ಹುಣಸೂರು ನಗರದ ಚಿಕ್ಕಹುಣಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಆಂದೋಲನಕ್ಕೆ ಬಿಇಒ ಕಾಳನಾಯ್ಕ ಚಾಲನೆ ನೀಡಿದರು. ಹೇಮಲತಾ, ಕರಿಯಪ್ಪ, ಆನಂದ್, ಅನಿಲ್ ಇತರರಿದ್ದರು.
ಹುಣಸೂರು: ನಗರದ ಚಿಕ್ಕಹುಣಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ 2026-27ನೇ ಶೈಕ್ಷಣಿಕ ಸಾಲಿನ ದಾಖಲಾತಿ ಆಂದೋಲನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾಳನಾಯ್ಕ ಬುಧವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಬಿಸಿಯೂಟ, ಉಚಿತ ಪಠ್ಯಪುಸ್ತಕಗಳ ವಿತರಣೆ ಸೇರಿದಂತೆ ಉತ್ತಮ ಶೈಕ್ಷಣಿಕ ಪರಿಸರ ನೀಡಲಾಗುತ್ತಿದೆ. ನುರಿತ ಅಧ್ಯಾಪಕ ವೃಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಕೂಲಿಗೆ ಕಳುಹಿಸಬಾರದು. ಬದಲಾಗಿ ಶಿಕ್ಷಣ ಪಡೆಯುವುದು ಅವರ ಹಕ್ಕು ಆಗಿದ್ದು, ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವಂತೆ ಮನವಿ ಮಾಡಿದರು.
ನಂತರ ವಿದ್ಯಾರ್ಥಿಗಳು, ಶಿಕ್ಷಕರು, ಎಸ್‌ಡಿಎಂಸಿ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ಚಿಕ್ಕಹುಣಸೂರು ಬಡಾವಣೆಯ ಬೀದಿಗಳಲ್ಲಿ ಸಂಚರಿಸಿ ನಾಗರಿಕರಿಗೆ ಅರಿವು ಮೂಡಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ, ಬಿಆರ್‌ಪಿ ಆನಂದ್, ಸಿಆರ್‌ಪಿ ಅನಿಲ್, ಮುಖ್ಯಶಿಕ್ಷಕ ಕರಿಯಪ್ಪ, ವಿವಿಧ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.