರಗತಿಯ ವಿದ್ಯಾರ್ಥಿಗಳು ಹೊಸ ಆರಂಭ ಮತ್ತು ಬೆಳವಣಿಗೆಯನ್ನು ಪ್ರತಿಬಿಂಬಿಸುವ ಬಣ್ಣ ಬಣ್ಣದ ಹೆಬ್ಬೆರಳಿನ ಗುರುತುಗಳಿಂದ ಮರದ ಚಿತ್ರವನ್ನು ರಚಿಸಿದರು. ಸ್ಮರಣಿಕೆಯಾಗಿ ವಿಶೇಷ ಉಡುಗೊರೆಗಳನ್ನು ಪಡೆದರು.
5 ಮತ್ತು 6ನೇ ತರಗತಿಯ ವಿದ್ಯಾರ್ಥಿಗಳು ಸೃಜನಾತ್ಮಕ ಇಮೋಜಿ ಮುಖಗಳನ್ನು ವಿನ್ಯಾಸಗೊಳಿಸಿದರೆ, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಗಳು ಹಾಗೂ ಈ ಶೈಕ್ಷಣಿಕ ವರ್ಷದಲ್ಲಿ ಅಭಿವೃದ್ಧಿಪಡಿಸಬೇಕಾದ ಕೌಶಲಗಳನ್ನು ಬರೆದು ಗುರಿ ನಿರ್ಧಾರ ಚಟುವಟಿಕೆಯಲ್ಲಿ ಭಾಗವಹಿಸಿದರು.
ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ್ದ ಸೆಲ್ಫಿ ಕಾರ್ನರ್ ಹಾಗೂ ಭಾರತದ ಪಾರಂಪರಿಕ ಶಿಕ್ಷಣ ಪದ್ಧತಿ ಪ್ರತಿಬಿಂಬಿಸುವ ಗುರುಕುಲ ಮಾದರಿ ಎಲ್ಲರ ಗಮನ ಸೆಳೆಯಿತು. ಬೇಸಿಗೆ ರಜೆಯ ನಂತರ ಸ್ನೇಹಿತರು ಹಾಗೂ ಶಿಕ್ಷಕರೊಂದಿಗೆ ಪುನಃ ಒಂದಾದ ವಿದ್ಯಾರ್ಥಿಗಳ ಸಂತಸ, ಉತ್ಸಾಹ ಮತ್ತು ನಗುಮುಖಗಳಿಂದ ಶಾಲಾ ಆವರಣ ಕಂಗೊಳಿಸಿತು.