ಪಿರಿಯಾಪಟ್ಟಣ: ವಾಮ ಮಾರ್ಗದಲ್ಲಿ ಎಲ್ಎಲ್ಬಿ ನಕಲಿ ಪದವಿಗಳನ್ನು ಪಡೆದು ವಕೀಲ ವೃತ್ತಿ ನಡೆಸುವವರ ವಿರುದ್ಧ ಶಿಸ್ತು ಕ್ರಮ ವಹಿಸುವುದರೊಂದಿಗೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಶಿವಮೂರ್ತಿ ಹೇಳಿದರು.
ಪಟ್ಟಣದ ವಕೀಲರ ಸಂಘದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಕೀಲರ ವೃತ್ತಿ ಗೌರವ ಎತ್ತಿ ಹಿಡಿಯಲು ವಸ್ತ್ರ ಸಂಹಿತೆ ಪಾಲನೆ ಕಡ್ಡಾಯವಾಗಿದೆ. ಯಶಸ್ವಿ ವಕೀಲರು ಅವರ ಪರಿಶ್ರಮದಿಂದಲೇ ಖ್ಯಾತಿ ಗಳಿಸಿರುತ್ತಾರೆ. ನಿಯಮಗಳನ್ನು ಧಿಕ್ಕರಿಸಿ ಅಡ್ಡಮಾರ್ಗದಿಂದ ಸಾಗುವ ವಕೀಲರ ವಿರುದ್ಧ ಪರಿಷತ್ತು ತೀವ್ರ ನಿಗಾ ವಹಿಸಿದೆ ಎಂದರು.
ವಕೀಲರ ಪರಿಷತ್ತಿನಲ್ಲಿ ಹಲವು ಮಹತ್ವದ ಸುಧಾರಣೆಗಳು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಡಲಾಗುತ್ತಿದೆ ಎಂದವರು ಹೇಳಿದರು. ವಕೀಲರಿಗೆ ಜೀವವಿಮೆ ಮಾಡುವ ಸಲುವಾಗಿ ರೂ. 100 ಕೋಟಿ ಅನುದಾನವನ್ನು ಸರ್ಕಾರದಿಂದ ಕೇಳಲಾಗುತ್ತಿದೆ. ವಕೀಲರ ಮರಣ ನಿಧಿ ಮೊತ್ತ ಹೆಚ್ಚಿಸುವ ಮತ್ತು ವಕೀಲರಿಗೆ ಮಾರಾಟ ಮಾಡುತ್ತಿರುವ ಸ್ಟ್ಯಾಂಪ್ ಲೆಕ್ಕವನ್ನು ಪಾರದರ್ಶಕವಾಗಿಡುವ ಬಗ್ಗೆ ಮುಂಬರುವ ದಿನಗಳಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿವಮೂರ್ತಿ ಭರವಸೆ ನೀಡಿದರು.
ವಕೀಲರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಸಂಘದ ಮಾಜಿ ಅಧ್ಯಕ್ಷರಾದ ಸಿ.ಎಸ್.ಮಂಜುನಾಥ ಸ್ವಾಮಿ, ಕೆ.ಭಾಸ್ಕರ್, ಎನ್.ಎನ್.ಸ್ವಾಮಿಗೌಡ, ಶಿವಸ್ವಾಮಿ ಅವರು ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಶಂಕರ್, ಖಜಾಂಚಿ ಹರೀಶ್, ಉಪಾಧ್ಯಕ್ಷ ಚಂದ್ರೇಗೌಡ ಇತರರು ಹಾಜರಿದ್ದರು.