ಹುಣಸೂರು ತಾಲೂಕು ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ದಾಸ್ತಾನು ಆಗಿರುವ ವಿವಿಧ ರಸಗೊಬ್ಬರಗಳ ಮಾದರಿ ಸಂಗ್ರಹ ಕಾರ್ಯವನ್ನು ಕೃಷಿ ಇಲಾಖೆ ಅಧಿಕಾರಿಗಳು ಕೈಗೊಂಡರು. ಸಹಾಯಕ ನಿರ್ದೇಶಕ ಅನಿಲ್, ನಿಲುವಾಗಿಲು ಪ್ರಭಾಕರ್, ನಿಂಗೇಗೌಡ ಇತರರಿದ್ದರು. 
ಮೈಸೂರು

ರಾಸಾಯನಿಕ ಗೊಬ್ಬರಗಳ ಮಾದರಿ ಪ್ರಯೋಗಾಲಯಕ್ಕೆ ರವಾನೆ

ಪ್ರಮುಖ ಮುಖ್ಯಾಂಶಗಳು

  • ಕೃಷಿ ಇಲಾಖೆ ಅಧಿಕಾರಿಗಳಿಂದ ಸಂಗ್ರಹ
ಹುಣಸೂರು : ತಂಬಾಕು ಬೆಳೆಗಾರರಿಗೆ ತಂಬಾಕು ಮಂಡಳಿಯಿಂದ ಪೂರೈಸುವ ರಾಸಾಯನಿಕ ಗೊಬ್ಬರಗಳ ಮಾದರಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ಸಂಗ್ರಹಿಸಿ ರಸಗೊಬ್ಬರ ನಿಯಂತ್ರಣಾ ಪ್ರಯೋಗಾಲಯಕ್ಕೆ ರವಾನಿಸಿದರು.
ಗುರುವಾರ ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯ ಮೂರು ದಾಸ್ತಾನು ಕೊಠಡಿಗಳು ಮತ್ತು ಚಿಲ್ಕುಂದ ಮಾರುಕಟ್ಟೆಯ ಒಂದು ದಾಸ್ತಾನು ಕೊಠಡಿಯಲ್ಲಿ ಸಂಗ್ರಹಿಸಲಾಗಿದ್ದ ವಿವಿಧ ರಾಸಾಯನಿಕ ಗೊಬ್ಬರಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಿದರು.
ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಅನಿಲ್ ಮಾತನಾಡಿ, ಮಂಡಳಿಯು ಈ ಬಾರಿ ಒಟ್ಟು 3400 ಮೆಟ್ರಿಕ್ ಟನ್ ರಸಗೊಬ್ಬರಕ್ಕಾಗಿ ಬೇಡಿಕೆ ನೀಡಿದ್ದು, ಈ ಪೈಕಿ 13 ಕಂಪನಿಗಳಿಂದ ಪ್ರಸ್ತುತ 1300 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದೆ. ಎಸ್‌ಒಪಿ, ಡಿಎಪಿ, ಸಿಎನ್ ಮತ್ತು ಅಮೋನಿಯಂ ಸಲ್ಫೇಟ್ ರಸಗೊಬ್ಬರಗಳು ಸರಬರಾಜಾಗಿದ್ದು, ನಾಲ್ಕು ದಾಸ್ತಾನು ಕೊಠಡಿಯಿಂದ ಮಾದರಿಯನ್ನು ಸಂಗ್ರಹಿಸಲಾಗಿದೆ. ರಸಗೊಬ್ಬರ ನಿಯಂತ್ರಣ ಕಾಯ್ದೆ 1985ರನ್ವಯ ಎಲ್ಲ ಮಾದರಿಗಳನ್ನು ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. 3-4 ದಿನಗಳಲ್ಲಿ ಪ್ರಯೋಗಾಲಯದಿಂದ ವರದಿ ಬರಲಿದ್ದು ರಸಗೊಬ್ಬರಗಳ ಬಳಕೆ ಯೋಗ್ಯವೆಂದು ವರದಿ ಬಂದಲ್ಲಿ ರೈತರಿಗೆ ವಿತರಿಸಲು ಮಂಡಳಿಗೆ ಸೂಚಿಸಲಾಗುವುದು ಎಂದರು.
ಈ ವೇಳೆ ಕಾಫ್ ಸಮಿತಿ ಸದಸ್ಯರಾದ ನಿಲುವಾಗಿಲು ಪ್ರಭಾಕರ್, ಕುಪ್ಪೆ ನಿಂಗೇಗೌಡ, ಕೊತ್ತೇಗಾಲ ಕರುಣಾಕರ್, ರಾಜಶೇಖರ್, ಮಂಡಳಿ ಅಧಿಕಾರಿಗಳು, ಕೃಷಿ ಇಲಾಖೆ ಸಿಬ್ಬಂದಿ ಮತ್ತು ರೈತರು ಇದ್ದರು.