ಸರಗೂರು ತಾಲೂಕಿನ ಬಾಡಗ ಗ್ರಾಮದ ಜವರಯ್ಯ ಎಂಬುವರ ಜಮೀನಲ್ಲಿ ಮುಸುಕಿನ ಜೋಳವನ್ನು ಕಾಡಾನೆಗಳು ನಾಶ ಮಾಡಿರುವುದು.
ಸರಗೂರು: ತಾಲೂಕಿನ ಬಾಡಗ ಗ್ರಾಮದ ಜಮೀನುಗಳಿಗೆ ಶುಕ್ರವಾರ ರಾತ್ರಿ ಕಾಡಾನೆಗಳು ದಾಳಿಯಿಟ್ಟು ಮುಸುಕಿನ ಜೋಳ ಹಾಗೂ ಬಾಳೆ ಬೆಳೆಯನ್ನು ತಿಂದು, ತುಳಿದು ನಾಶಪಡಿಸಿವೆ.
ಗ್ರಾಮದ ಜವರಯ್ಯ ಮೋಳೆಯೂರು ವಲಯ ವ್ಯಾಪ್ತಿಯ 2 ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಮತ್ತು ಬಾಳೆ ಬೆಳೆದಿದ್ದರು. ಬುಧವಾರ ಮತ್ತು ಗುರುವಾರ ಮೇವನ್ನರಿಸಿ ಬಂದಿದ್ದ ಕಾಡಾನೆಗಳು ಜವರಯ್ಯ ಜಮೀನಿನ ಮೂಲಕ ಹಾದು ಹೋಗಿದ್ದ ಕಾರಣ ಸಾಧಾರಣ ಪ್ರಮಾಣದಲ್ಲಿ ಮುಸುಕಿನ ಜೋಳದ ಬೆಳೆ ನಾಶವಾಗಿತ್ತು. ಆದರೆ ಶುಕ್ರವಾರ ರಾತ್ರಿ ಅದೇ ಮಾರ್ಗದಲ್ಲಿ ಬಂದಿರುವ ಕಾಡಾನೆಗಳು ಸುಮಾರು 2 ಎಕರೆ ಮುಸುಕಿನ ಜೋಳದ ಬೆಳೆಯನ್ನು ತಿಂದು, ತುಳಿದು ನಾಶ ಮಾಡಿವೆ. ಸಮೃದ್ಧವಾಗಿದ್ದ ಬೆಳೆದು ಕಾಳು ಕಟ್ಟುವ ಹಂತದಲ್ಲಿರುವ ಬೆಳೆ ಕಾಡಾನೆಗಳಿಂದ ನಾಶವಾಗಿದ್ದು, ರೈತರ ವರ್ಷದ ಶ್ರಮ ಬೆಳಗಾಗುವಷ್ಟರಲ್ಲಿ ವ್ಯರ್ಥವಾಗಿದೆ.
ಪರಿಶೀಲನೆ: ಬೆಳೆ ನಷ್ಟದ ವಿಷಯವನ್ನು ತಿಳಿದು ಶುಕ್ರವಾರ ಬೆಳಗ್ಗೆ ಅರಣ್ಯ ಇಲಾಖೆ ಡಿಆರ್‌ಎಫ್ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಬೆಳೆ ನಷ್ಟದ ಬಗ್ಗೆ ಅಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ. ಆದ್ದರಿಂದ ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜವರಯ್ಯ ಅವರ ಪುತ್ರ ಚಂದ್ರ ಮಾತನಾಡಿ, ಕಾಡಾನೆಗಳು ದಾಳಿ ನಡೆಸಿ ಜಮೀನಲ್ಲಿದ್ದ ಬೆಳೆಯನ್ನು ಸಂಪೂರ್ಣ ನಾಶ ಮಾಡಿವೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವರೂ ಸ್ಥಳಕ್ಕೆ ಆಗಮಿಸಿ ಪರೀಶೀಲನೆ ನಡೆಸಿದ್ದಾರೆ.