ಸರಗೂರು ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸೆರೆ ಸಿಕ್ಕ ಹುಲಿ. ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ.
ಸರಗೂರು: ತಾಲೂಕಿನ ಹಂಚೀಪುರ ಹಾಗೂ ಹೆಗ್ಗನೂರು ಸಮೀಪ ಉಪಟಳ ನೀಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಹೆಗ್ಗನೂರು ಸಮೀಪದ ದೇವಲಾಪುರದ ಪುರದಶೆಡ್ಡು ಬಳಿಯ ಅಳಗಂಚಿ ವಲಯದ ಕಾಡಂಚಿನ ಭಾಗದ ಜಮೀನಿನಲ್ಲಿ ಹುಲಿ ಇರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಸುಮಾರು 6-7 ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ತಿಂಗಳಿನಿಂದ ಹಂಚೀಪುರ ಹಾಗೂ ಹೆಗ್ಗನೂರು ವ್ಯಾಪ್ತಿಯ ಗ್ರಾಮಗಳಲ್ಲಿ ಜಾನುವಾರುಗಳನ್ನು ಹುಲಿ ಬಲಿ ಪಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೆ, ವಾರದ ಹಿಂದಷ್ಟೇ ಹುಲಿ ಸಂಚರಿಸಿರುವ ಫೋಟೋಗಳು ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹುಲಿ ಚಿತ್ರ ನೋಡಿ ಆತಂಕಗೊಂಡ ಗ್ರಾಮಸ್ಥರು ಹುಲಿ ಸೆರೆಗೆ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದ್ದರು.
ಸ್ಥಳೀಯರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ಮೊಳೆಯೂರು ವಲಯದ ಅಳಗಂಚಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿಯಿಂದಲೇ ಆನೆಗಳಾದ ಭೀಮ, ಮಹೇಂದ್ರ, ಧನಂಜಯ, ಇಂದ್ರನನ್ನು ಬಳಸಿಕೊಂಡು ಸುಮಾರು 60 ಮಂದಿ ಸಿಬ್ಬಂದಿ ಕೂಂಬಿಂಗ್ ಆರಂಭಿಸಿದರು. ಸೋಮವಾರ ಡ್ರೋನ್ ಕ್ಯಾಮರಾ ಮೂಲಕ ಕಾರ್ಯಾಚರಣೆ ನಡೆಸಿದರು. ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹುಲಿಯ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ವೈದ್ಯರು ಡಾ.ವಾಸಿಂ ಮಿರ್ಜಾ ಮತ್ತು ಡಾ.ಆದರ್ಶ್ ಸಹಕಾರದಿಂದ ಶಾರ್ಪ ಶೂಟರ್‌ಗಳಾದ ಅಕ್ರಂಪಾಷ ಮತ್ತು ರಂಜನ್ ಹುಲಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಸದ್ಯ ಹುಲಿಯನ್ನು ಬಂಡೀಪುರ ಮುಖ್ಯ ಕಚೇರಿಗೆ ರವಾನಿಸಲಾಗಿದ್ದು, ಮೇಲಧಿಕಾರಿಗಳ ಆದೇಶದಂತೆ ಮುಂದಿನ ಕ್ರಮವಹಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ 15 ಹುಲಿಗಳನ್ನು ಸೆರೆ ಹಿಡಿಯಲಾಗಿದೆ.
ಸ್ಥಳದಲ್ಲಿ ಡಿಸಿಎಫ್‌ಗಳಾದ ಪರಮೇಶ್, ಪ್ರಭಾಕರನ್, ಎಸಿಎಫ್‌ಗಳಾದ ಎಸ್.ಸುಮಿತ್ರಾ, ಡಿ.ಪರಮೇಶ್, ಆರ್‌ಎಫ್‌ಒಗಳಾದ ನಾರಾಯಣ್, ಅಕ್ಷಯ್ ಕುಮಾರ್, ಸ್ಥಳೀಯರಾದ ದೇವಲಾಪುರ ಸಿದ್ದರಾಜು, ಸಿದ್ದರಾಜು, ತ್ರಿಶಂಭು, ಮೋಹನ್ ಕುಮಾರ್, ಶಿವಚಂದ್ರ, ಗಿರೀಶ್, ರಾಜೇಶ್, ಬಸವರಾಜ್, ಪೊಲೀಸ್ ಇಲಾಖೆ, ಮೈಸೂರು ಅರಣ್ಯ ವಿಭಾಗ ಮತ್ತು ಬಂಡೀಪುರ ಅರಣ್ಯ ವಿಭಾಗದ ಸಿಬ್ಬಂದಿ ಹಾಜರಿದ್ದರು.