ನಗರದ ವಿದ್ಯಾವರ್ಧಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್.ಸೋಮಶೇಖರ್, ಪಿ. ವಿಶ್ವನಾಥ್, ಶ್ರೀಶೈಲ ರಾಮಣ್ಣವರ್, ಕೃಷ್ಣ ಇದ್ದರು. 
ಮೈಸೂರು

ಸನಾತನಧರ್ಮದಿಂದ ದೇಶ ಘನತೆ ಹೆಚ್ಚಳ: ಎಚ್.ಸೋಮಶೇಖರ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಕೇವಲ ಹಾವಾಡಿಗರ ದೇಶ ಎಂದು ತೇಚೋವಧೆ ಮಾಡುತ್ತಿದ್ದ ವಿದೇಶಿಗರು
  • ಸನಾತನ ಧರ್ಮ, ಸಂಸ್ಕೃತಿ, ಭವ್ಯ ಪರಂಪರೆಯನ್ನು ಹೊಂದಿದೆ ಎನ್ನುವುದನ್ನು ಶಿಕಾಗೋ ಸರ್ವಧರ್ಮ ಸಮ್ಮೇಳನದ ಮೂಲಕ ಸ್ವಾಮಿ ವಿವೇಕಾನಂದರು ತೋರಿಸಿಕೊಟ್ಟರು
ಮೈಸೂರು: ವಿವೇಕಾನಂದರು ಸನಾತನಧರ್ಮವನ್ನು ವಿಶ್ವಕ್ಕೆ ಪರಿಚಯ ಮಾಡಿಸುವ ಮೂಲಕ ದೇಶದ ಘನತೆ ಹೆಚ್ಚುವಂತೆ ಮಾಡಿದರಲ್ಲದೇ, ನಮ್ಮ ದೇಶದ ಯುವಜನತೆಯಲ್ಲಿ ರಾಷ್ಟ್ರ ಪ್ರೇಮ ಮೂಡಿಸಿದರು ಎಂದು ಕೆನರಾ ಬ್ಯಾಂಕ್‌ನ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಚ್. ಸೋಮಶೇಖರ್ ಹೇಳಿದರು.
ಸ್ವಾಮಿ ವಿವೇಕಾನಂದ ಅವರ 164ನೇ ಜನ್ಮ ದಿನಾಚರಣೆ ಅಂಗವಾಗಿ (ರಾಷ್ಟ್ರೀಯ ಯುವ ದಿನ) ನಗರದ ವಿದ್ಯಾವರ್ಧಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಹಾವಾಡಿಗರ ದೇಶ ಎಂದು ತೇಚೋವಧೆ ಮಾಡುತ್ತಿದ್ದ ವಿದೇಶಿಗರಿಗೆ ನಮದೇಶ ಸನಾತನ ಧರ್ಮ, ಸಂಸ್ಕೃತಿ, ಭವ್ಯ ಪರಂಪರೆಯನ್ನು ಹೊಂದಿದೆ ಎನ್ನುವುದನ್ನು ಶಿಕಾಗೋ ಸರ್ವಧರ್ಮ ಸಮ್ಮೇಳನದ ಮೂಲಕ ತೋರಿಸಿಕೊಟ್ಟರು. ಅಂದಿನಿಂದ ಭಾರತವನ್ನು ವಿದೇಶಿಗರು ನೋಡುವ ದೃಷ್ಠಿಕೋನ ಬದಲಾಯಿತು ಎಂದರು.
ವಿವೇಕಾನಂದರು ಅವರ ಆದರ್ಶ ನಮಗೆಲ್ಲಾ ಸ್ಫೂರ್ತಿ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜತೆಗೆ ದೇಶ ಸೇವೆಯನ್ನು ಮಾಡಬೇಕು. ನಮ್ಮ ಸಂಸ್ಕೃತಿ, ಪರಂಪರೆಯನ್ನು ಬೆಳೆಸಬೇಕು ಎಂದು ಹೇಳಿದರು.
ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್ ಮಾತನಾಡಿ, ಧೈರ್ಯ ಇದ್ದವನು ಎಲ್ಲಾದರೂ ಗೆಲ್ಲುತ್ತಾನೆ. ಆದರೆ ಧೈರ್ಯ ಕಳೆದುಕೊಳ್ಳುವವನಿಗೆ ಎಷ್ಟೇ ಅವಕಾಶ ಸಿಕ್ಕಿದರೂ ಏನೂ ಪ್ರಯೋಜನವಾಗುವುದಿಲ್ಲ. ಒಳ್ಳೆಯ ಪುಸ್ತಕಗಳನ್ನು ಓದಿ, ರಾಮಕೃಷ್ಣ ಆಶ್ರಮದಲ್ಲಿ ಸಾಕಷ್ಟು ಪುಸ್ತಕಗಳು ಸಿಗುತ್ತವೆ, ವಿವೇಕಾನಂದರ ಶಿಕಾಗೋದಲ್ಲಿ ಮಾಡಿದ ಭಾಷಣವನ್ನು ಪುಸ್ತಕದರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಇದನ್ನೆಲ್ಲಾ ಓದಿ ಅವರ ಆದರ್ಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದೆ ಸಾಗಿ ಎಂದು ಹೇಳಿದರು.
ಖಜಾಂಚಿ ಶ್ರೀಶೈಲ ರಾಮಣ್ಣವರ್, ಪ್ರಾಂಶುಪಾಲ ಕೃಷ್ಣ, ಉಪನ್ಯಾಸಕಿ ಅಮೃತಾ ವರ್ಷಿಣಿ ಇತರರು ಇದ್ದರು.
ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ನಮ್ಮ ದೇಶಕ್ಕಾಗಿ ಓಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾವರ್ಧಕ ಪಾಲಿಟೆಕ್ನಿಕ್‌ನ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳೊಡನೆ ಸುಮಾರು 5 ಕಿಮೀ ದೂರ ಓಡಿದರು.