ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅಕ್ರಮ ಹಣ ಸಾಗಾಟಕ್ಕೆ ಬಳಕೆ ಮಾಡಿದ್ದಾರೆ ಎನ್ನಲಾದ ಕಾರು.
ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಭೂ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಪ್ರಾಧಿಕಾರದ ಹಿಂದಿನ ಆಯುಕ್ತ ಡಿ.ಬಿ.ನಟೇಶ್‌ಗೆ ಬಡ್ತಿ ನೀಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕಡೆಯವರಿಗೆ 1.60 ಕೋಟಿ ರೂ. ಲಂಚ ನೀಡಲಾಗಿದ್ದು, ಒಟ್ಟಾರೆ 9 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಬುಧವಾರ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಸ್ನೇಹಮಯಿ ಕೃಷ್ಣ ಲಿಖಿತ ದೂರು ಉನ್ನತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿರುವ ಡಿ.ಬಿ.ನಟೇಶ್ ಅವರನ್ನು ಕೆಎಎಸ್ ಆಯ್ಕೆ ಶ್ರೇಣಿಗೆ ಉನ್ನತೀಕರಿಸಿ ಅದೇ ಹುದ್ದೆಯಲ್ಲಿ ಮುಂದುವರಿ ಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಡ್ತಿ ನೀಡಲು ಸರ್ಕಾರದ ಉನ್ನತ ಅಧಿಕಾರಿಗಳಿಗೆ ನಟೇಶ್ ಲಂಚ ನೀಡಿದ್ದಾರೆ ಎಂಬುದು ಸ್ನೇಹಮಯಿ ಕೃಷ್ಣ ಅವರ ಆರೋಪವಾಗಿದೆ.
ದೂರಿನಲ್ಲಿ ಏನಿದೆ?: ಫೆ.9 ರಂದು ನನಗೆ ಬಂದಿರುವ ಮಾಹಿತಿ ಪ್ರಕಾರ ಕೆಎ41 ಸಿ 6723 ಸಂಖ್ಯೆಯ ಇಟಿಯಾಸ್ ಕಾರಿನಲ್ಲಿ ಬೆಂಗಳೂರಿನಿಂದ ಕೋಟ್ಯಾ ಂತರ ರೂಪಾಯಿ ಹಣವನ್ನು ಐದು ಬ್ಯಾಗ್‌ಗಗಳಲ್ಲಿ ಮೈಸೂರಿಗೆ ತರಲಾಗಿದೆ. ಸದರಿ ಹಣವು ಡಿ.ಬಿ. ನಟೇಶ್ ಅವರಿಗೆ ಸೇರಿದ್ದು ಎಂಬ ಮಾಹಿತಿ ಇದೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಹೆಬ್ಬಾಳು ಬಡಾವಣೆಯಲ್ಲಿ ಪಟಾಕಿಗಳನ್ನು ಮಾರಾಟ ಮಾಡುವ ರಸ್ತೆಯಲ್ಲಿರುವ ಗ್ಯಾಸ್ ಬಂಕಿನ ಬಳಿಗೆ ನಿಖಿಲ್ ಎಂಬುವರು ಹೋಗಿ ಸದರಿ ಕಾರಿನಿಂದ ನಾಲ್ಕು ಬ್ಯಾಗ್‌ಗಳನ್ನು ಪಡೆದುಕೊ ಂಡು ತಮ್ಮ ಕಾರಿನಲ್ಲಿ ಹಾಕಿಕೊಂಡು ತೆರಳಿದ್ದಾರೆ.
ಉಳಿದ ಒಂದು ಬ್ಯಾಗ್‌ನೊಂದಿಗೆ ಇಟಿಯಾಸ್ ಕಾರು ಜಿಲ್ಲಾ ನ್ಯಾಯಾಲಯ ಬಳಿ ಇರುವ ಆರ್‌ಟಿಒ ಕಚೇರಿ ಬಳಿಗೆ ಬಂದಿದ್ದು, ಅಲ್ಲಿಂದ ಎಲ್ಲಿಗೆ ಹೋಗಿದೆ ಎಂಬುದು ಆ ಸಮಯದಲ್ಲಿ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆ ನಂತರ ತಿಳಿದುಬಂದಿರುವುದೇನೆಂದರೆ ಆರ್‌ಟಿಒ ಸಮೀಪ ಇರುವ ಜಸ್ವಂತ್ ಎಂಬವವರ ಮನೆಯ ಬಳಿಗೆ ಹೋಗಿದ್ದು, ಅಲ್ಲಿ ಒಂದು ಬ್ಯಾಗನ್ನು ಇಳಿಸಲಾಗಿದೆ. ಸದರಿ ಐದು ಬ್ಯಾಗ್‌ಗಳಿಂದ ಒಟ್ಟು 9 ಕೋಟಿಗೂ ಅಧಿಕ ಹಣ ಬಂದಿದ್ದು, ಅದರಲ್ಲಿ 1.60 ಕೋಟಿ ರೂ.ಗಳನ್ನು ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಕಡೆಯವರಿಗೆ ನೀಡಲಾಗಿದೆ. ಈ ಹಣ ವರ್ಗಾವಣೆಯಾದ ನಂತರ ಫೆ.13 ರಂದು ನಟೇಶ್ ಅವರಿಗೆ ಬಡ್ತಿ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇಟಿಯಾಸ್ ಕಾರಿನ ಮಾಲೀಕ ಮತ್ತು ಚಾಲಕರನ್ನು ಕೂಡಲೇ ವಿಚಾರಣೆಗೆ ಒಳಪಡಿಸಬೇಕು. ಫೆ.9 ರಂದು ಯಾರು, ಯಾವ ಕಾರಣಕ್ಕಾಗಿ, ಸದರಿ ಕಾರನ್ನು ಬಾಡಿಗೆಗೆ ಪಡೆದಿದ್ದರು? ಸದರಿ ಕಾರಿನಲ್ಲಿ ಯಾರು, ಎಲ್ಲಿಂದ ಪ್ರಯಾಣ ಮಾಡಿದರು? ಎಲ್ಲಿಗೆ ಹೋದರು ? ಕಾರಿನಲ್ಲಿ ಐದು ಬ್ಯಾಗ್‌ಗಳನ್ನು ಸಾಗಿಸಲಾಗಿತ್ತೆ ? ಆ ಬ್ಯಾಗ್‌ಗಳನ್ನು ಎಲ್ಲಿ, ಯಾರಿಗೆ ನೀಡಲಾಗಿದೆ? ಈ ಕಾರಿನ ಬಾಡಿಗೆ ಹಣವನ್ನು ಯಾರು, ಯಾವ ರೀತಿ (ನಗದು ಅಥವಾ ಬ್ಯಾಂಕ್ ಮುಖಾಂತರ) ನೀಡಿರುತ್ತಾರೆ ಎಂಬ ಅಂಶದ ಕುರಿತು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಸದರಿ ಕಾರಿನ ಮಾಲೀಕ ಮತ್ತು ಚಾಲಕರ ಸಂಚಾರಿ ದೂರವಾಣಿಗಳಿಗೆ ಸಂಬಂಧಿಸಿದ ಕರೆಗಳು (ವಾಟ್ಸಾಪ್ ಕರೆ ಸೇರಿದಂತೆ) ಮತ್ತು ಟವರ್ ಲೊಕೇಶನ್ ದಾಖಲೆಗಳನ್ನು ಪಡೆದುಕೊಂಡು ಆತ ಯಾರನ್ನು ಯಾವ ಸಂದರ್ಭದಲ್ಲಿ ಸಂಪರ್ಕಿಸಿದ ಎಂಬ ಮಾಹಿತಿ ಪಡೆಯಬೇಕು. ಸದರಿ ಕಾರು ಸಂಚರಿಸುವುದಕ್ಕೆ ಸಂಬಂಧಿಸಿದಂತೆ ಸಿ.ಸಿ.ಕ್ಯಾಮಾರಗಳಿಂದ ದಾಖಲೆಗಳನ್ನು ಪಡೆಯಬೇಕು. ಡಿ.ಬಿ.ನಟೇಶ್, ನಿಖಿಲ್, ಜಸ್ವಂತ್, ಶಾಲಿನಿ ರಜನೀಶ್ ಅವರ ಮೊಬೈಲ್ ಕರೆಗಳನ್ನು ಪರಿಶೀಲಿಸಬೇಕು. ಶಾಲಿನಿ ರಜನೀಶ್‌ರವರಿಗೆ ಸಂಪರ್ಕ ಇರುವವರು ಮೈಸೂರಿಗೆ ಬಂದು ಜಸ್ವಂತ್, ನಿಖಿಲ್ ಅಥವಾ ಡಿ.ಬಿ.ನಟೇಶ್‌ರವರಿಗೆ ಪರಿಚಯ ಇರುವವರನ್ನು ಸಂಪರ್ಕ ಮಾಡಿರುತ್ತಾರೆಯೆ? ಎಂಬ ಅಂಶಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.