ಮೈಸೂರು: ಚಿನ್ನದ ಸ್ಕೀಂನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದರೆ 202 ದಿನಗಳ ನಂತರ 1.81 ಲಕ್ಷ ರೂ. ದೊರೆಯುತ್ತದೆ ಎಂದು ಆಸೆ ಹುಟ್ಟಿಸಿ ಆರ್.ಆರ್. ಗೋಲ್ಡ್ ಕಂಪನಿ ಮತ್ತು ಪಿಜಿಟಲ್ ಮೈಕ್ರೋ ಔಟ್ಲೆಟ್ಸ್ ಸ್ಪರ್ಷಾ ಜುವೇಲರ್ಸ್ ಕಂಪನಿಯು ನಾಲ್ವರಿಗೆ 4.60 ಲಕ್ಷ ರೂ.ವಂಚಿಸಿದೆ.
ವಿಜಯನಗರ 4ನೇ ಹಂತದ ನಿವಾಸಿ ಆದರ್ಶ್ ಅರಸ್ 1,44,000 ರೂ., ಜಯನಗರದ ಪಿ.ಎಂ. ಯಶಸ್ವಿನಿ 62,000 ರೂ., ಜಯನಗರದ ಎಚ್.ಆರ್. ಹೇಮಂತ್ 12,000 ರೂ., ಬೆಳವಾಡಿಯ ಎಚ್. ರಾಜೇಗೌಡ 1,06,000 ರೂ., ಪಾಂಡವಪುರ ಕೃಷ್ಣನಗರದ ಬಿ.ಕೆ. ವಿಶ್ವನಾಥ್ 1,36,200 ರೂ.ಗಳನ್ನು ವಂಚಕರ ಮಾತು ನಂಬಿ ಕಳೆದುಕೊಂಡಿದ್ದಾರೆ.
ಚಿನ್ನದ ಸ್ಕೀಂ ಮೇಲೆ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಇವರನ್ನು ನಂಬಿಸಿದರು. ಕೆಲವು ತಿಂಗಳು ಕಳೆದ ನಂತರ ಹಣ ಪಡೆಯಲು ಹೋದ ಸಂದರ್ಭ ಹಣ ನೀಡದೆ ಸತಾಯಿಸಲು ಪ್ರಾರಂಭಿಸಿದರು. ಈ ಸಂದರ್ಭ ಇವರಿಗೆ ಇದು ವಂಚನೆಯ ಕಂಪನಿ ಎಂದು ಮನವರಿಕೆಯಾಗಿ ಕಂಪನಿಯ 8 ಜನರ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.
ಪರವಾನಗಿ ಇಲ್ಲದ ರಿವಾಲ್ವರ್ ವಶ: ಪರವಾನಗಿ ಇಲ್ಲದ ರಿವಾಲ್ವರ್ ಹಾಗೂ ಜೀವಂತ ಗುಂಡುಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬರ ವಿರುದ್ಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಧಿನಗರದ ನಿವಾಸಿ ಶಿವಕುಮಾರ್ ಎಂಬಾತ ಪರವಾನಗಿ ಇಲ್ಲದ ರಿವಾಲ್ವರ್ ಹೊಂದಿರುವ ಕುರಿತು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬುಧವಾರ ಪೊಲೀಸರು ಮನೆ ಮೇಲೆ ದಾಳಿ ನಡೆಸಿ ರಿವಾಲ್ವರ್ ಹಾಗೂ ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡರು.