ಕೆ.ಆರ್.ನಗರ ತಾಲೂಕಿನ ಬಸವರಾಜಪುರ ಗ್ರಾಮದ ಶ್ರೀ ಶನೈಶ್ಚರ ಸ್ವಾಮಿ ದೇವಾಲಯ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ವತಿಯಿಂದ ಮಂಜೂರಾದ ಅನುದಾನದ ಚೆಕ್ ನ್ನು ಸದಾನಂದ್ ದೇವಾಡಿಗ ವಿತರಿಸಿದರು. ಜಿಪಂ ಮಾಜಿ ಸದಸ್ಯ ಸಿದ್ದಪ್ಪ, ಮುಖಂಡರಾದ ಮಂಜುನಾಥ್, ಸ್ವಾಮಿ ಇತರರು ಇದ್ದರು.
ಕೆ.ಆರ್.ನಗರ: ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ ಎಂಬ ಆಡು ಮಾತಿಗೆ ಮತ್ತೊಂದು ಹೆಸರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸದಾನಂದ್ ದೇವಾಡಿಗ ಹೇಳಿದರು.
ತಾಲೂಕಿನ ಬಸವರಾಜಪುರ ಗ್ರಾಮದದಲ್ಲಿ ಇತ್ತಿಚೇಗೆ ಶ್ರೀಶನೈಶ್ಚರ ಸ್ವಾಮಿ ದೇವಾಲಯ ಕಟ್ಟಡ ನಿರ್ಮಾಣಕ್ಕೆ ಶ್ರೀಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ವತಿಯಿಂದ ಮಂಜೂರಾದ ಒಂದು ಲಕ್ಷ ರೂ.ಅನುದಾನದ ಚೆಕ್ ವಿತರಿಸಿ ಮಾತನಾಡಿದರು. ಡಾ.ವೀರೇಂದ್ರ ಹೆಗಡೆ ಅವರ ಕನಸಿನ ಕೂಸಾದ ಯೋಜನೆ ಇಂದು ಕರ್ನಾಟಕದ ಹಳ್ಳಿ ಹಳ್ಳಿಯಲ್ಲೂ ತಲೆಯೆತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪರಿವರ್ತನೆಗೆ ಹೊಸ ಭಾಷ್ಯ ಬರೆದಿದೆ. ಹಾಗಾಗಿ ಗಾಂಧೀಜಿಯವರ ಗ್ರಾಮ ರಾಜ್ಯದ ಪರಿಕಲ್ಪನೆ ಈ ಯೋಜನೆಯಿಂದ ಸಾಕಾರಗೊಳ್ಳುತ್ತಿದೆ ಎಂದು ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಮಾಜದ ಎಲ್ಲ ವರ್ಗಕ್ಕೂ ಆರ್ಥಿಕ ನೆರವು ನೀಡುವ ಮೂಲಕ ಶಕ್ತಿ ತುಂಬಿದೆ. ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಕೂಲಿ ಕಾರ್ಮಿಕರು, ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ, ಕೃಷಿ ಮೇಳ, ತರಬೇತಿ, ಮಾನವ ಸಂಪನ್ಮೂಲ ಬಳಕೆ, ಕೆರೆಕಟ್ಟೆಗಳ ಪುನಶ್ಚೇತನ ಹೀಗೆ ಹಲವಾರು ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಕುಡಿತದ ಚಟವನ್ನು ಬಿಡಿಸಲು ಮದ್ಯವರ್ಜನ ಶಿಬಿರವನ್ನು ಎಲ್ಲೆಡೆ ಹಮ್ಮಿಕೊಂಡು, ಸಾವಿರಾರು ಜನರು ಕುಡಿತದಿಂದ ವಿಮುಕ್ತಿ ಪಡೆದು ನೆಮ್ಮದಿಯ ಬದುಕು ನಡೆಸುವಂತಾಗಿದೆ. ಇಂತಹ ಬದಲಾವಣೆಯಿಂದ ಬದುಕಿನ ಸಾರ್ಥಕತೆ ಕಾಣಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸಿದ್ದಪ್ಪ, ಗ್ರಾಮದ ಮುಖಂಡರಾದ ಮಂಜುನಾಥ್, ಸ್ವಾಮಿ, ಮಾದಯ್ಯ, ರಘುನಂದನ್, ಸುರೇಶ್, ರಾಮಕೃಷ್ಣ, ಸಂಸ್ಥೆಯ ಮೇಲ್ವಿಚಾರಕ ಬಿ.ರವಿ, ಸೇವಾ ಪ್ರತಿನಿಧಿ ವಿಶಾಲಾಕ್ಷಿ ಇದ್ದರು.