ಕಿರುರಂಗಮಂದಿರದಲ್ಲಿ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ‘ಅಘಲೆ’ ಏಕವ್ಯಕ್ತಿ ನಾಟಕದ ದೃಶ್ಯ. 
ಮೈಸೂರು

ಏಕವ್ಯಕ್ತಿ ಮಹಿಳಾ ನಾಟಕೋತ್ಸವ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ‘ಅಘಲೆ’
  • ಡಾ.ಸುಜಾತಾ ಅಕ್ಕಿ ಅವರ ಏಕವ್ಯಕ್ತಿ ಪ್ರದರ್ಶನ
  • ಮಹಿಳಾ ನಾಟಕೋತ್ಸವ ಸಮರೋಪ
ಮೈಸೂರು: ಕರ್ನಾಟಕ ಏಕೀಕರಣ ಟ್ರಸ್ಟ್, ಮೈಸೂರು ಹಾಗೂ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರ ಡಾ.ಸಿದ್ದನಾಥ ಬಳ್ಳಾರಿ  ಸ್ಮರಣಾರ್ಥ ನಗರದ ಕಿರುರಂಗಮಂದಿರದಲ್ಲಿ ಮೂರು ದಿನ ಕಾಲ ಆಯೋಜಿಸಲಾಗಿದ್ದ ಲೇಖಕಿ, ರಂಗಕರ್ಮಿ ಡಾ.ಸುಜಾತಾ ಅಕ್ಕಿ ಅವರ ಮೂರು ಏಕವ್ಯಕ್ತಿ ಪ್ರದರ್ಶನಗಳ ಮಹಿಳಾ ನಾಟಕೋತ್ಸವವು ಭಾನುವಾರ ‘ಅಘಲೆ’ ನಾಟಕದ ಮನೋಜ್ಞ ಪ್ರದರ್ಶನದೊಂದಿಗೆ ಸಮಾರೋಪಗೊಂಡಿತು.
ನಾಟಕ ಪ್ರದರ್ಶನಕ್ಕೂ ಮುನ್ನ ಆಯೋಜಿಸಿದ್ದ ಸಮಾರೋಪ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಸುಜಾತಾ ಅಕ್ಕಿ ಮಾತನಾಡಿ, ಮಹಿಳಾ ಬದುಕಿನ ಹೋರಾಟ, ಸಮಾನತೆ ಹಾಗೂ ಸಮಾಜದಲ್ಲಿ ಮಹಿಳೆಯ ಪಾತ್ರವನ್ನು ರಂಗಭೂಮಿಯ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಅಗತ್ಯ ಇದೆ ಎಂದರು.
ನಾಟಕೋತ್ಸವದಲ್ಲಿ ಮಹಿಳಾ ಬದುಕಿನ ವಿವಿಧ ಆಯಾಮ ಅನಾವರಣಗೊಳಿಸುವ ಮೂರು ಮಹಿಳಾ ಪ್ರಧಾನ ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಂಡವು. ಮೊದಲ ನಾಟಕ ’ಅಹಲ್ಯೆ’ಯಲ್ಲಿ ಪುರಾಣ ಪ್ರಸಿದ್ಧ ಅಹಲ್ಯೆಯ ಕಥೆಯನ್ನು ಹೊಸ ದೃಷ್ಟಿಕೋನದಲ್ಲಿ ನಿರೂಪಿಸಲಾಗಿದೆ.
 ಇಂದ್ರನ ಮೋಸದ ಜಾಲದಲ್ಲಿ ಸಿಲುಕಿ ತನ್ನದೇ ಅಲ್ಲದ ತಪ್ಪಿಗೆ ಗೌತಮ ಮುನಿಯ ಶಾಪಕ್ಕೆ ಗುರಿಯಾದ ಅಹಲ್ಯೆಯನ್ನು ಸಾಂಪ್ರದಾಯಿಕ ಕಥೆಯಂತೆ ಕಲ್ಲಾಗಿಸುವ ಬದಲು, ಲೇಖಕಿ ಡಾ. ಸುಜಾತಾ ಅಕ್ಕಿ ಆಕೆಯನ್ನು ಕಾಡಿಗೆ ಕಳುಹಿಸುವ ಮೂಲಕ ಆತ್ಮಾವಲೋಕನ ಮತ್ತು ಸ್ವಾಭಿಮಾನದ ಪ್ರತೀಕವಾಗಿ ಚಿತ್ರಿಸಿದರು.
ಎರಡನೇ ನಾಟಕದಲ್ಲಿ ‘ಅಕ್ಕನಾಗಲೆ’ಯ ಹೋರಾಟಮಯ ಬದುಕನ್ನು ತೆರೆದಿಡಲಾಗಿದೆ. ಬಾಲ್ಯದಲ್ಲೇ ತಮ್ಮ ಬಸವಣ್ಣನೊಂದಿಗೆ ಕಲ್ಯಾಣಕ್ಕೆ ತೆರಳಿ, ಸಾಮಾಜಿಕ ಅಸಮಾನತೆ ಹಾಗೂ ಜಾತಿ-ಲಿಂಗ ಭೇದದ ವಿರುದ್ಧ ಹೋರಾಡಿದ ಅಕ್ಕನಾಗಲೆಯ ಧೈರ್ಯ, ಸಂಕಲ್ಪ ಮತ್ತು ಸಾಮಾಜಿಕ ಕಾಳಜಿ ನಾಟಕ ಪರಿಣಾಮಕಾರಿಯಾಗಿಸಿತು.
ಸಮಾರೋಪದ ’ಅಘಲೆ’ ನಾಟಕವು ಮಹಿಳೆಯ ಇತಿಹಾಸ, ನಾಗರಿಕತೆಯ ಬೆಳವಣಿಗೆ ಹಾಗೂ ಇಂದಿನ ಸಾಮಾಜಿಕ ವಾಸ್ತವವನ್ನು ಒಟ್ಟುಗೂಡಿಸಿದ ಚಿಂತನಾತ್ಮಕ ಕೃತಿಯಾಗಿದ್ದು, ‘ಅಘಲೆ’ ಪಾತ್ರದಲ್ಲಿ ಕಾವ್ಯ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. 
ಭಾವಪೂರ್ಣ ಅಭಿನಯ, ಪರಿಣಾಮಕಾರಿ ಸಂಭಾಷಣೆ, ಸಂಗೀತ ಹಾಗೂ ಬೆಳಕಿನ ವಿನ್ಯಾಸ ನಾಟಕದ ಪ್ರಕರತೆಯನ್ನು ಮತ್ತಷ್ಟು ಹೆಚ್ಚಿಸಿತು. ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ, ಶೋಷಣೆ ಹಾಗೂ ಸಾಮಾಜಿಕ ಅಸಮಾನತೆಗಳ ಕುರಿತು ಪ್ರೇಕ್ಷಕರಲ್ಲಿ ಗಂಭೀರ ಚಿಂತನೆ ಮೂಡಿಸುವಲ್ಲಿ ನಾಟಕ ಯಶಸ್ವಿಯಾಯಿತು.
 ಮೂರು ನಾಟಕಗಳ ರಂಗಪಠ್ಯವನ್ನು ರೂಪಿಸಿ ನಿರ್ದೇಶಕ ಅರಸೀಕೆರೆ ಯೋಗಾನಂದ ಯಶಸ್ವಿಯಾಗಿ ರಂಗದ ಮೇಲೆ ತಂದರು. ಸಂಗೀತವನ್ನು ಸಿದ್ದೇಶ್ವರ ಬದನವಾಳು ಹಾಗೂ ಸುಬ್ರಮಣ್ಯ ಸಂಯೋಜಿಸಿದ್ದು, ಬೆಳಕಿನ ವಿನ್ಯಾಸವನ್ನು ಜೀವನ್ ಕುಮಾರ್ ಬಿ. ಹೆಗ್ಗೋಡು ನಿರ್ವಹಿಸಿದ್ದರು. ಮೂರು ನಾಟಕಗಳ ರಚನೆ ಡಾ.ಸುಜಾತಾ ಅಕ್ಕಿ ಅವರದ್ದಾಗಿದೆ.
ಹಿರಿಯ ರಂಗಕರ್ಮಿ ಎನ್.ಎಸ್. ಗೋಪಿನಾಥ್, ಪೃಥ್ವಿ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ಅರಸೀಕೆರೆ ಯೋಗಾನಂದ, ‘ನಿರಂತರ’ದ ನಿರ್ದೇಶಕ ಶ್ರೀನಿವಾಸ್ ಪಾಲಹಳ್ಳಿ, ಪ್ರೊ.ಭಾಗ್ಯಲಕ್ಷ್ಮೀ, ನಿಸರ್ಗ, ಡಾ.ದಿವ್ಯಾ ಸೇರಿದಂತೆ ಅನೇಕ ರಂಗಕರ್ಮಿಗಳು, ಸಾಹಿತ್ಯಾಸಕ್ತರು, ಕಲಾಭಿಮಾನಿಗಳು ಹಾಗೂ ಪ್ರೇಕ್ಷಕರು ಇದ್ದರು.