ಶಾಲಾ ಮಕ್ಕಳು 
ಮೈಸೂರು

ಆರ್‌ಟಿಇ 9ನೇ ತರಗತಿ ಮಕ್ಕಳು ಕಂಗಾಲು..!

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • 9ನೇ ತರಗತಿ ಶುಲ್ಕ ಪಾವತಿಸಲು ಖಾಸಗಿ ಶಾಲೆಗಳು ತಾಕೀತು
  • ಆರ್ಥಿಕ ಹೊರೆಯಿಂದ ಪಾಲಕರು ಹೈರಾಣ
  • ಆರ್ ಟಿಇ ಮಕ್ಕಳನ್ನು ಅರ್ಧದಾರಿಯಲ್ಲೇ ಕೈಬಿಡಬೇಡಿ
  • ಕನಿಕರ ತೋರದ ಖಾಸಗಿ ಶಾಲೆಗಳು

ಮಂಜುನಾಥ ತಿಮ್ಮಯ್ಯ ಮೈಸೂರು

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಈಗಾಗಲೇ ಕಲಿತ 1ರಿಂದ 8ನೇ ತರಗತಿ ವರೆಗೆ ಮಕ್ಕಳಿಗೆ ಶೂನ್ಯ ಶುಲ್ಕ. ಆದರೀಗ 9ನೇ ತರಗತಿಗೆ ಲಕ್ಷ ರೂ. ಶುಲ್ಕ...!
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್‌ಟಿಇ) ಖಾಸಗಿ ಶಾಲೆಗಳಲ್ಲಿ ದಾಖಲಾಗಿದ್ದ ಮಕ್ಕಳು ಎದುರಿಸುತ್ತಿರುವ ವೈರುಧ್ಯ ಇದು.
ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಉಚಿತ ಸೀಟು ಗಿಟ್ಟಿಸಿಕೊಂಡ ಮಕ್ಕಳು ಎಲ್‌ಕೆಜಿ ಅಥವಾ 1ನೇ ತರಗತಿಯಿಂದ 8ನೇ ತರಗತಿವರೆಗೆ ಶಿಕ್ಷಣವನ್ನು ಪೂರೈಸಿದ್ದು, ಇದಕ್ಕಾಗಿ ನಯಾಪೈಸೆಯನ್ನೂ ಪಾವತಿ ಮಾಡಿರಲಿಲ್ಲ.
ಆದರೀಗ 9ನೇ ತರಗತಿ ಪ್ರವೇಶಿಸಿರುವ ಈ ಮಕ್ಕಳ ಆರ್‌ಟಿಇ ಕಾಯ್ದೆಯಿಂದ ಹೊರಬಂದಿದ್ದು, ಇವರು ಉಚಿತ ಸೀಟು ಅಲಭ್ಯವಾಗಿದೆ. ಹೀಗಾಗಿ, ಖಾಸಗಿ ಶಾಲೆಯ ಆಡಳಿತ ಮಂಡಳಿಗಳು, ಈ ಮಕ್ಕಳಿಗೆ ಪೂರ್ಣಪ್ರಮಾಣದ ಶುಲ್ಕ ಪಾವತಿ ಮಾಡಲು ತಾಕೀತು ಮಾಡುತ್ತಿವೆ.
ಇಷ್ಟು ದಿನ ಶುಲ್ಕವಿಲ್ಲದೆ ಕಲಿತ ಮಕ್ಕಳ ಪಾಲಕರು ಕಂಗಾಲಾಗಿದ್ದು, ಏಕಾಏಕಿ 50 ಸಾವಿರ ರೂ.ಗಳಿಂದ 1 ಲಕ್ಷ ರೂ.ವರೆಗೆ ಹೇಗೆ ಅಷ್ಟು ದುಡ್ಡು ಹೊಂದಿಸುವುದು ಎಂಬ ಅಡಕತ್ತರಿಗೆ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಇದೀಗ ಏನು ಮಾಡಬೇಕು? ಎಂಬ ಚಿಂತೆಯಲ್ಲಿ ಮುಳುಗಿರುವ ಪಾಲಕರಿಗೆ ದಿಕ್ಕು ತೋಚದಂತಾಗಿದೆ.
ಇದು ಒಬ್ಬ ಪಾಲಕರ ಸಮಸ್ಯೆಯಲ್ಲ. ಆರ್‌ಟಿಇ ಅಡಿ ಕಲಿತು 9ನೇ ತರಗತಿಗೆ ಕಾಲಿಟ್ಟಿರುವ ಪ್ರತಿಯೊಬ್ಬ ಪಾಲಕರ ತೊಳಲಾಟ. ಇವರ ಮುಂದೆ ಎರಡು ಆಯ್ಕೆಗಳು ಮಾತ್ರ ಉಳಿದಿವೆ. ಒಂದೋ, ಶಾಲಾ ಆಡಳಿತ ಮಂಡಳಿ ಸೂಚಿಸಿದಂತಷ್ಟು ಶುಲ್ಕ ಪಾವತಿಸಿ ಅದೇ ಶಾಲೆಯಲ್ಲೇ ತಮ್ಮ ಮಕ್ಕಳ ದಾಖಲಾತಿಯನ್ನು ಮುಂದುವರಿಸುವುದು. ಇಲ್ಲವೇ ಶುಲ್ಕ ಪಾವತಿಸಲು ಸಾಧ್ಯವಾಗಲ್ಲ ಎಂದರೆ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬೇರೆ ಶಾಲೆಗೆ ಸೇರಿಸುವುದು. ಎರಡು ಆಯ್ಕೆಗಳನ್ನು ಬಿಟ್ಟರೆ ಪರ್ಯಾಯ ಮಾರ್ಗ ಇಲ್ಲವಾಗಿದೆ.

ಮುಂದೇನು ಮಾಡಬೇಕು?:

ಕೇಂದ್ರ ಸರ್ಕಾರ ರೂಪಿಸಿದ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಆರ್‌ಟಿಇ ಕಾಯ್ದೆ ದೇಶಾದ್ಯಂತ 2010ರ ಏಪ್ರಿಲ್ 1ರಿಂದ ಜಾರಿಗೆ ಬಂದಿದ್ದು, ರಾಜ್ಯದಲ್ಲಿ 2012-13ನೇ ಸಾಲಿನಿಂದ ಇದು ಕಾರ್ಯರೂಪಕ್ಕೆ ಬಂದಿದೆ. 6ರಿಂದ 14 ವಯೋಮಿತಿಯ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಇದು ಒದಗಿಸುತ್ತದೆ.
ಈ ಕಾಯ್ದೆಯಡಿ 1ರಿಂದ 8ನೇ ತರಗತಿವರೆಗೆ ಮಕ್ಕಳು ಉಚಿತವಾಗಿ ಅಭ್ಯಾಸ ಮಾಡಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮಕ್ಕಳು ಈ ಯೋಜನೆ ಲಾಭ ಪಡೆದುಕೊಂಡಿದ್ದಾರೆ. ಆದರೆ, 9ನೇ ತರಗತಿಗೆ ಕಾಲಿಟ್ಟಿರುವ ಮಕ್ಕಳು ಈ ಕಾಯ್ದೆಯಿಂದ ಹೊರಗುಳಿಯುತ್ತಾರೆ. ಮುಂದೇನು ಮಾಡಬೇಕು? ಎಂಬು ಪ್ರಶ್ನೆಯ ಈ ಮಕ್ಕಳನ್ನು ಕಾಡುತ್ತಿದೆ.
ಮಕ್ಕಳನ್ನು ಅರ್ಧದಾರಿಯಲ್ಲೇ ಕೈಬಿಡಬೇಡಿ:
ಆರ್‌ಟಿಇ ಮಕ್ಕಳನ್ನು ಅರ್ಧದಾರಿಯಲ್ಲೇ ಕೈಬಿಡುವುದು ಸರಿಯಲ್ಲ. ಇದರಿಂದ ಕಲಿಕೆ ಹಿನ್ನೆಡೆಯಾಗಲಿದೆ. ಭವಿಷ್ಯದ ಮೇಲೆಯೂ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಪರ್ಯಾಯ ಸೂತ್ರವನ್ನು ಕಂಡುಕೊಳ್ಳಬೇಕಿದೆ. ಅದೇ ಶಾಲೆಯಲ್ಲಿ ಆರ್‌ಟಿಇ ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯಲು ಅವಕಾಶ ಕಲ್ಪಿಸಬೇಕು. ಅವರ ಆರ್‌ಟಿಇ ಶುಲ್ಕವನ್ನು ಸರ್ಕಾರವೇ ಪಾವತಿಸಬೇಕು ಎಂಬುದು ಪಾಲಕರ ಆಗ್ರಹವಾಗಿದೆ.
ಮಾರಕವಾಗಲಿದೆ ಹೊಸ ಶಾಲೆ ಸೇರ್ಪಡೆ
ದುಬಾರಿ ಶುಲ್ಕ ಪಾವತಿಸಲು ಆಗುತ್ತಿಲ್ಲ. ಹೀಗಾಗಿ, 9ನೇ ತರಗತಿ ಬೇರೆ ಶಾಲೆಗೆ ಸೇರಿಸಿದರೆ ಮಕ್ಕಳಿಗೆ ತೊಂದರೆಯಾಗುತ್ತದೆ. ಹೊಸ ಸಹಪಾಠಿಗಳು, ಬೋಧಕರು, ಅಲ್ಲಿನ ವಾತಾವರಣಕ್ಕೆ ಹೊಂದಾಣಿಕೆ ಕಷ್ಟಕರವಾಗಲಿದೆ. ಇದು ಮಕ್ಕಳ ಮತ್ತು ಅವರ ಕಲಿಕೆಯ ಮೇಲೆಯೂ ಪರಿಣಾಮ ಬೀರುತ್ತದೆ. ಪ್ರೌಢಶಿಕ್ಷಣದಲ್ಲಿ 9 ಮತ್ತು 10ನೇ ತರಗತಿ ಮಹತ್ವದ್ದಾಗಿದೆ. ಇಂತಹ ಸಂದರ್ಭದಲ್ಲಿ ಈ ರೀತಿ ಬದಲಾವಣೆ ವ್ಯತರಿಕ್ತವನ್ನು ಎದುರಿಸಬೇಕಾಗುತ್ತದೆ ಎಂದು ಪಾಲಕರೊಬ್ಬರು ಆತಂಕ ವ್ಯಕ್ತಪಡಿಸಿದರು.

ಕನಿಕರ ತೋರದ ಖಾಸಗಿ ಶಾಲೆಗಳು:

ಈ ಮಕ್ಕಳ ಮೇಲೆ ಖಾಸಗಿ ಶಾಲೆಗಳು ಸಹಾನುಭೂತಿ ತೋರುತ್ತಿಲ್ಲ. ಬದಲಿಗೆ ಒರಟಾಗಿ ವರ್ತಿಸುತ್ತಿವೆ. ಶಾಲೆಯಲ್ಲಿರುವ ಎಲ್ಲ ಮಕ್ಕಳಂತೆ ಶುಲ್ಕವನ್ನು ಕೊಟ್ಟು 9ನೇ ತರಗತಿಯಲ್ಲಿ ಮುಂದುವರಿಬಹುದು. ಇದು ಆಗಲ್ಲ ಎಂದರೆ ಬೇರೆ ಶಾಲೆಯನ್ನು ನೋಡಿಕೊಳ್ಳಿ. ಇದುವೇ ನಮ್ಮ ಶಾಲೆಯ ನಿಯಮ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದಾರೆ.
ಜತೆಗೆ, ಸಮವಸ್ತ್ರ, ಪುಸ್ತಕಗಳು, ನೋಟ್‌ಬುಕ್‌ಗಳು ಸೇರಿದಂತೆ ಇತರ ಖರ್ಚಿಗೆ ದುಡ್ಡು ತೆರೆಬೇಕಾಗಿದೆ. ಇದು ಪಾಲಕರ ದೊಡ್ಡ ಆರ್ಥಿಕ ಹೊರೆಯಾಗಿದೆ. ದುಡಿಯುವ ಅರ್ಧದಷ್ಟು ಹಣವನ್ನು ಶುಲ್ಕಕ್ಕೆ ಹೋದರೆ ನಾವುಗಳು ಬದುಕುವುದು ಹೇಗೆ? ಎಂದು ಪಾಲಕರ ಪ್ರಶ್ನೆಯಾಗಿದೆ.

ಕೆಲ ಮಕ್ಕಳು ಬೇರೆ ಸ್ಕೂಲ್ ದಾಖಲು:

ಆರ್‌ಟಿಇ ಜಾರಿಯಾಗಿ 13 ವರ್ಷವಾಗಿದೆ. ಈಗಾಗಲೇ 5 ಬ್ಯಾಚ್‌ಗಳು 8ನೇ ತರಗತಿಯನ್ನು ಪೂರೈಸಿವೆ. ದುಬಾರಿ ಶುಲ್ಕ ಪಾವತಿಸಿ ಭಾಗಶಃ ಮಕ್ಕಳು ಆಯಾ ಶಾಲೆಯಲ್ಲೇ 9ನೇ ತರಗತಿಯಿಂದ ಮುಂದುವರಿದ್ದಾರೆ.
ಕೆಲ ಮಕ್ಕಳು ಮಾತ್ರ ದುಡ್ಡು ಕಟ್ಟಲು ಸಾಧ್ಯವಾಗದೆ ಸರ್ಕಾರಿ ಶಾಲೆ, ಕಡಿಮೆ ಶುಲ್ಕ ಇರುವ ಮತ್ತೊಂದು ಖಾಸಗಿ ಶಾಲೆಗೆ ದಾಖಲಾಗಿರುತ್ತಾರೆ. ಆದರೆ, ಈ ಸಮಸ್ಯೆ ಪರಿಹಾರ ಅಧಿಕಾರಿಗಳು, ಶಿಕ್ಷಣ ಇಲಾಖೆ ಮಟ್ಟದಲ್ಲಿ ಇಲ್ಲ. ಸರ್ಕಾರದ ಹಂತದಲ್ಲಿ ತೀರ್ಮಾನವಾಗಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.

ಸರ್ಕಾರದಿಂದಲೇ ಶುಲ್ಕ ಪಾವತಿ

ಆರ್‌ಟಿಇ ಮಕ್ಕಳ ಶಾಲೆಯ ಬೋಧನಾ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಎಲ್‌ಕೆಜಿ, ಯುಕೆಜಿ ಓದುತ್ತಿರುವ ಪ್ರತಿ ಮಗುವಿಗೆ ಗರಿಷ್ಠ 6,000 ರೂ. ಮತ್ತು 1ರಿಂದ 8ನೇ ತರಗತಿ ಓದುತ್ತಿರುವ ಪ್ರತಿ ಮಗುವಿಗೆ ಗರಿಷ್ಠ 10,800 ರೂ. ನಿಗದಿಪಡಿಸಲಾಗಿದ್ದು, ಇದು ಪೂರ್ಣಪ್ರಮಾಣದ ಪಾವತಿಯಾಗಲ್ಲ.
ಮಕ್ಕಳ ಸಂಖ್ಯೆ ಆಧರಿಸಿ ಇದು ನಿರ್ಧಾರವಾಗಲಿದೆ. ಬಹುತೇಕ ಶಾಲೆಗಳು 3500ರಿಂದ 8000 ರೂ. ವರೆಗೆ ಮಾತ್ರ ಕ್ಲೇಮ್ ಮಾಡಲು ಸಾಧ್ಯವಾಗುತ್ತದೆ.

ಆರ್‌ಟಿಇ ಸೀಟಿಗೆ ಬೇಡಿಕೆ ಕಡಿಮೆ

ಜಿಲ್ಲೆಯಲ್ಲಿ ಆರ್‌ಟಿಇ ಸೀಟಿಗೆ ಬೇಡಿಕೆ ಕಡಿಮೆ ಆಗಿದ್ದು, ವರ್ಷದಿಂದ ವರ್ಷಕ್ಕೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡು ಬರುತ್ತಿದೆ. ಆರ್‌ಟಿಇ ಕಾಯ್ದೆಯಲ್ಲಿ ಬದಲಾದ ನಿಯಾಮಾವಳಿಯೇ ಪಾಲಕರ ನಿರಾಸಕ್ತಿ ತೋರುತ್ತಿದ್ದಾರೆ.
ಮಗು ವಾಸ ಮಾಡುವ 1 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಶಾಲೆ ಇಲ್ಲದಿದ್ದರೆ ಮಾತ್ರ ಪಾಲಕರು ಆರ್‌ಟಿಇಗೆ ಅರ್ಜಿ ಹಾಕಬಹುದು. ಇದು ಪ್ರವೇಶ ಸಂಖ್ಯೆ ಕುಸಿಯಲು ಪ್ರಮುಖ ಕಾರಣವಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ 4400 ಆರ್‌ಟಿಇ ಸೀಟುಗಳು ಲಭ್ಯ ಇವೆ. ಈ ಪೈಕಿ ಅರ್ಧದಷ್ಟು ಭರ್ತಿಯಾಗಿಲ್ಲ. ಈ ಕ್ರಮದ ಮೂಲಕ ಶುಲ್ಕ ವಸೂಲಿಯನ್ನು ನಿಯಂತ್ರಿಸಿ, ಪಾಲಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲಿ

ಪಾಲಕರ ಬೇಡಿಕೆ ಏನು

  • 9 ಮತ್ತು 10ನೇ ತರಗತಿಯ ಶುಲ್ಕವನ್ನೂ ಸರ್ಕಾರವೇ ಪಾವತಿಸಲಿ
  • ಇದು ಸಾಧ್ಯವಾಗದಿದ್ದರೆ ನಿರ್ದಿಷ್ಟ ಶುಲ್ಕವನ್ನಾದರೂ ನಿಗದಿ ಪಡಿಸಲಿ
  • ಈ ಕ್ರಮದ ಮೂಲಕ ಶುಲ್ಕ ವಸೂಲಿಯನ್ನು ನಿಯಂತ್ರಿಸಿ, ಪಾಲಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲಿ
"

ಆರ್‌ಟಿಇ ಕಾಯ್ದೆ 1ರಿಂದ 8ನೇ ತರಗತಿ ವರೆಗೆ ಮಾತ್ರ ಅನ್ವಯವಾಗಲಿದೆ. 9ನೇ ತರಗತಿಯಿಂದ ಈ ಮಕ್ಕಳು ಕಾಯ್ದೆ ವ್ಯಾಪ್ತಿ ಹೊರಗುಳಿಯಲಿದ್ದಾರೆ. ಈ ವಿಷಯದ ಕುರಿತು ಅನೇಕ ಪಾಲಕರು ಬಂದು ಚರ್ಚೆ ಮಾಡಿದ್ದಾರೆ. ಆದರೆ, ಇದು ಸರ್ಕಾರದ ಹಂತದಲ್ಲಿ ಆಗಬೇಕಿರುವ ನೀತಿ ನಿರ್ಧಾರವಾಗಿದೆ.