Mysore Marathon’ 
ಮೈಸೂರು

ಮಾ.1ರಂದು ‘ಸೇಫ್ ಮೈಸೂರು ಮ್ಯಾರಥಾನ್’

ಅವಿನಾಶ್ ಜೈನಹಳ್ಳಿ
ಮೈಸೂರು ನಗರ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ಮಾ.1ರಂದು ‘ನಮ್ಮ ಪೊಲೀಸ್, ನಮ್ಮ ಹೆಮ್ಮೆ’ ಶೀರ್ಷಿಕೆಯಲ್ಲಿ ‘ಸೇಫ್ ಮೈಸೂರು ಮ್ಯಾರಥಾನ್-2026’ ಯೋಜಿಸಲಾಗಿದೆ.
ನಗರದ ಎಸ್ಪಿ ಕಚೇರಿಯಲ್ಲಿರುವ ಐಜಿಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇಫ್ ಮೈಸೂರು ಮ್ಯಾರಥಾನ್-2026ಪೋಸ್ಟರ್‌ಗಳನ್ನು ದಕ್ಷಿಣ ವಲಯ ಐಜಿಪಿ ಎಂ.ಬಿ.ಬೋರಲಿಂಗಯ್ಯ ಬಿಡುಗಡೆ ಮಾಡಿದರು.
ನಗರ ಹಾಗೂ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ನಡೆಯುವ ಮ್ಯಾರಥಾನ್‌ಗೆ ಮೈಸೂರು ವಿಶ್ವವಿದ್ಯಾಲಯ ಹಾಗೂ ಇನ್ನಿತರ ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸಿವೆ.
ಐಜಿಪಿ ಎಂ.ಬಿ.ಬೋರಲಿಂಗಯ್ಯ, ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಂತೆ ಜಾಗೃತಿ ಮೂಡಿಸುವುದು ಹಾಗೂ ಸೈಬರ್ ಅಪರಾಧ ತಡೆಗೆ ಸಾರ್ವಜನಿಕರ ಭಾಗವಹಿಸುವಿಕೆ ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಸೇಫ್ ರನ್ ಉಪಕ್ರಮದ ಮೂರನೇ ಆವೃತ್ತಿಯಾಗಿ ಸೇಫ್ ಮೈಸೂರು ಮ್ಯಾರಥಾನ್ ನಡೆಸಲಾಗುತ್ತಿದೆ. ಕಳೆದ ವರ್ಷದ ನಡೆದ ಎರಡನೇ ಆವೃತ್ತಿಯಲ್ಲಿ 9 ಸಾವಿರ ಜನರು ಭಾಗವಹಿಸಿದ್ದರು. ಇದು ಕರ್ನಾಟಕದಲ್ಲಿ ಈ ರೀತಿಯ ಓಟಕ್ಕೆ ದಾಖಲಾಗಿರುವ ಅತಿದೊಡ್ಡ ಭಾಗವಹಿಸುವಿಕೆಯಾಗಿದ್ದು, ಈ ಬಾರಿ ಕೂಡ 5,000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ 5 ಕಿಮೀ ಹಾಗೂ 10 ಕಿಮೀ ಓಟಕ್ಕೆ ಪ್ರತ್ಯೇಕ ಮಾರ್ಗಗಳನ್ನು ರೂಪಿಸಲಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವ ಮ್ಯಾರಥಾನ್ ಆರಂಭಿಕ ಸ್ಥಳದಲ್ಲೇ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪ ಪೊಲೀಸ್ ಆಯುಕ್ತ ಸುಂದರ್‌ರಾಜ್, ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಯೋಗಾತ್ಮ ಶ್ರೀಹರಿ, ಚಿರಾಗ್ ಆ್ಯಡ್ಸ್‌ನ ವಿವೇಕ್ ಇದ್ದರು.