ಸಾಂದರ್ಭಿಕ ಚಿತ್ರ 
ಮೈಸೂರು

ಮೃತ ವಿದ್ಯಾರ್ಥಿ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ

ಮೈಸೂರು: ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ಬಸ್ ಉರುಳಿ ಬಿದ್ದು, ಮೃತಪಟ್ಟ ಬಾಲಕನ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡ ವಿದ್ಯಾರ್ಥಿಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ತರಳಬಾಳು ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಭರಿಸಲು ಒಪ್ಪಿಗೆ ಸೂಚಿಸಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.
ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಹೊನ್ನಾವರ ಬಳಿ ಅಪಘಾತಕ್ಕೀಡಾಗಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಕೆಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ತರಳಬಾಳು ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರೊಂದಿಗೆ ಶಾಸಕರಾದ ಟಿ.ಎಸ್.ಶ್ರೀವತ್ಸ ಮತ್ತು ಕೆ.ಹರೀಶ್‌ಗೌಡ ಸೋಮವಾರ ಸಭೆ ನಡೆಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮೃತ ಪವನ್ ಬಡ ಕುಟುಂಬದ ವಿದ್ಯಾರ್ಥಿಯಾಗಿದ್ದಾನೆ. ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ ಪಾಲಕರಿಗೆ ಶಾಲಾ ಆಡಳಿತ ಮಂಡಳಿ 30 ಲಕ್ಷ ರೂ. ಪರಿಹಾರ ನೀಡಲಿದೆ. ಜತೆಗೆ ಜನವರಿಯಲ್ಲಿ ಕುಟುಂಬಕ್ಕೆ ಆಶ್ರಯ ಯೋಜನೆಯಡಿ ಮನೆ ಅಥವಾ ನಿವೇಶನ ನೀಡಲಾಗುವುದು. ನಾವು ಏನೇ ಕೊಟ್ಟರೂ ಆ ತಂದೆ, ತಾಯಿಗೆ ಮಗನ್ನು ಕೊಡಲು ಸಾಧ್ಯವಿಲ್ಲ ಎಂದು ಸಂತಾಪ ಸೂಚಿಸಿದರು.
ಶಾಲೆಗಳು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವಾಗ ಸರ್ಕಾರ ಮಾರ್ಗಸೂಚಿ ಪಾಲಿಸಬೇಕು. ಈ ಶಾಲೆಯವರು ಸರ್ಕಾರದ ನಿಯಮಗಳನ್ನು ಪಾಲಿಸಿಲ್ಲ ಎಂಬುದು ಗೊತ್ತಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೊಗಬೇಕು ಎಂಬು ನಿಯಮ ಇದೆ. ಈ ನಿಯಮ ಪಾಲನೆ ಆಗಿಲ್ಲ. ಸಂಸ್ಥೆಯ ಲೋಪದೋಷಗಳೂ ಇವೆ. ಇದನ್ನು ಇಲಾಖೆ ಅಧಿಕಾರಿಗಳು ಕ್ರಮವಹಿಸುತ್ತಾರೆ. ಸರ್ಕಾರಿ ಬಸ್‌ನಲ್ಲಿ ಹೋಗಿದ್ದರೆ 10 ಲಕ್ಷ ರೂ. ಮತ್ತು ನ್ಯಾಯಾಲದ ತೀರ್ಮಾನದಂತೆ ಪರಿಹಾರ ಸಿಗುತ್ತಿತ್ತು. ಈ ದುರ್ಘಟನೆ ನಡೆಯಬಾರದಿತ್ತು. ನಡೆದು ಹೋಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿರುವ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಈ ಘಟನೆಗೆ ಚಾಲಕನ ಅಜಾಗರೂಕತೆ ಕಾರಣವಾಗಿದೆ. ಶಾಲಾ ಆಡಳಿತ ಮಂಡಳಿ ಜತೆ ಸಭೆ ಮಾಡಿದ್ದು, ಆಡಳಿತ ಮಂಡಳಿ ಸ್ಪಂದಿಸಿದ್ದು, ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಶಾಸಕ ಶ್ರೀವತ್ಸ ಮಾನವೀಯತೆಯಿಂದ ಆಶ್ರಯ ಯೋಜನೆಯಡಿ ಮನೆ ನೀಡುವ ಭರವಸೆ ನೀಡಿದ್ದಾರೆ. ಹೊನ್ನಾವರದ ಬಳಿ ಅಪಘಾತವಾಗಿದ್ದು, ಅಲ್ಲಿನ ಶಾಸಕ ಹಾಗೂ ಸಚಿವ ಮಂಕಾಳ್ ವೈದ್ಯ ಅವರ ಜತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅವರ ಪುತ್ರಿ ಬೀನ ವೈದ್ಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಪ್ರವಾಸ ತೆರಳಿದ್ದ ಮಕ್ಕಳನ್ನು ವಾಪಸ್ ಕರೆಸುವ ವಿಚಾರವನ್ನು ನಾನು ಸಿಎಂ ಗಮನಕ್ಕೂ ತಂದಿದ್ದೆ. ಅಲ್ಲಿ ಏನೆಲ್ಲ ವ್ಯವಸ್ಥೆ ಮಾಡಬೇಕೊ ಎಲ್ಲವನ್ನೂ ಮಾಡಿದ್ದಾರೆ ಎಂದರು.
ಸಭೆಯಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಗೋಪಿ, ಶ್ರೀಕಂಠಸ್ವಾಮಿ ಸೇರಿದಂತೆ ಪಾಲಕರು, ಮುಖಂಡರು, ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.