ಹುಣಸೂರು : ಕೇಂದ್ರ ಸರ್ಕಾರದ ಬಹು ಉದ್ದೇಶಿತ ಭಾರತದ ಜನಗಣತಿ 2027ರ ಮೊದಲ ಹಂತದ ಗಣತಿಕಾರ್ಯ ಏ.1ರಿಂದ ಸ್ವಯಂ ಗಣತಿ ಮೂಲಕ ಆರಂಭಗೊಂಡಿದ್ದು, ಅಂತೆಯೇ ತಾಲೂಕಿನಲ್ಲೂ ಜನಗಣತಿ ಕಾರ್ ಪ್ರಾರಂಭಗೊಂಡಿದೆ ಎಂದು ಜನಗಣತಿ ಅಧಿಕಾರಿ ಹಾಗೂ ತಹಸೀಲ್ದಾರ್ ಆದ ಜೆ.ಮಂಜುನಾಥ್ ತಿಳಿಸಿದರು.
ಜನಗಣತಿ ಕಾರ್ಯವು ಏ.16 ರಿಂದ ಮೇ 15ರವರೆಗೆ ಒಂದು ತಿಂಗಳ ಕಾಲ ನಡೆಯಲಿದೆ. ಈ ಹಂತದಲ್ಲಿ ಗಣತಿದಾರರು ಮನೆಮನೆಗೆ ತೆರಳಿ ಮನೆಪಟ್ಟಿ(ಹೋಮ್ ಲಿಸ್ಟ್) ಮತ್ತು ವಸತಿ ಗಣತಿ(ಹೌಸಿಂಗ್ ಸೆನ್ಸಸ್) ಕಾರ್ಯ ನಡೆಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸ್ವಯಂಗಣತಿ: ಇದಕ್ಕೂ ಮುನ್ನ ಏ.1ರಿಂದ 15ರವರೆಗೆ ಸ್ವಯಂ ಗಣತಿ ಕಾರ್ಯ ಚಾಲನೆಯಲ್ಲಿರಲ್ಲಿದೆ. ಸ್ವಯಂ ಗಣತಿಕಾರ್ಯದಲ್ಲಿ ಸಾರ್ವಜನಿಕರು ಸರ್ಕಾರ ಹೊರಡಿಸಿರುವ ಪೋರ್ಟಲ್‌ಗೆ ಲಾಗಿನ್ ಆಗುವ ಮೂಲಕ ವೆಬ್‌ಸೈಟ್‌ನಲ್ಲಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಕುರಿತಾಗ ಕೇಳಲಾಗುವ 33 ಪ್ರಶ್ನೆಗಳಿಗೆ ಉತ್ತರಿಸಬೇಕು. ಜಿಪಿಎಸ್ ಮೂಲಕ ಲೊಕೇಶನ್ ಕೂಡ ದಾಖಲಾಗಲಿದೆ. ಮಾಹಿತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ ಅಂತಿಮವಾಗಿ ಎಸ್‌ಎಂಎಸ್ ಅಥವಾ ಇ- ಮೇಲ್ ಮೂಲಕ ರೆಫರೆನ್ಸ್ ಐಡಿ ನಂಬರ್ ಸ್ವೀಕೃತವಾಗುತ್ತದೆ. ಏ.16ರ ನಂತರ ಗಣತಿದಾರರು ಮನೆಬಳಿ ಬಂದಾಗ ರೆಫರೆನ್ಸ್ ಐಡಿ ಸಂಖ್ಯೆಯನ್ನು ಅವರಿಗೆ ನೀಡುವ ಮೂಲಕ ಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ ಹಾಗೂ ಸ್ವಯಂ ಗಣತಿ ಮೂಲಕ ಸಮಯವನ್ನು ಉಳಿಸಬಹುದಾಗಿದೆ ಎಂದರು.
659 ಗಣತಿದಾರರ ನೇಮಕ: ಜನಗಣತಿ ಕಾರ್ಯ ಸುಲಲಿತವಾಗಿ ಸಾಗಲು ತಾಲೂಕನ್ನು ಒಟ್ಟು 536 ಬ್ಲಾಕ್‌ಗಳಾಗಿ ವಿಂಗಡಿಸಿದ್ದು, 569 ಗಣತಿದಾರರು ಮತ್ತು 90 ಮಂದಿ ಮೇಲ್ವಿಚಾರಕ(ಒಟ್ಟು 659 ಮಂದಿ) ರನ್ನು ನೇಮಿಸಲಾಗಿದೆ. ಈ ಎಲ್ಲ ಸಿಬ್ಬಂದಿಗೆ 10 ಮಂದಿ ಕ್ಷೇತ್ರ ತರಬೇತಿದಾರರಿಂದ ಏ.3ರಿಂದ 11ರವರೆಗೆ ಗಣತಿಕಾರ್ಯದ ಕುರಿತು ತರಬೇತಿಯನ್ನು ನಗರದ ಸಂತ ಜೋಸೆಫರ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
3.30 ಲಕ್ಷ ಜನಸಂಖ್ಯೆ ಅಂದಾಜು: 2011ರ ಜನಗಣತಿಯ ಪ್ರಕಾರ ತಾಲೂಕಿನಲ್ಲಿ ಒಟ್ಟು 2,82,963 ಆಗಿದ್ದು, ಇದೀಗ ತಾಲೂಕಿನ ಜನಸಂಖ್ಯೆ 3,30,388 ಆಗಿರಬಹುದೆಂದು ಅಂದಾಜಿಸಲಾಗಿದೆ. ಕೇಂದ್ರಸರ್ಕಾರ ಜನಗಣತಿಯ ಮೂಲಕ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಕಾರ್ಯ ನಡೆಸಿದ್ದು, ದೇಶದ ಸರ್ವತೋಮುಖ ಅಭಿವೃದ್ಧಿಗೆ ಪ್ರತಿ 10 ವರ್ಷಗಳಿಗೊಮ್ಮೆ ಆಯೋಜನೆಗೊಳ್ಳುವ ಜನಗಣತಿ ಅಗತ್ಯವಾಗಿದೆ. ನಾಗರಿಕರು ಸ್ವಯಂ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಬಹುದು. ಅಥವಾ ಗಣತಿದಾರರು ಮನೆಬಾಗಿಲಿಗೆ ಬಂದಾಗ ಅಗತ್ಯ ಮಾಹಿತಿಗಳನ್ನು ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಅವರು ಕೋರಿದರು.