ಶ್ರೀಛಾಯಾದೇವಿ ದತ್ತು ಕೇಂದ್ರದಲ್ಲಿ ಆಯೋಜಿಸಿದ್ದ ದತ್ತು ಸ್ವೀಕಾರ ಜನಜಾಗೃತಿ ಕಾರ್ಯಕ್ರಮಕ್ಕೆ ಅಂಶಿ ಪ್ರಸನ್ನಕುಮಾರ್ ಚಾಲನೆ ನೀಡಿದರು. ಎನ್.ಟಿ. ಯೋಗೇಶ್, ಭಾನುಪ್ರಕಾಶ್, ಎಂ. ರವಿಚಂದ್ರ, ಸಿ.ಆರ್. ಸ್ವರಾಜ್, ಅಂಥೋಣಿ ಪಾಲ್‌ರಾಜ್, ಮಹೇಂದ್ರ ಇದ್ದರು. 
ಮೈಸೂರು

ದತ್ತು ಸ್ವೀಕಾರಕ್ಕೆ ನಿಯಮ ಪಾಲನೆ ಅಗತ್ಯ : ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎನ್.ಟಿ.ಯೋಗೇಶ್

ಮೈಸೂರು: ಸಿನಿಮಾದಲ್ಲಿ ಆಗುವಂತೆ ಬೇಕೆನಿಸಿದಾಗ ಅನಾಥಾಶ್ರಮಕ್ಕೆ ಹೋಗಿ ಮಕ್ಕಳನ್ನು ದತ್ತು ಪಡೆಯಲು ಸಾಧ್ಯವಿಲ್ಲ. ಅದಕ್ಕೆ ನೀತಿ, ನಿಯಮಗಳಿದ್ದು, ಕಾನೂನು ಪ್ರಕಾರವೇ ದತ್ತು ಸ್ವೀಕಾರ ಪ್ರಕ್ರಿಯೆ ನಡೆಯಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎನ್.ಟಿ. ಯೋಗೇಶ್ ತಿಳಿಸಿದರು.
ಜಯನಗರದ ಶ್ರೀಛಾಯಾದೇವಿ ದತ್ತು ಕೇಂದ್ರದಲ್ಲಿ ಆಯೋಜಿಸಿದ್ದ ದತ್ತು ಸ್ವೀಕಾರ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಕಷ್ಟು ಸಿನಿಮಾಗಳಲ್ಲಿ ಅನಾಥಾಶ್ರಮಕ್ಕೆ ಹೋಗಿ ಮಕ್ಕಳನ್ನು ಸುಲಭವಾಗಿ ದತ್ತು ಪಡೆಯುವುದನ್ನು ನೋಡಿದ್ದೇವೆ. ಆದರೆ ನಿಜ ಜೀವನದಲ್ಲಿ ಅದು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ಕಾನೂನು ಪ್ರಕ್ರಿಯೆ ಇದ್ದು, ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾದ ಸಂಸ್ಥೆ ಮೂಲಕವೇ ದತ್ತು ಸ್ವೀಕರಿಸಬೇಕು. ಇಲ್ಲವಾದರೆ ಐದು ವರ್ಷ ಕಾರಾಗೃಹವಾಸ ಅನುಭವಿಸಬೇಕಾಗುತ್ತದೆ ಎಂದರು. 
ಮಕ್ಕಳ ಕಳ್ಳ ಸಾಗಣೆ ತಡೆಯುವ ಉದ್ದೇಶದಿಂದ ಈ ಕಾನೂನು ರೂಪಿಸಲಾಗಿದೆ.  ಅನಾಥ ಮಕ್ಕಳು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಮಾಹಿತಿ ನೀಡುವಂತೆ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ. ರವಿಚಂದ್ರ ಮಾತನಾಡಿ, ಮಕ್ಕಳು ಈ ದೇಶದ ಸಂಪತ್ತು. ಹೀಗಾಗಿ ಮಕ್ಕಳನ್ನು ನಿರ್ಲಕ್ಷ್ಯ ಮಾಡಬೇಡಿ. ಅಮ್ಮ ಎಂದರೇ ಶಕ್ತಿ. ಮಕ್ಕಳ ಸಂಕಷ್ಟಗಳಾಗಿ ಆಗುವವಳು. ಆದರೂ ಬೇರೆ ಬೇರೆ ಕಾರಣಗಳಿಂದ ಮಕ್ಕಳನ್ನು ತ್ಯಜಿಸಿದಲ್ಲಿ ಸಹಾಯವಾಣಿಗೆ ತಿಳಿಸಿ ಎಂದು ಕೋರಿದರು.
ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಎಂ. ಮಹದೇವ ಕೋಟೆ ಮಾತನಾಡಿದರು. ಅರ್ಹ ದಂಪತಿಗೆ ಮಗುವನ್ನು ಹಸ್ತಾಂತರಿಸುವ ಮೂಲಕ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಿತಿಯ ಸದಸ್ಯರಾದ ಸಿ.ಆರ್. ಸ್ವರಾಜ್, ಎಚ್.ವಿ. ಸರಸ್ವತಿ, ಎಸ್.ಆರ್.ರಾಣಿ ಮಾತನಾಡಿದರು.
 ಮಕ್ಕಳ ವೈದ್ಯ ಡಾ.ಮನೋಹರ್, ದತ್ತು ಕೇಂದ್ರದ ಅಧ್ಯಕ್ಷ ಭಾನುಪ್ರಕಾಶ್, ಸಂಯೋಜಕ ಮಹೇಂದ್ರ, ಶ್ರೀಛಾಯಾದೇವಿ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಅಂಥೋಣಿ ಪಾಲ್ ರಾಜ್ ಇತರರಿದ್ದರು. ಕೆ.ಆರ್. ಪೇಟೆ ಶಾಖೆಯ ಸಮಾಜಕಾರ್ಯ ಸ್ನಾತಕೋತ್ತರ, ಭಾರತೀನಗರ ಸಮಾಜಕಾರ್ಯ ಸ್ನಾತಕೋತ್ತರ ವಿದ್ಯಾರ್ಥಿಗಳು, ಅಧ್ಯಾಪಕರು, ಪಾಲಕರು ಉಪಸ್ಥಿತರಿದ್ದರು. 
ಮೂರು ವರ್ಷದಲ್ಲಿ 80 ಮಕ್ಕಳು ದಾಖಲು 
ಮೈಸೂರು: ತಂದೆ, ತಾಯಿಗಳಿಂದ ತ್ಯಜಿಸಲ್ಪಟ್ಟ 80 ಮಕ್ಕಳು ಕಳೆದ ಮೂರು ವರ್ಷದಲ್ಲಿ ಸಂಸ್ಥೆಗೆ ದಾಖಲಾಗಿವೆ ಎಂದು ಶ್ರೀಛಾಯಾದೇವಿ ದತ್ತು ಕೇಂದ್ರದದ ಅಧ್ಯಕ್ಷ ಭಾನುಪ್ರಕಾಶ್ ತಿಳಿಸಿದರು.
ತಂದೆ- ತಾಯಿ, ಸಂಬಂಧಿಕರು ಬೇಡವೆಂದು ತ್ಯಜಿಸಿದ ಒಂದರಿಂದ 6 ವರ್ಷದೊಳಗಿನ ಮಕ್ಕಳನ್ನು ಕೇಂದ್ರಕ್ಕೆ ನೀಡಬಹುದು. ಈ ಮಕ್ಕಳನ್ನು ಉತ್ತಮ ರೀತಿಯಲ್ಲಿ ಪಾಲನೆ-ಪೋಷಣೆ ಮಾಡಲಾಗುತ್ತದೆ ಎಂದರು. 
ಮೊದಲು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಎರಡು ತಿಂಗಳ ಕಾಲ ಕಾಯಲಾಗುವುದು. ಯಾರೂ ಬಾರದಿದ್ದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತರಲಾಗುತ್ತದೆ. ಅವರು ದತ್ತುಮುಕ್ತ ಆದೇಶದ ಪ್ರತಿ ನೀಡಿದ ನಂತರ ಮಗುವಿನ ಮಾಹಿತಿಯನ್ನು ‘ಕಾರಾ’ ಜಾಲತಾಣದಲ್ಲಿ ಹಾಕಲಾಗುವುದು. ಮುಂದೆ ನೋಂದಾಯಿಸಿಕೊಂಡವರ ಪೂರ್ವಾಪರ ಪರಿಶೀಲಿಸಿ, ನಿಜವಾಗಿಯೂ ದತ್ತು ಪಡೆಯಲು ಆಸಕ್ತಿ ಇದೆಯೇ ಎಂದು ಖಚಿತಪಡಿಸಿಕೊಂಡು ಜ್ಯೇಷ್ಠತೆಯ ಆಧಾರದ ಮೇಲೆ ಮಕ್ಕಳನ್ನು ದತ್ತುವಾಗಿ ನೀಡಲಾಗುತ್ತದೆ ವಿವರಿಸಿದರು.
ಕೇಂದ್ರಕ್ಕೆ ಕಳೆದ ಮೂರು ವರ್ಷಗಳಲ್ಲಿ 80 ಮಕ್ಕಳು ದಾಖಲಾಗಿದ್ದಾರೆ. ಈ ಪೈಕಿ 10 ಮಕ್ಕಳು ವಿಶೇಷಚೇತನರಾಗಿದ್ದು, 6 ಮಕ್ಕಳನ್ನು ವಿದೇಶಿ ದಂಪತಿಗಳಿಗೆ ದತ್ತು ನೀಡಲಾಗಿದೆ. 20 ಮಕ್ಕಳನ್ನು ರಾಜ್ಯ ಹಾಗೂ ಹೊರ ರಾಜ್ಯದ ಮಕ್ಕಳಿಲ್ಲದ ದಂಪತಿಗಳಿಗೆ ಕಾನೂನುಬದ್ಧವಾಗಿ ದತ್ತು ನೀಡಲಾಗಿದೆ ಎಂದರು. 
20 ಮಕ್ಕಳ ಪಾಲಕರನ್ನು ಪತ್ತೆ ಮಾಡಿ ಒಪ್ಪಿಸಲಾಗಿದೆ. ಪ್ರಸ್ತುತ ಕೇಂದ್ರದಲ್ಲಿ 20 ಮಕ್ಕಳಿದ್ದು, ಅವರಲ್ಲಿ 6 ವಿಶೇಷಚೇತರು. ದತ್ತು ಪಡೆಯಲು ಅಥವಾ ಜಿಲ್ಲೆಯಲ್ಲಿ ಅನಾಥ ಮಕ್ಕಳು ಕಂಡು ಬಂದಲ್ಲಿ ಶ್ರೀಛಾಯಾದೇವಿ ದತ್ತು ಕೇಂದ್ರವನ್ನು ಸಂಪರ್ಕಿಸಬಹುದು ಎಂದರು.