ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಎಚ್.ಎಸ್. ಗಿರಿಜಾಂಬ, ಸಿ. ಶಿವಕುಮಾರ್, ಎಂ.ವಿ.ನಾಗರತ್ನಾ, ಡಾ. ಕಲಾವತಿ, ಮೋಹನ್ ಕುಮಾರ್ ಇತರರು ಇದ್ದರು.
- ಬುಡಕಟ್ಟು ಸಮುದಾಯದ ಏಳಿಗೆಗಾಗಿ ಸರ್ಕಾರದ ವಿವಿಧ ಕಾರ್ಯಕ್ರಮ
- ಸಲಹೆ ಸೂಚನೆ ಪಡೆದು ಕಾರ್ಯಕ್ರಮಗಳನ್ನು ರೂಪಿಸಲಾಗುವುದು
ಮೈಸೂರು:ಬುಡಕಟ್ಟು ಜನರು ಆರ್ಥಿಕವಾಗಿ ಸಬಲರಾಗಿ, ಸ್ವಾವಲಂಬಿಗಳಾಗಲು ತರಬೇತಿಯನ್ನು ನೀಡಿ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಉಪನಿರ್ದೇಶಕಿ ಎಚ್.ಎಸ್. ಗಿರಿಜಾಂಬ ಹೇಳಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ಕರ್ನಾಟಕ ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಪ್ರಬಂಧ ಮಂಡಿಸಿದ 20 ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಸರ್ಕಾರ ಬುಡಕಟ್ಟು ಸಮುದಾಯದ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕಿದೆ. ಸರ್ಕಾರದ ಯೋಜನೆಗಳ ಕುರಿತು ತಿಳಿಸಲು ಮುಂದಿನ 15 ದಿನದಲ್ಲಿ ಬುಡಕಟ್ಟು ಮುಖಂಡರ ಸಭೆ ಕರೆದು ಸಲಹೆ ಸೂಚನೆ ಪಡೆದು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಶೋಧನಾಧಿಕಾರಿ ಸಿ. ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯರು ಅರಣ್ಯಾಧಾರಿತ ಜೀವನೋಪಾಯ, ಕೃಷಿ ಕೆಗಾರಿಕೆ, ಅರಣ್ಯ ಉತ್ಪನ್ನ ಸಂಗ್ರಹಣೆ ಮತ್ತು ಮೌಲ್ಯವರ್ಧನೆ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದರು.
ಆದರೆ ಅವರ ಶ್ರಮಕ್ಕೆ ತಕ್ಕ ಮಾನ್ಯತೆ ಮತ್ತು ಮೌಲ್ಯ ಇನ್ನು ಸಂಪೂರ್ಣವಾಗಿ ದೊರಕಿಲ್ಲ ಎಂಬುದು ನಮ್ಮ ಚರ್ಚೆಗಳಿಂದ ಹೊರಬಂದ ಪ್ರಮುಖ ಸಂಗತಿ. ಸಬಲೀಕರಣ ಎಂದರೆ ಕೇವಲ ಆದಾಯವೃದ್ಧಿ ಮಾತ್ರವಲ್ಲ, ಅದು ಗೌರವ ಸ್ವಯಂ ನಿರ್ಧಾರ ಶಕ್ತಿ ಸಂಪನ್ಮೂಲಗಳ ಮೇಲಿನ ಹಕ್ಕು ಮತ್ತು ಸಾಮಾಜಿಕ ಮಾನ್ಯತೆಗಳ ಸಮನ್ವಯಾಗಿದೆ ಎಂದು ಹೇಳಿದರು.
ಸರ್ಕಾರದ ಯೋಜನೆಗಳು ನೆಲಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದು, ಪರಿಶಿಷ್ಟ ಪಂಗಡದ ಮಹಿಳೆಯರ ಆರ್ಥಿಕ ಕೊಡುಗೆಗಳ ದಾಖಲಾತಿ ಮತ್ತು ಸಂಶೋಧನೆಯನ್ನು ಉತ್ತೇಜಿಸುವುದು ಮಾರುಕಟ್ಟೆ ಸಂಪರ್ಕ ಮತ್ತು ಸಂಸ್ಥಾಗತ ಬೆಂಬಲವನ್ನು ಬಲಪಡಿಸುವುದು ಎಂದರು.
ಬೆಂಗಳೂರು ವಿವಿಯ ಪ್ರೊ. ಸಮತಾದೇಶ ಮಾನೆ, ಹಂಪಿ ವಿವಿ ಡಾ.ಯರ್ರಿಸ್ವಾಮಿ, ಮಂಗಳೂರು ವಿವಿಯ ಡಾ. ಸಬೀತಾ, ಲೆಕ್ಕಾಧಿಕಾರಿ ಬಿ.ಆರ್.ಭವ್ಯಾ, ಅಧೀಕ್ಷಕಿ ಎಂ.ವಿ.ನಾಗರತ್ನ, ಸಂಶೋಧಕರಾದ ಡಾ.ಕಲಾವತಿ, ಮೋಹನ್ ಕುಮಾರ್, ಕೆ.ಡಿ. ದಿನೇಶ್, ರವಿಕುಮಾರ್, ಎಂ.ಸಿ.ವೇಣುಕಾಂತ್, ಬಿ.ಆರ್. ಪ್ರಸನ್ನಕುಮಾರ್, ಮಂಜುನಾಥ್, ಕೆ.ರಮೇಶ್, ಭರತ್ ಕುಮಾರ್ ಇದ್ದರು.