- ಮೈಸೂರಿನ ವೈದ್ಯರೊಬ್ಬರಿಗೆ ವಂಚಿಸಲಾಗಿದೆ.
- ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮೈಸೂರು: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟಿಆರ್‌ಎಐ) ಹಾಗೂ ಬಾಂದ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಮೈಸೂರಿನ ವೈದ್ಯರೊಬ್ಬರಿಗೆ 82 ಲಕ್ಷ ರೂ. ವಂಚಿಸಲಾಗಿದೆ.
ವಿಜಯನಗರ ನಾಲ್ಕನೇ ಹಂತದಲ್ಲಿ ನೆಲೆಸಿರುವ 49 ವರ್ಷದ ವೈದ್ಯರೊಬ್ಬರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಟಿಆರ್‌ಎಐ ನೋಟಿಫಿಕೇಷನ್ ವಿಭಾಗದ ಪಿಆರ್‌ಒ ಎಂ.ವಿ.ಅಮಿತ್ ಶ್ಯಾಂ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಹೆಸರಿನಲ್ಲಿರುವ ಸಿಮ್, ಅಪರಾಧ ಕೃತ್ಯಗಳಲ್ಲಿ ಬಳಕೆಯಾಗಿದ್ದು, ಈ ಬಗ್ಗೆ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಗೆ ಕರೆ ಮಾಡಿ, ಸ್ಪಷ್ಟನೆ ನೀಡುವಂತೆ ತಿಳಿಸಿದ್ದಾನೆ.
ಬಳಿಕ ಆತ ನೀಡಿದ ನಂಬರ್‌ಗೆ ವೈದ್ಯ ವಿಡಿಯೋ ಕರೆ ಮಾಡಿದಾಗ, ಕಚೇರಿಯಲ್ಲಿ ಕುಳಿತಿದ್ದ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಮಾತನಾಡಿದ್ದಾನೆ. ನಿಮ್ಮ ಹೆಸರಿನಲ್ಲಿ ಅಶ್ಲೀಲ ವಿಡಿಯೋ ಹಾಗೂ ಕಾನೂನುಬಾಹಿರ ಜಾಹೀರಾತು ಕಳುಹಿಸಿ ಮುಂಬೈನ ಸಾರ್ವಜನಿಕರಿಗೆ ಬೆದರಿಕೆ ಕರೆ ಮಾಡುತ್ತಿರುವುದಾಗಿ ತಿಳಿಸಿ ಬೆದರಿಸಿದ್ದಾನೆ.
ಬಳಿಕ ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ಇದ್ದು, ಅದರಲ್ಲಿ 2 ಕೋಟಿ ರೂ. ಚಲಾವಣೆ ಮಾಡಲಾಗಿದೆ. ನಿಮ್ಮ ಮೇಲ್ ಐಡಿಯನ್ನೂ ಬಳಸಲಾಗಿದೆ. ಮನಿ ಲ್ಯಾಂಡ್ರಿಂಗ್ ಪ್ರಕರಣದಲ್ಲಿ ನಿಮಗೆ ಮತ್ತು ನಿಮ್ಮ ಪತ್ನಿಗೆ ಅರೆಸ್ಟ್ ವಾರೆಂಟ್ ಆಗಿದೆ ಎಂದು ಮತ್ತಷ್ಟು ಹೆಸರಿಸಿದ್ದಾನೆ. ನಂತರ ನಿಮ್ಮ ಹಣ ಹಾಗೂ ಆಸ್ತಿಯನ್ನು ಪರಿಶೀಲಿಸಿದ ನಂತರ ಎನ್‌ಒಸಿ ನೀಡುವುದಾಗಿ ಹೇಳಿ, ನಿಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾನೆ. ವಂಚಕನನ್ನು ನಿಜವಾದ ಪೊಲೀಸ್ ಎಂದು ನಂಬಿದ ವೈದ್ಯ ಆತ ಕಳುಹಿಸಿದ್ದ ಮೂರು ಖಾತೆಗಳಿಗೆ ಒಟ್ಟು 82 ಲಕ್ಷ ರೂ. ವರ್ಗಾವಣೆ ಮಾಡಿ, ಮೋಸ ಹೋಗಿದ್ದಾರೆ. ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.