ಸರಗೂರು ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ಶ್ರೀಮಹೇಶ್ವರಿ ಕಾಳಮ್ಮ ದೇವಸ್ಥಾನ. 
ಮೈಸೂರು

ಹೆಗ್ಗನೂರಿನಲ್ಲಿ ನಾಳೆ ಶ್ರೀಮಹೇಶ್ವರಿ ಕಾಳಮ್ಮನ ರಥೋತ್ಸವ

ಸರಗೂರು: ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ಮಾ.4ರಂದು ಶ್ರೀಮಹೇಶ್ವರಿ ಕಾಳಮ್ಮನವರ ರಥೋತ್ಸವ ನಡೆಯಲಿದ್ದು ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರತಿ ವರ್ಷವೂ ಶ್ರೀಮಹೇಶ್ವರಿ ಕಾಳಮ್ಮನವರ ರಥೋತ್ಸವ ಆಚರಿಸಲಾಗುತ್ತಿದ್ದು ಜಾತ್ರೆಯ ಅಂಗವಾಗಿ ದೇವಸ್ಥಾನಕ್ಕೆ ಸುಣ್ಣ ಬಣ್ಣ ಬಳಿದು ಸಿಂಗರಿಸಲಾಗಿದೆ. ಜಾತ್ರೆ ದಿನದಂದು ದೇವಸ್ಥಾನದಲ್ಲಿ ವಿಶೇಷ ಹೋಮ ನಡೆಯುತ್ತದೆ. ಬುಧವಾರ ಮುಂಜಾನೆ 4 ಗಂಟೆಗೆ ಹರಕೆ ಹೊತ್ತ ಭಕ್ತರು ಉರುಳು ಸೇವೆಯೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ.
ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿರುವ ಹೆಬ್ಬಳ್ಳದ ತೊರೆಯಿಂದ ಗಂಗಾಪೂಜೆ ಮಾಡಿ ಕೇಲು ತರಲಾಗುತ್ತದೆ. ಬೆಳಗ್ಗೆ 9 ಗಂಟೆಗೆ ಭಕ್ತರು ಬಾಯಿಬೀಗ ಹರಕೆ, ಮುಡಿ ತೆಗೆಸುವ ಹರಕೆ ತೀರಿಸುತ್ತಾರೆ. ಸತ್ತಿಗೆಗಳು, ನಂದಿಧ್ವಜ, ಉಮಾಮಹೇಶ್ವರ ಸ್ವಾಮಿ ದೇವರ ರುದ್ರಾಕ್ಷಿ ಮಂಟಪದೊಂದಿಗೆ ಪಂಜಿನಸೇವೆ, ನಾದಸ್ವರ, ಬ್ಯಾಂಡ್‌ಸೆಟ್, ವೀರಗಾಸೆ ನೃತ್ಯ ಮತ್ತಿತರ ಕಲಾತಂಡಗಳೊಡನೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ನಂತರ ಉಯ್ಯಲೆ ಸೇವೆ ಮೂಲಕ ಉತ್ಸವ ಮೂರ್ತಿಯನ್ನು ಗರ್ಭಗುಡಿಗೆ ತಂದು ಪಟ್ಟಕ್ಕೆ ಕುಳ್ಳಿರಿಸಿ ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ಸಹಸ್ರನಾಮ, ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ.
ಮಧ್ಯರಾತ್ರಿ 1 ಗಂಟೆಗೆ ಗಂಗಾ ಪೂಜೆ ಮಾಡಿ ಮಹೇಶ್ವರಿ ಕಾಳಮ್ಮನವರ ಉತ್ಸವ ಮೂರ್ತಿಯನ್ನು ಅಲಂಕರಿಸಿ ಅಲಂಕೃತ ಪುಷ್ಪ ರಥದಲ್ಲಿ ಇರಿಸಿ ವಾದ್ಯಗೋಷ್ಠಿ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ರಾತ್ರಿ ಇಡೀ ಮೆರವಣಿಗೆ ನಡೆಸಿದ ನಂತರ ಮರುದಿನ ಬೆಳಗ್ಗೆ 7 ಗಂಟೆಗೆ ದೇವರ ಉತ್ಸವ ದೇವಾಲಯಕ್ಕೆ ಬಂದು ಸೇರುತ್ತದೆ. ನಂತರ ಮಹಾಮಂಗಳಾರತಿ ಮಾಡಿ ದೇವಸ್ಥಾನಕ್ಕೆ ಸೇರಿಸಲಾಗುವುದು. ಬುಧವಾರ ರಾತ್ರಿ ರಸಮಂಜರಿ ಕಾರ್ಯಕ್ರಮ ಇರಲಿದ್ದು, ಅಂದು ರಾತ್ರಿ 9 ಗಂಟೆಗೆ ಕಾಮಿಡಿ ಕಿಲಾಡಿಗಳ ಖ್ಯಾತಿಯ ಮಿಮಿಕ್ರಿ ಶ್ಯಾಮ್ ಮೈಸೂರು ಅರ್ಪಿಸುವ ಮಿಲನ್ ಮ್ಯೂಸಿಕಲ್ ಕಾಮಿಡಿ ಮತ್ತು ಮ್ಯೂಸಿಕಲ್ ನೈಟ್ ಅವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.