ಮಾಜಿ ಸಂಸದ ಪ್ರತಾಪ್ ಸಿಂಹ 
ಮೈಸೂರು

ಪ್ರಿಯಾಂಕ್ ಖರ್ಗೆ ಮಾದರಿಯಲ್ಲಿ ಆರ್‌ಎಸ್‌ಎಸ್ ಸರ್ಕಾರಿ ಆಸ್ತಿ ಕಬಳಿಸಿಲ್ಲ : ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು: ಸಿದ್ಧಾರ್ಥ ಬುದ್ಧ ಟ್ರಸ್ಟ್ ರಚಿಸಿ ಕೆಐಡಿಬಿ ಜಾಗ ಕಬಳಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ರಿಜಿಸ್ಟ್ರೇಷನ್ ಅವಶ್ಯಕತೆ ಇದೆ. ಆದರೆ, ದೇಶದ ಕೆಲಸ ಮಾಡುವ ಆರ್‌ಎಸ್‌ಎಸ್ ರಿಜಿಸ್ಟ್ರೇಷನ್ ಅವಶ್ಯಕತೆ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ಧಾರ್ಥ ಬುದ್ಧ ಟ್ರಸ್ಟ್ ಹೆಸರಿನಲ್ಲಿ ಪ್ರಿಯಾಂಕ್ ಖರ್ಗೆ ಸರ್ಕಾರಿ ಜಾಗ ಲೂಟಿ ಮಾಡಿದ್ದಾರೆ. ಲೂಟಿಯಲ್ಲಿ ತೊಡಗಿರುವ ಪ್ರಿಯಾಂಕ್ ಖರ್ಗೆ ಅದೇ ಗುಂಗಿನಲ್ಲಿ ಆರ್‌ಎಸ್‌ಎಸ್‌ಅನ್ನು ಟೀಕಿಸುತ್ತಿದ್ದಾರೆ. ಅವರಿಗೆ ಈ ವಿಚಾರ ಬಿಟ್ಟರೆ ಬೇರೇನು ಗೊತ್ತಿಲ್ಲ ಎಂದರು.
ಗೃಹ ಸಚಿವರಾಗಿ ಅವರು ರಾಜ್ಯದ ಸುರಕ್ಷತೆ ಬಗ್ಗೆ ಮಾತನಾಡಿದ್ದಾರಾ? ಇಂತಹ ಗೃಹ ಸಚಿವರು ಇರುವ ಕಾರಣಕ್ಕೆ ರಾಜ್ಯಕ್ಕೆ ಅಕ್ರಮ ಬಾಂಗ್ಲಾ ವಲಸಿಗರು ಬರುತ್ತಿದ್ದಾರೆ. ಪಶ್ಚಿಮ ಬಂಗಳಾದ ಬಿಜೆಪಿ ಸರ್ಕಾರ ಬಾಂಗ್ಲಾ ವಲಸಿಗರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯಗಳಾದ ಕರ್ನಾಟಕ, ಕೇರಳ ಹಾಗೂ ತೆಲಂಗಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾ ವಲಸಿಗರು ಆಗಮಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾ ಮುಸ್ಲಿಂ ಸಮುದಾಯವನ್ನು ಬೆಂಬಲಿಸುತ್ತಿದ್ದರು. ಇದೀಗ ಅವರು ಅಧಿಕಾರದಲ್ಲಿ ಇಲ್ಲದೆ ಇದ್ದರೆ ಏನು ಮುಸ್ಲಿಮರನ್ನು ಬ್ರದರ್ಸ್ ಅನ್ನುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆರ್‌ಎಸ್‌ಎಸ್ ಅನ್ನು ಸದಾ ಟೀಕಿಸುವ ಪ್ರಿಯಾಂಕ್ ಖರ್ಗೆ ಇರುವ ಕಾರಣಕ್ಕೆ ಬಾಂಗ್ಲಾ ವಲಸಿಗರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮೈಸೂರಿಗೆ ನಿರಾತಂಕವಾಗಿ ಬಾಂಗ್ಲಾ ವಲಸಿಗರು ಆಗಮಿಸುತ್ತಿದ್ದಾರೆ. ನಗರಕ್ಕೆ ಆಗಮಿಸಿದ ಬಾಂಗ್ಲಾ ವಲಸಿಗರನ್ನು ಹಿಂದೂಪರ ಕಾರ್ಯಕರ್ತರು ತಡೆದು ಪ್ರಶ್ನಿಸಿದ್ದಾರೆ. ಎಲ್ಲರ ಬಳಿ ನಕಲಿ ಆಧಾರ್ ಕಾರ್ಡ್ ಹೊಂದಿದ್ದಾರೆ. ಬಾಂಗ್ಲಾದೇಶ ವಲಸಿಗರನ್ನು ಹಿಡಿದುಕೊಟ್ಟರೂ ಸಹ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವುದು ಖಂಡನೀಯ. ಪ್ರಿಯಾಂಕ್ ಖರ್ಗೆ ಅವರ ನಿರ್ದೇಶನದ ಮೇರೆಗೆ ಈ ಪ್ರಕರಣ ದಾಖಲಾಗಿದೆ ಎಂದು ಆರೋಪಿಸಿದರು.
ಡಿ.ಕೆ. ಶಿವಕುಮಾರ್, ಪ್ರಿಯಾಂಕ್ ಖರ್ಗೆ ಇರುವವರೆಗೂ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶದ ವಲಸಿಗರು ನಿರಂತರವಾಗಿ ಆಗಮಿಸುತ್ತಾರೆ. ಬಾಂಗ್ಲಾದವರು 200, 300 ರೂ.ಗೆ ಕೂಲಿ ಮಾಡುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಜಿಲ್ಲೆಯ ಜನತೆ ಆಶ್ರಯ ನೀಡಬಾರದು. ಇದರಿಂದ ನಮ್ಮ ಭವಿಷ್ಯಕ್ಕೆ ಗಂಡಾಂತರ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಯ ಒಂದಿಬ್ಬರು ಶಾಸಕರು ಅಡ್ಡ ಮತದಾನ ಮಾಡಿರುವುದು ರಾಜ್ಯಾಧ್ಯಕ್ಷರು ಸೇರಿದಂತೆ ಎಲ್ಲರಿಗೂ ನೋವು, ಬೇಸರ ತರಿಸಿದೆ. ಈ ನೋವ್ನಿಲ್ಲೇ ಅವರು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸಲು ಹೇಳಿದ್ದಾರೆ. ಈ ಬಗ್ಗೆ ಪಕ್ಷದ ಹಿರಿಯ ಮುಖಂಡರು ಸಲಹೆಗಳನ್ನು ನೀಡಿದ್ದು, ಈ ಸಲಹೆಗಳನ್ನು ಆಧರಿಸಿ ತೀರ್ಮಾನ ಮಾಡುತ್ತಾರೆ. ಈ ವಿಚಾರವಾಗಿ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದರು.