ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಂಟಿಲ ಮತ್ತು ದುಡ್ಡಿನ ದೇವರು ಕೃತಿಯನ್ನು ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಬಿಡುಗಡೆ ಮಾಡಿದರು. ಪ್ರೊ.ಎಚ್.ಎಸ್. ಉಮೇಶ್, ರಾಮೇಶ್ವರಿ ವರ್ಮ, ಜಿ. ಕಪ್ಪಣ್ಣ ಇದ್ದರು.
ಮೈಸೂರು: ಪ್ರಸ್ತುತ ಹವ್ಯಾಸಿ ರಂಗಭೂಮಿ ಚಟುವಟಿಕೆ ಕಡಿಮೆಯಾಗಿದೆ ಎಂದು ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಬೇಸರ ವ್ಯಕ್ತಪಡಿಸಿದರು.
ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಸಮತೆಂತೋ ರಂಗತಂಡ ಆಯೋಜಿಸಿರುವ ‘ಸಮತೆಂತೋ ರಂಗ ಸಂಭ್ರಮ’ ನಾಟಕೋತ್ಸವದ ಉದ್ಘಾಟನೆ ಹಾಗೂ ಕುಂಟಿಲ ಮತ್ತು ದುಡ್ಡಿನ ದೇವರು ಕೃತಿ ಬಿಡುಗಡೆ ಮಾಡಿ ಮಾತನಾಡಿ, ಹವ್ಯಾಸಿ ಎಂಬ ಪುಟ್ಟ ಸಮುದಾಯದಲ್ಲಿ ಅನೇಕರ ಭೇಟಿ, ವಿಮರ್ಷೆ ನಡೆಯುತಿತ್ತು. ಅಂತಹ ತಂಡಗಳೇ ಮೌಲಿಕವಾದ ಮಹಾನ್ ನಾಟಕಗಳನ್ನು, ಸಂಸ್ಕೃತಿಯನ್ನು ಸಮಾಜಕ್ಕೆ ನೀಡಿದ್ದು, ಈ ಸಂಪ್ರದಾಯ ರಕ್ಷಿಸುವ ಅಗತ್ಯವಿದೆ ಎಂದರು.
ಪಾಶ್ಚಿಮಾತ್ಯ ಪರಂಪರೆಯಲ್ಲಿ ದುರಂತ ನಾಟಕವೇ ಶ್ರೇಷ್ಠ ಎಂಬ ಪರಂಪರೆ ಬೆಳೆದಿತ್ತು. ಆ ಸಮಯದಲ್ಲಿ ತಮಾಷೆ ನಾಟಕ ಸೆಡ್ಡು ಹೊಡೆದು ನಿಂತು ಸೈದ್ಧಾಂತಿಕ ನಿಲುವನ್ನು ಪ್ರತಿಪಾದಿಸಿತು. ಕನ್ನಡದಲ್ಲಿ ದುರಂತ ನಾಯಕ, ನಗೆ ನಾಟಕ ಪ್ರತ್ಯೇಕತೆ ಇಲ್ಲ ಎಂದು ಹೇಳಿದರು.
ರಂಗ ಸಂಘಟಕ ಜಿ.ಕಪ್ಪಣ್ಣ ಮಾತನಾಡಿ, ಮೈಸೂರಿನಲ್ಲಿ ರಂಗಭೂಮಿ ಚಳವಳಿ ನಡೆಯುತ್ತಿದ್ದು, ರಂಗಭೂಮಿಗೆ ಬೆಂಗಳೂರಿಗಿಂತ ಉತ್ತಮ ವಾತಾವರಣ ಇಲ್ಲಿದೆ ಎಂದು ಹೇಳಿದರು. ಸಮತೆಂತೋ ಅಧ್ಯಕ್ಷೆ ರಾಮೇಶ್ವರಿ ವರ್ಮ, ಸದಸ್ಯ ಪ್ರೊ.ಎಚ್.ಎಸ್. ಉಮೇಶ್ ಇದ್ದರು.