ಸರಗೂರು ತಾಲೂಕಿನ ಕೆ.ಬೆಳತ್ತೂರು ಹೊಸ ಬಡಾವಣೆಯಲ್ಲಿ 204 ಕುಟುಂಬದವರಿಗೆ ಹಕ್ಕುಪತ್ರವನ್ನು ಶಾಸಕ ಅನಿಲ್ ಚಿಕ್ಕಮಾದು ವಿತರಿಸಿದರು. ಮೋಹನಕುಮಾರಿ, ಪ್ರೇಮಕುಮಾರ್, ರವಿಚಂದ್ರನ್ ಇತ್ತರರಿದ್ದರು. 
ಮೈಸೂರು

ಹೊಸ ಬಡಾವಣೆ ನಿವಾಸಿಗಳಿಗೆ ಹಕ್ಕುಪತ್ರದ ಭಾಗ್ಯ

ರಾಜಣ್ಣ
ಸರಗೂರು: ಸರ್ಕಾರದ ವಿವಿಧ ಯೋಜನೆಯಡಿ ಸವಲತ್ತು ಪಡೆಯಲು ಕೆ.ಬೆಳ್ತೂರು ಹೊಸ ಬಡಾವಣೆ 214 ಮನೆಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಕೆ.ಬೆಳ್ತೂರು ಹೊಸ ಬಡಾವಣೆಯಲ್ಲಿ ಸೋಮವಾರ ಕಂದಾಯ ಇಲಾಖೆಯಿಂದ ಏರ್ಪಡಿಸಿದ್ದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಕೆ.ಬೆಳ್ತೂರು ಗ್ರಾಮದಿಂದ ಬೇರ್ಪಟ್ಟು ಸರ್ಕಾರದ ಜಾಗದಲ್ಲಿ ಹೊಸ ಬಡಾವಣೆ ಎಂದು ನಾಮಕರಣ ಮಾಡಿಕೊಂಡು ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಅವರಿಗೆ ಯಾವುದೇ ಹಕ್ಕುಪತ್ರ ಇರಲಿಲ್ಲ. ಇದನ್ನು ಮನಗಂಡು ಸರ್ಕಾರದ ಗಮನ ಸೆಳೆದು ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಸರ್ಕಾರಿ ಜಾಗ, ಕಬಿನಿ ಮುಳುಗಡೆ ಗ್ರಾಮಗಳ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಆ ಮೂಲಕ ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಲಾಗುವುದು ಎಂದು ಅವರು ಹೇಳಿದರು.
ಗ್ರಾಮದ ಅಭಿವೃದ್ಧಿಗಾಗಿ 80 ಲಕ್ಷ ರೂ. ಅನುದಾನ ನೀಡಲಾಗಿದೆ. ಇದಲ್ಲದೆ ದೇವಸ್ಥಾನಕ್ಕೆ 5 ಲಕ್ಷ ರೂ.ಸೇರಿದಂತೆ ಇನ್ನಿತರ ಕೆಲಸಗಳಿಗೆ ಹೆಚ್ಚುವರಿ ಅನುದಾನ ನೀಡಲಾಗಿದೆ. ಗ್ರಾಮದ ಪ್ರಮುಖ ರಸ್ತೆಗಳ ಅಭಿವೃದ್ಧಿ ಮಾಡುವಂತೆ ಮನವಿ ಮಾಡಲಾಗಿದೆ. ನೀರಾವರಿ ಇಲಾಖೆಯಿಂದ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೆರವು ನೀಡಲಾಗುವುದು. ಶಾಲೆಗೆ ಇಲಾಖೆಯೊಂದಿಗೆ ಚರ್ಚಿಸಿ ಅಡುಗೆ ಕೊಠಡಿ, ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಇದಲ್ಲದೆ ವಸತಿ ಶಾಲೆಗೂ ಕಾಂಪೌಂಡ್ ನಿರ್ಮಿಸಲಾಗುವುದು. ಎಸ್ಸೆಸ್ಸೆಲ್ಸಿಯಿಂದ ಪಿಯುವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿ, ಮನೆಗೆ ಸಂಬಂಧಿಸಿದ ಹಕ್ಕುಪತ್ರ ವಿತರಣೆ ಮಾಡಲಾಗಿದ್ದು, 15 ವರ್ಷ ಪರಭಾರೆ ಮಾಡುವಂತಿಲ್ಲ. ಪೌತಿಯಾದರೆ ವಾರಸುದಾರರು ಪೌತಿ ಖಾತೆ ಮಾಡಿಸಿಕೊಳ್ಳಬಹುದು. ಮಾರಾಟ ಮಾಡುವುದು ಗಮನಕ್ಕೆ ಬಂದರೆ ಹಕ್ಕುಪತ್ರ ರದ್ದು ಮಾಡಲಾಗುವುದು ಎಂದು ಹೇಳಿದರು.
ತಾಪಂ ಇಒ ಪ್ರೇಮ್‌ಕುಮಾರ್ ಮಾತನಾಡಿ, ಕಂದಾಯ ಗ್ರಾಮವಾದ ಬಡಾವಣೆ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಯಿಂದ ಇ-ಸ್ವತ್ತು ಪಡೆದುಕೊಳ್ಳಬೇಕು, ವಿಸ್ತೀರ್ಣಕ್ಕೆ ಅನುಗುಣವಾಗಿ ಕಂದಾಯ ನೀಡಬೇಕು ಎಂದರು.
ತಹಸೀಲ್ದಾರ್ ಮೋಹನಕುಮಾರಿ, ಇಒ ಪ್ರೇಮ್‌ಕುಮಾರ್, ಯಜಮಾನರಾದ ಸಿದ್ದನಾಯಕ, ರಾಜನಾಯಕ, ಪುಟ್ಟಸ್ವಾಮೇಗೌಡ, ನಾಗೇಗೌಡ, ಪಿಎಸ್‌ಐ ಕಿರಣ್‌ಕುಮಾರ್, ಶಂಕರೇಗೌಡ, ಚಿಕ್ಕಯ್ಯ, ಗೋವಿಂದಡೆಗೌಡ, ಸಿದ್ದಾಚಾರ್, ಸವಿತಾದ ಕೃಷ್ಣಶೆಟ್ಟಿ, ಕರಿಶೆಟ್ಟಿ, ನಾಗರಾಜು, ಚಿಕ್ಕಯಜಮಾನ ಮಹದೇವನಾಯಕ, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ರವಿಚಂದ್ರನ್,ಗ್ರಾಮಲೆಕ್ಕಿಗ ಅನೀಲ್‌ಕುಮಾರ್ ಮತ್ತಿತರರು ಹಾಜರಿದ್ದರು.