ಸರಗೂರು ಪಟ್ಟಣದ ಅಂಚೆ ಕಚೇರಿ ಮುಂಭಾಗ ಖಾತೆದಾರರು ಅಂಚೆ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಅಧಿಕಾರಿಗಳೊಂದಿಗೆ ಖಾತೆದಾರರು ಮಾತನಾಡಿದರು 
ಮೈಸೂರು

ಮುಂದುವರಿದ ಖಾತೆದಾರರ ಧರಣಿ

ಸರಗೂರು: ಪಟ್ಟಣದ ಒಂದನೇ ಮುಖ್ಯ ರಸ್ತೆಯಲ್ಲಿರುವ ಅಂಚೆ ಕಚೇರಿ ಮುಂಭಾಗ ಖಾತೆದಾರರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮಂಗಳವಾರವೂ ಧರಣಿ ಮುಂದುವರಿಸಿದರು.
ಆರ್ಯ ಈಡಿಗ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಎಸ್.ಎನ್.ನಾಗರಾಜು ಮಾತನಾಡಿ, ಖಾತೆದಾರರ ಹಣವನ್ನು ಲೂಟಿ ಮಾಡಿರುವ ಅಂಚೆ ಇಲಾಖೆ ಸಿಬ್ಬಂದಿಯೊಬ್ಬನ ಮೇಲೆ ಇಲಾಖೆ ತನಿಖಾಧಿಕಾರಿಗಳು 6 ತಿಂಗಳಾದರೂ ದೂರು ದಾಖಲಿಸಿಲ್ಲ. ಖಾತೆದಾರರಿಗೆ ಹಣವನ್ನು ವರ್ಗಾವಣೆ ಮಾಡಿಲ್ಲ. ಹೀಗೆ ಮುಂದುವರಿದರೆ ಅಂಚೆ ಕಚೇರಿಗೆ ಬೀಗ ಜಡಿದು ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದ ಅವರು, ಧರಣಿನಿರತರಲ್ಲಿ ಹಿರಿಯ ನಾಗರಿಕರಿದ್ದು ಏನಾದರೂ ಸಮಸ್ಯೆಯಾದರೆ ಅಂಚೆ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಕಿಡಿಕಾರಿದು.
ಆದಿ ಕರ್ನಾಟಕ ಮಹಾಸಭಾ ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ಅಂಚೆ ಕಚೇರಿಯ ಉಳಿತಾಯ ಖಾತೆಯಿಂದ ಹಣ ಹಿಂಪಾವತಿಯ ಮೇಲೆ ಖಾತೆದಾರರ ನಕಲಿ ಸಹಿ ಮಾಡಿ ಹಣ ಪಡೆದಿದ್ದಾರೆ. ತಿಂಗಳೊಳಗೆ ಹಣವನ್ನು ಖಾತೆಗೆ ಜಮಾ ಮಾಡದಿದ್ದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಅಂಚೆ ಇಲಾಖೆ ಅಧಿಕಾರಿಗಳಾದ ಶ್ರೀನಿವಾಸ, ಚೇತನ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. ಎಲ್ಲ ಗ್ರಾಹಕರ ಮುಂದೆ ತನಿಖೆ ನಡೆಸಿದ್ದೇವೆ. ನಾವು ಎರಡು ತಿಂಗಳ ಕಾಲ ಖಾತೆದಾರರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಅದರಲ್ಲಿ 75 ಖಾತೆದಾರರ ಹಣವನ್ನು ಲೂಟಿ ಮಾಡಿರುವುದು ಕಂಡು ಬಂದಿದೆ. ಅದನ್ನು ಕೇಂದ್ರ ಇಲಾಖೆ ಗಮನಕ್ಕೆ ತರಲಾಗಿದೆ. ಸಿಬಿಐಗೆ ದೂರು ನೀಡಿದ್ದೇವೆ. ಅವರು ಬಂದು ತನಿಖೆಗೆ ಮುಂದಾಗುತ್ತಾರೆ. ಈಗಗಾಲೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸರಗೂರಿನಲ್ಲಿ ನಡೆದ ಘಟನೆಯ ಬಗ್ಗೆ ನಾಳೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಭೆ ಇದೆ. ಈ ಬಗ್ಗೆ ಮಾತನಾಡಿ ನಿಮ್ಮ ಹಣವನ್ನು ಖಾತೆಗೆ ಜಮೆ ಮಾಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದಕ್ಕೆ ಒಪ್ಪದ ಪ್ರತಿಭಟನಾಕಾರರು ನಿಮ್ಮ ಬಗ್ಗೆ ನಂಬಿಕೆ ಇಲ್ಲ. ಖಾತೆಗೆ ಹಣ ಜಮೆ ಮಾಡುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದರು.
ಚನ್ನಿಪುರ ಮಲ್ಲೇಶ್, ಗ್ರಾಮೀಣ ಮಹೇಶ್, ಲಂಕೆ ಲಕ್ಷಣ್, ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ, ಮುಳ್ಳೂರು ಲೋಕೇಶ್, ಎಸ್.ಆರ್.ಮಹೇಶ್, ನಿವೃತ್ತ ಶಿಕ್ಷಕ ಶಾಂಭವಮೂರ್ತಿ, ಮಹದೇವಪ್ಪ, ದಾಸೇಗೌಡ, ನಿತಿನ್, ಶಾಂತಣ್ಣ, ಸರಗೂರು ಲೋಕೇಶ್, ಸುಂದರಮ್ಮ, ರಾಜೇಶ್, ಸಿ.ನಾಗರಾಜ್, ಸಿ.ಚೌಡಶೆಟ್ಟಿ, ವೆಂಕಟೇಶ್, ಅನಂತ ಶಯನ, ಸುಧಾ, ಜಯಮ್ಮ, ಸರೋಜಮ್ಮ, ಜಿ.ಬಿ.ಶಶಿಕಲಾ, ಜಗದೀಶ್ ಇದ್ದರು.