ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬೋಗಾದಿ ವರ್ತುಲ ರಸ್ತೆಯ ಬಳಿಯಲ್ಲಿ ಭಾನುವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಸಾ.ರಾ. ಮಹೇಶ್, ಜಿ.ಡಿ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ ಹಾಗೂ ಇತರರು ಇದ್ದರು.
ಮೈಸೂರು: ರಾಜ್ಯ ಸರ್ಕಾರ ಈಗಾಗಲೇ 8.26 ಲಕ್ಷ ಕೋಟಿ ರೂ. ಸಾಲ ಮಾಡಿದ್ದು, ಸರ್ಕಾರ ಮುಗಿಯುವುದರೊಳಗೆ ರಾಜ್ಯದ ಜನರ ಮೇಲೆ 10 ಲಕ್ಷ ಕೋಟಿ ರೂ. ಸಾಲದ ಹೊರೆ ಹೊರಿಸಲಿದೆ. ಉತ್ತಮ ಆಡಳಿತ ನೀಡಲು ಎನ್‌ಡಿಎ ಮೈತ್ರಿಕೂಟದ ಅವಶ್ಯಕತೆ ಇದ್ದು, ಇದಕ್ಕೆ ಜನರು ಆಶೀರ್ವಾದ ಮಾಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬೋಗಾದಿ ವರ್ತುಲ ರಸ್ತೆಯ ಬಳಿಯಲ್ಲಿ ಭಾನುವಾರ ಆಯೋಜಿಸಿದ್ದ ಜನರೊಂ ದಿಗೆ ಜನತಾದಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ರಾಜ್ಯದ ಪ್ರತಿಯೊಬ್ಬರ ತಲೆಯ ಮೇಲೆ 1 ಲಕ್ಷ ರೂ. ಸಾಲದ ಹೊರೆ ಇದ್ದು, ಈ ಸಾಲವನ್ನು ತೀರಿಸಲು ಸರ್ಕಾರ ಜನರ ಜೇಬಿಗೆ ಕೈ ಹಾಕಲಿದೆ ಎಂದು ಆರೋಪಿಸಿದರು.
ಜೆಡಿಎಸ್ ಪಕ್ಷವನ್ನು ಮುಗಿಸಿದ್ದೇವೆ. ನಾನು ಇದ್ದಾಗ 58 ಸೀಟು ಗೆದ್ದಿದ್ದೆವು, ಇದೀಗ 17 ಸೀಟ್‌ಗೆ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೆ ಹೇಳುತ್ತಾರೆ. ಹಲವಾರು ಕುತಂತ್ರದ ರಾಜಕಾರಣದಿಂದ ನಾವು 17 ಸ್ಥಾನಗಳಿಗೆ ಬಂದಿರಬಹದು. ಆದರೆ, ಮುಂದೆ 75 ರಿಂದ 80 ಸೀಟುಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಚ ಗ್ಯಾರಂಟಿ ಯೋಜನೆ ಜಾರಿಯಿಂದ ಜನರು ನೆಮ್ಮದಿಯಿಂದ ಇದ್ದಾರೆ ಎಂಬ ಗುಂಗಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಕಾಂಗ್ರೆಸ್ ನಾಯಕರು ನನ್ನ ಮನೆಯ ಬಳಿ ಅರ್ಧ ಗಂಟೆ ಕೂತರೆ ರಾಜ್ಯದ ಜನರ ಸಮಸ್ಯೆಗಳು ಏನು ಎಂಬುದು ಅರ್ಥವಾಗುತ್ತದೆ. ನನ್ನ ಮನೆಗೆ ಪ್ರತಿನಿತ್ಯ ಹಲವಾರು ಜನರು ಆಗಮಿಸಿ ಶಾಲಾ ಶುಲ್ಕ, ಆಸ್ಪತ್ರೆ ಶುಲ್ಕ ಪಾವತಿಗೆ ನನಗೆ ಅರ್ಜಿ ನೀಡುತ್ತಾರೆ. ಇದು ರಾಜ್ಯದ ನಿಜವಾದ ಚಿತ್ರಣ. ಜನರ ಸಮಸ್ಯೆಗಳನ್ನು ಹರಿಸಬೇಕಾದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಟೀಕೆ ಮಾಡುವುದರಲ್ಲಿ ಕಾಲಾಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಮಾಡಲು ಹೊರಟಿದ್ದಾರೆ. ಈ ಸರ್ಕಾರ ಬಂದ ನಂತರ ರಾಜ್ಯದಲ್ಲಿ 712 ಪೊಲೀಸ್ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಪಿಕ್‌ಪಾಕೆಟ್ ಮಾಡುವವರು, ಮನೆ ಕಳವು ಮಾಡುವವರಿಗೆ ಬೆಂಬಲವನ್ನು ಇವರು ನೀಡುತ್ತಿದ್ದರು. ಇದನ್ನು ತಿಳಿಸಲು ಸಾಧನಾ ಸಮಾವೇಶ ಮಾಡುತ್ತಿದ್ದೀರಾ? ಇಲವಾಲದಲ್ಲಿ ಚಿನ್ನದ ವ್ಯಾಪಾರಿ ಬಳಿ ದರೋಡೆ ಮಾಡಿದ ಪೊಲೀಸ್ ಅಧಿಕಾರಿಗೆ ಸರ್ಕಾರ ಪ್ರಶಸ್ತಿ ನೀಡಿದೆ. ಇದು ಸರ್ಕಾರದ ಕಾರ್ಯವೈಖರಿ. ಮತ್ತೊಂದೆಡೆ ಮೂರ‌್ನಾಲ್ಕು ಸಾವಿರ ಕುಟುಂಬಗಳನ್ನು ಬೀದಿಗೆ ತಂದು ಕಾಂಗ್ರೆಸ್ ಸರ್ಕಾರ ಬಿಡದಿಯಲ್ಲಿ ಟೌನ್‌ಶಿಪ್ ಮಾಡಲು ಹೊರಟಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಲು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜತೆಗೂಡಿ ನಡೆಸುತ್ತಿರುವ ಯುದ್ಧ ಕಾರಣ. ಕೇವಲ ಭಾರತದಲ್ಲಿ ಮಾತ್ರ ಪೆಟ್ರೋಲ್ ದರ ಏರಿಕೆಯಾಗಿಲ್ಲ. ಸಿಂಗಾಪುರದಲ್ಲಿ 245 ರೂ., ಪಾಕಿಸ್ತಾನದಲ್ಲಿ 400 ರೂ.ಗೆ ಏರಿಕೆ ಕಂಡಿದೆ ಎಂದರು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಲು ಜನರ ಮೇಲೆ ಎಷ್ಟು ತೆರಿಗೆ ವಿಧಿಸಿದೆ? ನಿಮಗೆ ಕೇಂದ್ರ ಸರ್ಕಾರವನ್ನು ಟೀಕಿಸುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕ ಜಿ.ಡಿ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್, ನಗರಾಧ್ಯಕ್ಷ ಎಸ್.ಬಿ.ಎಂ. ಮಂಜು, ಮಾಜಿ ಶಾಸಕ ಕೆ. ಮಹದೇವ್, ಮುಖಂಡರಾದ ರವಿಚಂದ್ರೇಗೌಡ, ಶಿವಮೂರ್ತಿ, ಗಂಗಾಧರ ಗೌಡ, ಚೇತನ್, ಚಂದ್ರಿಕಾ ಸುರೇಶ್, ಕೃಷ್ಣ ನಾಯಕ, ಹೇಮಾವತಿ ಹಾಗೂ ಇತರರು ಇದ್ದರು.
ಚಾಮುಂಡೇಶ್ವರಿಯಲ್ಲಿ ಶಕ್ತಿ ಪ್ರದರ್ಶನ
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬೋಗ ಬೋಗಾದಿ ವರ್ತುಲ ರಸ್ತೆಯ ಬಳಿಯಲ್ಲಿ ಭಾನುವಾರ ಆಯೋಜಿಸಿದ್ದ ಜನರೊಂ ದಿಗೆ ಜನತಾದಳ ಕಾರ್ಯಕ್ರಮದಲ್ಲಿ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನ ತೋರಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಜೆಡಿಎಸ್ ಚಟುವಟಿಕೆಯಿಂದ ದೂರ ಉಳಿದುಕೊಂಡಿದ್ದು, ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ. ಈ ಕ್ಷೇತ್ರದಲ್ಲಿ 2028ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಂದೇಶ ನೀಡಿದರು.