ಸರಗೂರು ತಾಲೂಕಿನ ಎಪಿಎಂಸಿ ರಸ್ತೆ ಗುಂಡಿಗಳಾಗಿ ಮಳೆ ನೀರು ನಿಂತಿರುವುದು.
ಸರಗೂರು: ತಾಲೂಕಿನ ಎಪಿಎಂಸಿಯಿಂದ ಸ್ವಾಮಿವಿವೇಕಾನಂದ ಆಸ್ಪತ್ರೆವರೆಗಿನ ರಸ್ತೆ ಹಾಗೂ ಪಟ್ಟಣದಿಂದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಎರಡನೇ ಮುಖ್ಯರಸ್ತೆಯಾಗಿದ್ದು, ಗುಂಡಿಮಯವಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಪಟ್ಟಣದಿಂದ ನರಸೀಪುರ, ಹಳಿಯೂರು, ಹೆಗ್ಗುಡಿಲು, ಹಂಚೀಪುರ, ಬಿ.ಮಟಕೆರೆ, ಸಾಗರೆ, ಬಿದರಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆ ಕಿರಿದಾಗಿರುವುದಲ್ಲದೆ, ಅಲ್ಲಲ್ಲಿ ಗುಂಡಿ ಬಿದ್ದಿರುವ ಕಾರಣ ಸಂಚರಿಸಲು ಸವಾರರು ಸರ್ಕಸ್ ಮಾಡಬೇಕಾದ ಪರಿಸ್ಥಿತಿ ಇದೆ.
ರಸ್ತೆ ಚಿಕ್ಕದಾಗಿರುವ ಕಾರಣ ಬಸ್, ಲಾರಿಗಳು ತೆರಳುತ್ತಿದ್ದರೆ ಎದುರಿನಿಂದ ಬರುವ ಮತ್ತೊಂದು ವಾಹನ ಸರಾಗವಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಮತ್ತೊಂದು ವಾಹನಕ್ಕೆ ದಾರಿ ಬಿಡಬೇಕಾದರೆ ರಸ್ತೆ ಬದಿಯ ಹಳ್ಳದಲ್ಲಿ ನಿಲ್ಲಿಸುವ ಪರಿಸ್ಥಿತಿ ಇದೆ.
ಬಿದ್ದು ಗಾಯಗೊಂಡಿರುವ ಸವಾರರು:ರಸ್ತೆಯುದ್ದಕ್ಕೂ ಗುಂಡಿಗಳು ಹಲವು ವರ್ಷಗಳಿಂದ ಇದ್ದರೂ ದುರಸ್ತಿಯಾಗಿಲ್ಲ. ಮಳೆ ಆಗುತ್ತಿರುವುದರಿಂದ ರಸ್ತೆ ಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರೂ ಸಂಚರಿಸಲು ಸಮಸ್ಯೆ ಎದುರಿಸುವಂತಾಗಿದೆ. ಈ ಗುಂಡಿಗಳಲ್ಲಿ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳೂ ಇವೆ. ಹಲವು ಬಾರಿ ವಾಹನಗಳು ಮಾರ್ಗಮಧ್ಯೆ ಕೆಟ್ಟು ನಿಂತು ಟ್ರಾಫಿಕ್ ಸಮಸ್ಯೆಯೂ ಉಂಟಾಗಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಪ್ರಯಾಣ ಮಾತ್ರ ನರಕಯಾತನೆಯಾಗಿದೆ.
ರಸ್ತೆಯ ಬದಿಯಲ್ಲಿ ಹಾಕಿದ್ದ ಮಣ್ಣೆಲ್ಲವೂ ಕೊಚ್ಚಿ ಹೋಗಿ, ಈಗಿರುವ ರಸ್ತೆಯೂ ಕುಸಿದು ಈ ಮಾರ್ಗದಲ್ಲಿ ತಿಂಗಳುಗಟ್ಟಲೆ ವಾಹನಗಳ ಸಂಚಾರ ಬಂದ್ ಆಗಿ ಪ್ರಯಾಣಿಕರು ಸಂಕಷ್ಟ ಅನುಭವಿಸಿದರೆ, ಸರಕು ಸಾಗಣೆ ಲಾರಿಗಳ ಸಂಚಾರ ಸ್ಥಗಿತಗೊಂಡು ವ್ಯಾಪಾರ-ವಹಿವಾಟು ನಡೆಸುವವರಿಗೆ ಭಾರಿ ನಷ್ಟವೂ ಆಗಿದೆ.
ರಸ್ತೆ ದುರಸ್ತಿಗೊಳಿಸುವಂತೆ ಹಲವು ಬಾರಿ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ರಸ್ತೆ ದುರಸ್ತಿ ಮಾಡಿಲ್ಲ. ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಮೊದಲಿನಿಂದಲೂ ಭಾಗವನ್ನು ಕಡೆಗಣಿಸಲಾಗುತ್ತಿದೆ ಎಂದು ಪಟ್ಟಣದ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ.
ಕಂಡೂ ಕಾಣದಂತಿರು ಅಧಿಕಾರಿಗಳು: ಈ ರಸ್ತೆಯ ಬದಿಯಲ್ಲಿ ಇರುವ ಗುಂಡಿಗಳಿಗೆ ಅಂಗಡಿ ಮಾಲೀಕರು ಹಾಗೂ ಪಟ್ಟಣದಲ್ಲಿ ಯಾವುದಾದರೂ ಮನೆ ಕೆಡವಿದರೆ ಆ ಮಣ್ಣನ್ನು ರಸ್ತೆಯ ಗುಂಡಿಗಳಿಗೆ ಹಾಕುತ್ತಾರೆ. ಇನ್ನೂ ಕೆಲವು ಮುಖಂಡರು ಈ ರಸ್ತೆಯ ಅವ್ಯವಸ್ಥೆಯ ನೋಡಿ ಸುತ್ತಮುತ್ತಲಿನ ಕೆರೆಯಲ್ಲಿ ತುಂಬಿದ ಹೂಳನ್ನೇ ತಂದು ರಸ್ತೆಗೆ ಉಪಯೋಗಿಸಲಾಗುತ್ತಿದೆ. ಅಧಿಕಾರಿಗಳು ಕಂಡರೂ ಕಾಣದಂತೆ ಸಂಚರಿಸುತ್ತಿದ್ದಾರೆ. ರಸ್ತೆಯ ಕಾಮಗಾರಿಯನ್ನು ಸರ್ಕಾರ ಶೀಘ್ರದಲ್ಲೇ ಪ್ರಾರಂಭಿಸಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂಬುದು ಪಟ್ಟಣದ ಜನತೆಯ ಮನವಿಯಾಗಿದೆ.
ಪಟ್ಟಣದ ಎರಡನೇ ಮುಖ್ಯರಸ್ತೆಯಾದ ಸಂತೆ ಮಾಸ್ತಮ್ಮ ದೇವಸ್ಥಾನದಿಂದ 500 ಮೀಟರ್ ದೂರದಷ್ಟು ರಸ್ತೆ ತುಂಬಾ ಹದ್ದಗೆಟ್ಟು ಸಂಚರಿಸಲು ಯೋಗ್ಯವಿಲ್ಲದಂತಾಗಿದೆ. ಇನ್ನೂ ವಾಹನಗಳ ಸಂಚಾರದ ಮಾತನ್ನೂ ಹೇಳುವುದೇ ಬೇಡ. ರಸ್ತೆ ಕಾಮಗಾರಿ ಕೈಗೊಳ್ಳುತ್ತೇವೆ ಎಂದು ಮೂರು ವರ್ಷದಿಂದ ಹೇಳಲಾಗುತ್ತಿದೆಯಾದರೂ ಕಾಮಗಾರಿ ಆರಂಭಗೊಂಡಿಲ್ಲ. ಈ ಬಗ್ಗೆ ಕೇಳಿ ಕೇಳಿ ಸಾಕಾಗಿ ಪಟ್ಟಣದ ಜನತೆ ಕೇಳುವುದನ್ನೇ ಬಿಟ್ಟಿದ್ದಾರೆ.
ಪಟ್ಟಣದಿಂದ ಒಂದೂವರೆ ಕಿಲೋ ಮೀಟರ್ ದೂರದಿಂದ ಎಪಿಎಂಸಿ ರಸ್ತೆ ಮಧ್ಯಭಾಗದಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಯ ಬದಿಯಲ್ಲಿ ಗುಂಡಿಗಳು ಇದ್ದು ಭಾರಿ ವಾಹನಗಳು ಸಂಚರಿಸಲು ಸಾಧ್ಯವಾಗುವುದಿಲ್ಲ. ಭಾರಿ ವಾಹನಗಳು ಬಂದರೆ ಒಂದು ಬೈಕ್ ಹೋಗಲು ಸಾಧ್ಯವಿಲ್ಲ. ಈ ರಸ್ತೆಯಲ್ಲಿ ಎಷ್ಟೋ ಅಪಘಾತ ಸಂಭವಿಸಿವೆ.ರಸ್ತೆಯನ್ನು ವಿಸ್ತರಣೆ ಮಾಡಿ ಅನುಕೂಲ ಕಲ್ಪಿಸಬೇಕಿದೆ.
ಅಣ್ಣಯ್ಯಸ್ವಾಮಿ ಕಂದೇಗಾಲ, ದಸಂಸ (ಸಂಯೋಜಕ) ಜಿಲ್ಲಾ ಸಂಘಟನಾ ಸಂಚಾಲಕ, ಸರಗೂರು
ಗುಂಡ್ಲುಪೇಟೆ-ನಂಜನಗೂಡು ತಾಲೂಕಿನ ಸಂಪರ್ಕ ಕಲ್ಪಿಸುವ ರಸ್ತೆ, ಬಲಗಡೆಗೆ ಹಾದು ಹೋಗುವ ರಸ್ತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೆಚ್ಚು ವಾಹನಗಳು ಸಂಚರಿದುತ್ತವೆ. ಎಪಿಎಂಸಿಗೆ ಭಾರಿ ಸರಕು ವಾಹನಗಳು ಬರುತ್ತವೆ. ಒಂದು ಲಾರಿ ಬಂದರೆ ಇನ್ನೊಂದು ಲಾರಿಗೆ ಅವಕಾಶ ನೀಡುವ ಸಮಯದಲ್ಲಿ ರಸ್ತೆ ಬದಿಯಲ್ಲಿರುವ ಗುಂಡಿಗಳಿಗೆ ಲಾರಿಯನ್ನು ಬಿಟ್ಟಬೇಕು. ಏನಾದರೂ ಅನಾಹುತ ಉಂಟಾದರೆ ಯಾರು ಹೋಣೆ?
ದೇವರಾಜು, ಗೆದ್ದಹಳ್ಳ ಗ್ರಾಮಸ್ಥ