ತಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ, ಗ್ರಾಮದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಶಿವಣ್ಣ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಸಾ.ರಾ.ಮಹೇಶ್, ಜಿ.ಡಿ.ಹರೀಶ್ ಗೌಡ, ಎಂ.ಅಶ್ವಿನ್ ಕುಮಾರ್ ಇತರರು ಇದ್ದರು. 
ಮೈಸೂರು

ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ

ತಿ.ನರಸೀಪುರ: ಯುವಕನ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿನ್ನೆಲೆಯಲ್ಲಿ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮಕ್ಕೆ ಭಾನುವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ವೈಯಕ್ತಿಕ ಪರಿಹಾರದ ಚೆಕ್ ನೀಡಿದರು.
ಮೃತ ಶಿವಣ್ಣ ಅವರ ತಾಯಿ ಹಾಗೂ ಮಗಳಿಗೆ ಧೈರ್ಯ ತುಂಬಿದ ಎಚ್.ಡಿ.ಕುಮಾರಸ್ವಾಮಿ ಅವರು, ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ, ಆರೋಪಿಗೆ ಕಾನೂನಿನಡಿ ಶಿಕ್ಷೆಯನ್ನು ಕೊಡಿಸಬೇಕು. ಶಿವಣ್ಣ ಅವರಿಗೆ ಸಂಬಂಧಿಸಿದ ನಿವೇಶನದ ದಾಖಲೆಗಳನ್ನು ಮಾಡಿಕೊಡಬೇಕೆಂದು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ ಶಿವಣ್ಣನ ಹಿರಿಯ ಪುತ್ರಿಗೆ ಕೆಲಸ ಕೊಡಿಸುವ ಭರವಸೆ ನೀಡಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕರಾದ ಕೆ.ಮಹದೇವ್, ಎಂ.ಅಶ್ವಿನ್ ಕುಮಾರ್, ಕೊಳ್ಳೇಗಾಲ ಜೆಡಿಎಸ್ ಅಧ್ಯಕ್ಷ ಬಿ.ಪುಟ್ಟಸ್ವಾಮಿ, ಅಭಿಷೇಕ್ ಮಣಿಗಾರ್, ಕೆಂಪಯ್ಯನಹುಂಡಿ ಬಾಲಕೃಷ್ಣ, ಉಪ್ಪಾರ ಸಮುದಾಯದ ಮುಖಂಡ ಆರ್.ಬಸವರಾಜು, ಎಂ.ಶಿವಪ್ರಸಾದ್, ಚೆನ್ನೇಗೌಡ, ಗುತ್ತಿಗೆದಾರ ಶ್ರೀರಂಗರಾಜಪುರ ಎಂ. ಸಿದ್ದರಾಜು, ಮರಿದೇವೇಗೌಡ ಇದ್ದರು.