ಮೈಸೂರಿನ ಕುರುಬಾರಹಳ್ಳಿ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪುಷ್ಪಾರ್ಚನೆ ಸಲ್ಲಿಸಿದರು.  
ಮೈಸೂರು

ರಾಷ್ಟ್ರಭಕ್ತಿ ಕಿಚ್ಚು ಹೊತ್ತಿಸಿದ್ದ ಸಂಗೊಳ್ಳಿ ರಾಯಣ್ಣ

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ
ನಗರದಲ್ಲಿ ಸ್ವಾತಂತ್ರೃ ಹೋರಾಟದ ಅಪ್ರತಿಮ ವೀರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ ಆಚರಿಸಲಾಯಿತು. ಮೈಸೂರಿನ ಕುರುಬಾರಹಳ್ಳಿ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪುಷ್ಪಾರ್ಚನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಸಚಿವರು, ಸಂಗೊಳ್ಳಿ ರಾಯಣ್ಣ ಅವರ ಶೌರ್ಯ, ತ್ಯಾಗ ಮತ್ತು ದೇಶಭಕ್ತಿ ಕನ್ನಡ ನಾಡಿನ ಹೆಮ್ಮೆಯ ಪ್ರತೀಕವಾಗಿದೆ. ಬ್ರಿಟಿಷರ ದಮನಕಾರಿ ಆಡಳಿತದ ವಿರುದ್ಧ ಧೈರ್ಯದಿಂದ ಸೆಣಸಾಡಿದ ಅವರು, ಸ್ವಾತಂತ್ರೃಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟು ಹೋರಾಟ ನಡೆಸಿದರು. ಅವರ ಸಾಹಸ, ಹೋರಾಟದ ಛಲ ಹಾಗೂ ದೇಶಪ್ರೇಮ ಪ್ರತಿಯೊಬ್ಬ ಭಾರತೀಯನಲ್ಲೂ ರಾಷ್ಟ್ರ ಭಕ್ತಿಯ ಕಿಚ್ಚನ್ನು ಹೊತ್ತಿಸುವಂತದ್ದು ಎಂದರು.
ಸ್ವಾತಂತ್ರೃಕ್ಕಾಗಿ ರಾಯಣ್ಣ ಅವರು ಮಾಡಿದ ತ್ಯಾಗ ಮತ್ತು ಬಲಿದಾನ ಇತಿಹಾಸದಲ್ಲಿ ಅಜರಾಮರವಾಗಿದ್ದು, ಅವರ ಅಪ್ರತಿಮ ಹೋರಾಟ ಮತ್ತು ದೇಶಪ್ರೇಮ ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯ ಸೆಲೆಯಾಗಿದೆ. ನಾಡಿನ ಏಕತೆ, ಸ್ವಾಭಿಮಾನ ಮತ್ತು ದೇಶದ ಸಮಗ್ರತೆಗಾಗಿ ಅವರು ತೋರಿದ ಬದ್ಧತೆ ನಮಗೆ ಸದಾ ಮಾರ್ಗದರ್ಶನ ನೀಡುತ್ತದೆ. ಅವರ ಆದರ್ಶಗಳನ್ನು ಸ್ಮರಿಸುವುದರ ಜತೆಗೆ, ದೇಶದ ಪ್ರಗತಿ, ಶಾಂತಿ, ಏಕತೆ
ಮತ್ತು ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಹರೀಶ್ ಗೌಡ, ಡಾ.ತಿಮ್ಮಯ್ಯ, ಎಂ.ಕೆ.ಸೋಮಶೇಖರ್, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್, ಎಂ.ಶಿವಣ್ಣ, ಕಾಂಗ್ರೆಸ್ ಮುಖಂಡ ಎಚ್.ವಿ.ರಾಜೀವ್, ಕುರುಬಾರಹಳ್ಳಿಯ ಹಿರಿಯ ಮುಖಂಡ ಕ್ಯಾಂಟೀನ್ ನಾಗಣ್ಣ ಇತರರು ಇದ್ದರು.