ಸರಗೂರು ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹುಲ್ಲಹಳ್ಳಿ ಯೋಜನೆ ಮುಳ್ಳೂರು ವಲಯದ ವತಿಯಿಂದ ಆಯೋಜಿಸಿದ್ದ ಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮಹದೇವಸ್ವಾಮೀಜಿ, ಸೌಮ್ಯಾ ಅನೀಲ್, ರವಿ, ಗಣೇಶ್ ನಾಯಕ, ಮಂಜುನಾಥ್, ನರಸಿಂಹಮೂರ್ತಿ ಇದ್ದರು.
ಸರಗೂರು: ನಮ್ಮ ನಡೆ-ನುಡಿಗಳೇ ನಮ್ಮ ಧರ್ಮವನ್ನು ಹೇಳುತ್ತಿವೆ. ಅದನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ನಡೆಯಬೇಕು. ಧರ್ಮಾಚರಣೆಯಿಂದ ಸುಖ-ಸಂಪತ್ತು ಲಭಿಸುತ್ತದೆ. ಸತ್ಯನಾರಾಯಣ ಪೂಜೆಯಿಂದ ಇಷ್ಟಾರ್ಥಗಳು ದೊರೆಯುತ್ತವೆ ಎಂದು ಸೌಮ್ಯಾ ಅನಿಲ್ ಚಿಕ್ಕಮಾದು ಹೇಳಿದರು.
ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹುಲ್ಲಹಳ್ಳಿ ಯೋಜನೆ ವತಿಯಿಂದ ಗುಜ್ಜಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ವೇಗವಾಗಿ ಬೆಳೆದಂತೆ ಇಂದಿನ ಯುವ ಜನಾಂಗದಲ್ಲಿ ಧಾರ್ಮಿಕ ನಂಬಿಕೆಗಳು, ಆಚರಣೆಗಳು ಕಡಿಮೆಯಾಗುತ್ತಿವೆ. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಸಂಸ್ಕಾರಯುತ ಜೀವನ ಮೌಲ್ಯಗಳ ಬಗ್ಗೆ ತಿಳಿವಳಿಕೆ ನೀಡುವಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವದ್ದು. ಮನುಷ್ಯ ಧರ್ಮದ ದಾರಿಯಲ್ಲಿ ನಡೆದಾಗ ಭಗವಂತನ ಅನುಗ್ರಹ ಪ್ರಾಪ್ತವಾಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿಗಳು ಇಂತಹ ಪೂಜಾ ಕಾರ್ಯಕ್ರಮಗಳನ್ನು ನಡೆಸಿ ಜನರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಪಿ.ರವಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರತಿ ದಿನ ನೂರಾರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಹಳ್ಳಿಗಳಲ್ಲಿ ನಡೆಯುತ್ತಿವೆ. ಇದರಿಂದ ಎಷ್ಟೋ ಕುಟುಂಬಗಳು ನೇರವು ಪಡೆದುಕೊಂಡಿವೆ. ಈ ಸಂಸ್ಥೆ ಮಾಡುತ್ತಿರುವ ಪ್ರತಿ ಕೆಲಸವೂ ಸಮಾಜಮುಖಿಯಾಗಿದೆ ಎಂದು ತಿಳಿಸಿದರು.
ಪಡುವಲ ವಿರಕ್ತ ಮಠದ ಶ್ರೀ ಮಹದೇವಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸ್ವಾವಲಂಬನೆಯ ಜತೆಗೆ ಜನರಲ್ಲಿ ಧಾರ್ಮಿಕ ಚಿಂತನೆಗಳ ಜಾಗೃತಿ ಮೂಡಿಸುತ್ತಿದೆ. ಸಾಮೂಹಿಕ ಪೂಜೆ ಶ್ರೇಷ್ಠವಾದದ್ದು. ಮಕ್ಕಳಿಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.
ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಎಂ.ಮಂಜುನಾಥ, ಧರ್ಮಸ್ಥಳ ಪ್ರಾದೇಶಿಕ ನಿರ್ದೇಶಕ ಜಯಂತ್ ಪೂಜಾರಿ, ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ್, ಜೈನ ಸಮುದಾಯದ ಮುಖಂಡ ಸೋಮ ಪ್ರಭು, ಗ್ರಾಪಂ ಅಧ್ಯಕ್ಷ ಕುಮಾರ್, ಪಿಡಿಒ ನಾಗೇಂದ್ರ, ಗ್ರಾಪಂ ಉಪಾಧ್ಯಕ್ಷೆ ಶೋಭಾ ಸುಂದರ್, ನಾಯಕ ಸಮಾಜದ ತಾಲೂಕು ಅಧ್ಯಕ್ಷ ಪುರದಕಟ್ಟೆ ಬಸವರಾಜು, ವೀರಶೈವ ಮಹಾಸಭಾ ಅಧ್ಯಕ್ಷ ವೀರಭದ್ರಪ್ಪ, ನಾಮಧಾರಿಗೌಡ ಸಮಾಜದ ಅಧ್ಯಕ್ಷ ವಿನೋದ್ ಕುಮಾರ್, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಶಿವಪ್ಪ ಕೋಟೆ, ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ, ಗಾಣಿಗ ಸಮಾಜದ ಅಧ್ಯಕ್ಷ ಶಿವಲಿಂಗಶೆಟ್ಟಿ, ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷ ತಿಮ್ಮಯ್ಯ, ನಾಗಣ್ಣ, ಉಪ್ಪಾರ ಸಮಾಜ ಅಧ್ಯಕ್ಷ ಮಹದೇವ, ರಾಜೇಂದ್ರಕುಮಾರ್, ನಾಗೇಂದ್ರ ಕುಮಾರ್, ಗಣೇಶ್ ನಾಯಕ, ನಂಜಪ್ಪ, ರತ್ನಯ್ಯ, ಗಣೇಶ್, ರವಿ, ನರಸಿಂಹಮೂರ್ತಿ, ಧನ್ಯಕುಮಾರ್, ಭೀಮನಾಯಕ, ಚಿನ್ನಮ್ಮ, ಚಲುವಪ್ಪ ಇದ್ದರು.