- ಏಳು ತಿಂಗಳ ಬಳಿಕ ಲೆಕ್ಕ ಕೊಟ್ಟ ಜಿಲ್ಲಾಡಳಿತ
ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಮುಗಿದ ಏಳು ತಿಂಗಳ ನಂತರ ಜಿಲ್ಲಾಡಳಿತ ದಸರೆಯ ಖರ್ಚಿನ ಲೆಕ್ಕ ನೀಡಿದೆ. ದಸರಾ ಮಹೋತ್ಸವಕ್ಕೆ 42,95,27,007 ರೂ. ವೆಚ್ಚವಾಗಿದೆ.
ಈ ಪೈಕಿ ಮಂಡ್ಯ ಜಿಲ್ಲೆಗೆ 2 ಕೋಟಿ ರೂ., ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ 55 ಲಕ್ಷ ರೂ. ನೀಡಲಾಗಿದೆ. 37,27,185 ರೂ. ಐಟಿ ಮತ್ತು ಜಿಎಸ್‌ಟಿ ಕಟ್ಟಲಾಗಿದೆ. ಯುವ ದಸರಾಗೆ ಬರೋಬ್ಬರಿ 15.94 ಕೋಟಿ ರೂ.ಗಳನ್ನು ವ್ಯಯಿಸಿದ್ದು, ಅತ್ಯಧಿಕ ಹಣವನ್ನು ವೆಚ್ಚ ಮಾಡಿದೆ. ಸಿವಿಲ್ ಕಾಮಗಾರಿಗಳಿಗೆ 5.73 ಕೋಟಿ ರೂ., ಏರ್ ಶೋ 55 ಲಕ್ಷ ರೂ. ನೀಡಲಾಗಿದೆ.
ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರದ 30 ಕೋಟಿ ರೂ., ಮೈಸೂರು ಅಭಿವೃದ್ಧಿ ಪ್ರಾಧಿಕಾರ 10 ಕೋಟಿ ರೂ. ನೀಡಿತ್ತು. ಪ್ರಾಯೋಕತ್ವದಿಂದ 1.81 ಕೋಟಿ ರೂ. ಹಾಗೂ ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳ ಟಿಕೆಟ್ ಮಾರಾಟದಿಂದ 3.21 ಕೋಟಿ ರೂ. ಸಂಗ್ರಹವಾಗಿತ್ತು.
ಉಪ ಸಮಿತಿಗಳಿಗೆ ಹಂಚಿಕೆ
ಸ್ವಾಗತ ಅಮಂತ್ರಣ ಮತ್ತು ಸ್ಥಳಾವಕಾಶ 5.57 ಕೋಟಿ ರೂ., ಮೆರವಣಿಗೆ 1.60 ಕೋಟಿ ರೂ., ಪಂಜಿನ ಕವಾಯತು 1.40 ಕೋಟಿ ರೂ., ಸ್ತಬ್ಧಚಿತ್ರ 7 ಲಕ್ಷ ರೂ., ರೈತ ದಸರಾಗೆ 52 ಲಕ್ಷ ರೂ., ಸಾಂಸ್ಕೃತಿಕ ದಸರಾಗೆ 2.8 ಕೋಟಿ ರೂ., ಲಲಿತಕಲೆಗೆ 22 ಲಕ್ಷ ರೂ., ಕವಿಗೋಷ್ಠಿಗೆ 68.90 ಲಕ್ಷ ರೂ. ಭರಿಸಲಾಗಿದೆ.
ಯೋಗ ದಸರಾಗೆ 23 ಲಕ್ಷ ರೂ., ಯುವ ಸಂಭ್ರಮಕ್ಕೆ 2.52 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ದಸರಾಗೆ 40 ಲಕ್ಷ ರೂ., ಚಲನಚಿತ್ರಕ್ಕೆ 40.50 ಲಕ್ಷ ರೂ., ಕುಸ್ತಿಗೆ 49 ಲಕ್ಷ ರೂ., ಗಜ ಪಯಣ, ಅರಮನೆ ಆವರಣದಲ್ಲಿ ಆನೆಗಳ ನಿರ್ವಹಣೆಗೆ 80 ಲಕ್ಷ ರೂ., ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ದಸರಾ ಕಾರ್ಯಕ್ರಮ ಆಯೋಜನೆಗೆ 60 ಲಕ್ಷ ರೂ., ರಂಗಾಯಣದಲ್ಲಿ ನವರಾತ್ರಿ ರಂಗೋತ್ಸವ ಆಯೋಜನೆಗೆ 10 ಲಕ್ಷ ರೂ. ಭರಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.