ಸರಗೂರು ತಾಲೂಕು ಪಂಚಾಯಿತಿ ಆವರಣದಲ್ಲಿ ಅಂಗವಿಕಲರಿಗೆ ಲ್ಯಾಪ್‌ಟಾಪ್ ಹಾಗೂ ಬೈಕ್ ವಿತರಣೆ ಕಾರ್ಯಕ್ರಮವನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಿದರು. ಮೋಹನಕುಮಾರಿ, ಪ್ರೇಮ್ ಕುಮಾರ್, ಚೈತ್ರಸ್ವಾಮಿ, ಸಿದ್ದರಾಜು ಮತ್ತಿತರರಿದ್ದರು. 
ಮೈಸೂರು

ವಾಹನ ಪಡೆದ ಅಂಗವಿಕಲರಿಗೆ ಚಾಲನಾ ಪರವಾನಗಿ ಕಡ್ಡಾಯ

ಸರಗೂರು: ಸರ್ಕಾರದಿಂದ ದ್ವಿಚಕ್ರ ವಾಹನ ಸೌಲಭ್ಯ ಪಡೆದಿರುವ ಎಲ್ಲ ಅಂಗವಿಕಲರು ಕಡ್ಡಾಯವಾಗಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಹೊಂದಿರಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಆರ್‌ಡಬ್ಲುೃ ಹಾಗೂ ಎಂಆರ್‌ಡಬ್ಲುೃ ಕಾರ್ಯಕರ್ತರಿಗೆ ತಾಲೂಕು ಪಂಚಾಯಿತಿ ವತಿಯಿಂದ ಶೇ.5ರಷ್ಟು ಅನುದಾನದಡಿ ಬೈಕ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ವಿತರಿಸಿ ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ವಿಆರ್‌ಡಬ್ಲುೃ ಹಾಗೂ ಎಂಆರ್‌ಡಬ್ಲುೃ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ. ಬೈಕ್ ಹಾಗೂ ಲ್ಯಾಪ್‌ಟಾಪ್‌ಗಳ ವಿತರಣೆಯಿಂದ ಗ್ರಾಮಗಳಿಗೆ ಸುಲಭವಾಗಿ ಭೇಟಿ ನೀಡಿ ಕಾರ್ಯನಿರ್ವಹಿಸಲು, ಮಾಹಿತಿಯನ್ನು ತ್ವರಿತವಾಗಿ ದಾಖಲಿಸಲು ಹಾಗೂ ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಒದಗಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಇಒ ಪ್ರೇಮ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 1,500 ಅಂಗವಿಕಲರಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರಿಗೆ ಲ್ಯಾಪ್‌ಟಾಪ್‌ಗಳನ್ನು ಹಾಗೂ ಅರ್ಹ ಅಂಗವಿಕಲರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಎಂಆರ್‌ಡಬ್ಲುೃ ಕಾರ್ಯಕರ್ತ ದೇವರಾಜು ಮಾತನಾಡಿ, ತಾಲೂಕು ಮಟ್ಟದಲ್ಲಿ ಅಂಗವಿಕಲರಿಗೆ ಸಮುದಾಯ ಭವನದ ಕೊರತೆ ಇದೆ. ಸಭೆ-ಸಮಾರಂಭ ಹಾಗೂ ಇತರ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ಭವನ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಅಲ್ಲದೆ, ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಆರ್‌ಡಬ್ಲುೃ ಕಾರ್ಯಕರ್ತರಿಗೆ ಪ್ರತ್ಯೇಕ ಕೊಠಡಿ ಹಾಗೂ ಕುಳಿತುಕೊಳ್ಳಲು ಅಗತ್ಯ ವ್ಯವಸ್ಥೆ ಇಲ್ಲ. ಗ್ರಾಮ ಪಂಚಾಯಿತಿಗಳಿಗೆ ಬರುವ ಅಂಗವಿಕಲರಿಗೆ ಕುಳಿತುಕೊಳ್ಳಲು ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು.
ತಾಲೂಕು ದಂಡಾಧಿಕಾರಿ ಮೋಹನ್‌ಕುಮಾರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾಸ್ವಾಮಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಚೆಲುವರಾಜು, ಜಿಪಂ ಮಾಜಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ ನಿಂಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು, ನರೇಗಾ ಯೋಜನೆ ಅಧಿಕಾರಿ ಮಹದೇವಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯ ಚೆಲುವಕೃಷ್ಣ, ವಿಆರ್‌ಡಬ್ಲುೃ ಕಾರ್ಯಕರ್ತರಾದ ಸೋಮೇಶ್, ಬಸವರಾಜು, ಸಂತೋಷ, ಮಹದೇವಮೂರ್ತಿ, ನಾಗೇಶ್ ಮತ್ತಿತರರು ಹಾಜರಿದ್ದರು.