ಮೈಸೂರಿನ ನಾದಬ್ರಹ್ಮ ಸಂಗೀತಸಭಾದಲ್ಲಿ ಶ್ರೀ ಬಾಲಮುರಳಿ ಮ್ಯೂಸಿಕಲ್‌ ಗ್ರೂಪ್‌ ಭಾನುವಾರ ಏರ್ಪಡಿಸಿದ್ದ ಮದುರಗೀತೆಗಳ ಸುಮಧುರ ಸಂಜೆ ಕಾರ್ಯಕ್ರಮವನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಉದ್ಘಾಟಿಸಿದರು. 
ಮೈಸೂರು

ಸಾಧಿಸುವ ಛಲ, ಆತ್ಮವಿಶ್ವಾಸಕ್ಕೆ ಎಸ್‌. ಜಾನಕಿಯವರೇ ನಿದರ್ಶನ- ನಾಗರಾಜ ವಿ.ಬೈರಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಬಾಲಮುರಳಿ ಮ್ಯೂಸಿಕಲ್‌ ಗ್ರೂಪ್‌ನಿಂದ ಮಧುರಗೀತೆಗಳ ಸುಮಧುರ ಸಂಜೆ

ಸಾಧಿಸುವ ಛಲ ಹಾಗೂ ಆತ್ಮವಿಶ್ವಾಸ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಖ್ಯಾತ ಗಾಯಕಿ ಎಸ್‌. ಜಾನಕಿಯವರೇ ನಿದರ್ಶನ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಹೇಳಿದರು.

ಶ್ರೀ ಬಾಲಮುರಳಿ ಮ್ಯೂಸಿಕಲ್‌ ಗ್ರೂಪ್‌ ನಗರದ ಜೆಎಲ್‌ಬಿ ರಸ್ತೆಯ ಶ್ರೀ ನಾದಬ್ರಹ್ಮ ಸಂಗೀತಸಭಾದಲ್ಲಿ ಭಾನುವಾರ ಏರ್ಪಡಿಸಿದ್ದ ಮಧುರಗೀತೆಗಳ ಸುಮಧುರ ಸಂಜೆ- ಕರೋಕೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸತತ ಅರವತ್ತು ವರ್ಷಗಳ ಕಾಲ, 17 ಭಾಷೆಗಳಲ್ಲಿ, 48,000 ಗೀತೆಗಳನ್ನು ಹಾಡುವುದು ಅಷ್ಟು ಸುಲಭದ ಮಾತಲ್ಲ. ಅವರಿಗೆ ಆತ್ಮವಿಶ್ವಾಸ,. ಛಲ ಇದ್ದಿದ್ದರಿಂದ ಇದು ಸಾಧ್ಯವಾಯಿತು ಎಂದರು.

ಒಮ್ಮೆ ಸಿ. ಅಶ್ವತ್ಥ್‌ ಅವರು ಎಸ್‌. ಜಾನಕಿ ಅವರಿಂದ 'ದೀಪವು ನಿನ್ನದೇ ಗಾಳಿಯು ನಿನ್ನದೇ...' ಹಾಡನ್ನು ರೆಕಾರ್ಡಿಂಗ್‌ ಮಾಡಿಸಬೇಕಿತ್ತು. 106 ಡಿಗ್ರಿ ಜ್ವರದಿಂದ ಬಳಲುತ್ತಿದ್ದ ಜಾನಕಿಯವರು ಸ್ಟುಡಿಯೋಗೆ ಬಂದಾಗ ಲಿಫ್ಟ್‌ ಕೆಲಸ ಮಾಡುತ್ತಿರಲಿಲ್ಲ. ಆದರೂ ಮೂರು ಮಹಡಿಗಳನ್ನು ಮೆಟ್ಟಿಲುಗಳ ಮೂಲಕವೇ ಏರಿ, ಈ ಗೀತೆಯನ್ನು ರೆಕಾರ್ಡಿಂಗ್‌ ಮಾಡಿದರು. ಇದು ಅದ್ಭುತವಾಗಿ ಮೂಡಿ ಬಂದಿತು. ಈ ಪ್ರಕರಣ ಎಲ್ಲಾ ಗಾಯಕ- ಗಾಯಕರಿಗೆ ಆದರ್ಶವಾಗಬೇಕು ಎಂದು ಅವರು ಹೇಳಿದರು.

ಕನ್ನಡ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಎಚ್. ಪ್ರಕಾಶ್‌, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ರಾಘವೇಂದ್ರ ಆಚಾರ್‌ ಮುಖ್ಯಅತಿಥಿಗಳಾಗಿದ್ದರು.

ಕೆ.. ಪ್ರಕಾಶ್‌, ಜಿ. ಶ್ರೀಧರ, ನೀತು ಉಮೇಶ್‌, ಪಲ್ಲವಿ ಪೈ, .ಪಿ. ಭುವನ್‌, .ಪಿ. ಯಶಸ್‌ ಅವರು ಡಾ.ರಾಜ್‌ಕುಮಾರ್‌, ಪಿ.ಬಿ. ಶ್ರೀನಿವಾಸ್‌, ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ಎಸ್‌. ಜಾನಕಿ,. ಸಿ. ಅಶ್ವತ್ಥ್, ಮೈಸೂರು ಅನಂತಸ್ವಾಮಿ ಅವರು ಹಾಡಿರುವ ಗೀತೆಗಳನ್ನು ಪ್ರಸ್ತುತಪಡಿಸಿದರು. . ಕೆ.ಜಿ. ವೆಂಕಟೇಶ್‌ ಕಾರ್ಯಕ್ರಮ ನಿರೂಪಿಸುವರು. ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಸಭಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು.

ನಾದಬ್ರಹ್ಮ ಸಂಗೀತಸಭಾ ಟ್ರಸ್ಟ್‌ ಅವ್ಯವಸ್ಥೆ ಸರಿಪಡಿಸಲಿ- ಬೈರಿ ಮನವಿ

ವರ್ಷದ 365 ದಿನಗಳಲ್ಲಿ 300 ದಿನಗಳಾದರೂ ಕಾರ್ಯಕ್ರಮ ನಡೆಯುವ ನಾದಬ್ರಹ್ಮ ಸಂಗೀತಸಭಾದಲ್ಲಿರುವ ಕೆಲವೊಂದು ಅವ್ಯವಸ್ಥೆಯನ್ನು ಟ್ರಸ್ಟ್‌ ಸರಿಪಡಿಸಬೇಕು ಎಂದು ನಾಗರಾಜ ವಿ. ಬೈರಿ ಮನವಿ ಮಾಡಿದರು.

ಇತ್ತೀಚೆಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರ ಅನುದಾನದಲ್ಲಿ ಸಭಾಂಗಣವನ್ನು ನವೀಕರಿಸಲಾಗಿದೆ. ಆದರೂ ಬಾಗಿಲುಗಳನ್ನು ಮುಚ್ಚಲಾಗುವುದಿಲ್ಲ. ಕಿಟಕಿಗಳಿಗೆ ಪರದೆಗಳಿಲ್ಲ. ಗಾಯನ ತಂಡಗಳಿಗೆ ಹೊಂದಾಣಿಕೆಯಾಗದ ಟ್ರಸ್ಟಿನ ಸೌಂಡ್‌ ಸಿಸ್ಟ್‌ ಅನ್ನೇ ಬಳಸುವಂತೆ ಷರತ್ತು ವಿಧಿಸಲಾಗುತ್ತಿದೆ. ಅಕಾಸ್ಟಿಕ್‌ ವ್ಯವಸ್ಥೆ ಕೂಡ ಸರಿಯಿಲ್ಲ. ಅಕ್ಕಪಕ್ಕದವರಿಗೆ ಶಬ್ದ ಕೇಳಿಸದಂತಾಗಲು ಇದನ್ನೆಲ್ಲಾ ಸರಿಪಡಿಸಬೇಕು ಎಂದು ಅವರು ಕೋರಿದರು.


ಈ ಬಗ್ಗೆ ಎಲ್ಲಾ ಗಾಯನ ತಂಡಗಳು ನಿಯೋಗದಲ್ಲಿ ಶಾಸಕ ಟಿ
.ಎಸ್. ಶ್ರೀವತ್ಸ ಅವರನ್ನು ಭೇಟಿ ಮಾಡಲಾಗುವುದು ಎಂದರು.