ಹುಣಸೂರು ತಾಲೂಕು ಬಿಳಿಕೆರೆಯಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಿವಿ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಚಾಲನೆ ನೀಡಿದರು. ಉದ್ಯಮಿ ಗೌರಿಶಂಕರ್ ಇತರರಿದ್ದರು.  ಹುಣಸೂರು
ಮೈಸೂರು

ಕ್ರಾಸ್‌ಕಂಟ್ರಿಯಲ್ಲಿ ರೋಹಿತ್, ಅಶ್ವಿನಿ ಪ್ರಥಮ

ಬಿಳಿಕೆರೆಯಲ್ಲಿ ಅಂತರ ಕಾಲೇಜು ಸ್ಪರ್ಧೆ

ಹುಣಸೂರು: ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ತಾಲೂಕಿನ ಬಿಳಿಕೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಅಂತರ ಕಾಲೇಜು ಕ್ರಾಸ್ ಕಂಟ್ರಿ(ಗುಡ್ಡಗಾಡು ಓಟ) ಸ್ಪರ್ಧೆಯ ಪುರುಷರ ವಿಭಾಗದಲ್ಲಿ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎ.ಆರ್.ರೋಹಿತ್ (32.37ನಿ.) ಹಾಗೂ ಮಹಿಳೆಯರ ವಿಭಾಗದಲ್ಲಿ ಮೈಸೂರು ಟೆರೇಷಿಯನ್ ಕಾಲೇಜಿನ ಅಶ್ವಿನಿ ಪೊಲೀಸ್ (44.36ನಿ.) ಪ್ರಥಮ ಸ್ಥಾನ ಪಡೆದಿದ್ದಾರೆ.

ಬುಧವಾರ ಆಯೋಜನೆಗೊಂಡಿದ್ದ 2026-27ನೇ ಸಾಲಿನ ಮೈಸೂರು ವಿ.ವಿ.ಯ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಕ್ರಾಸ್ ಕಂಟ್ರಿ ಸ್ಪರ್ಧೆಗೆ ಮೈಸೂರು ವಿ.ವಿ.ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಮೈಸೂರು ವಿ.ವಿ.ಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರೇವಣ್ಣಸಿದ್ದಪ್ಪ, ಬಿಳಿಕೆರೆ ಕಾಲೇಜಿನ ಪ್ರಾಚಾರ್ಯ ಬಿ.ಎಸ್.ಯೋಗೀಶ್, ತಿ.ನರಸೀಪುರ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ವಿ.ಉದಯ್‌ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಲೋಹಿತ್ ಹಾಗೂ ಗ್ರಾಮದ ಮುಖಂಡರು ಇದ್ದರು.

206 ಕ್ರೀಡಾಪಟುಗಳು ಭಾಗಿ: ಮೈಸೂರು ವಿ.ವಿ.ವ್ಯಾಪ್ತಿಯ ವಿವಿಧ ಕಾಲೇಜುಗಳಿಂದ 122 ಪುರುಷ ಹಾಗೂ 79 ಮಹಿಳಾ ಕ್ರೀಡಾಪಟುಗಳು ಸೇರಿದಂತೆ 206 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 10 ಕಿ.ಮೀ.ನ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಕ್ರೀಡಾಪಟುಗಳು ಪೈಪೋಟಿ ಓಟದ ಮೂಲಕ ಗಮನ ಸೆಳೆದರು.

ಬಿಳಿಕೆರೆಯಲ್ಲಿ ಪ್ರಥಮ ಬಾರಿಗೆ ಅಚ್ಚುಕಟ್ಟಾಗಿ ನಡೆದ ಗುಡ್ಡಗಾಡು ಓಟದ ಸ್ಫರ್ಧೆಗೆ ಉದ್ಯಮಿಗಳಾದ ಬಿಳಿಕೆರೆಯ ಬಿ.ಪಿ.ಗೌರೀಶಂಕರ್(ಚಿಕನ್‌ಮಧು), ಮನು, ಅಭಿಷೇಕ್, ತೇಜುರಾಮ್ ಹೀಗೆ ಸರ್ವರ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು. ವಿವಿಧ ಕಾಲೇಜುಗಳ ದೈಹಿಕ ನಿರ್ದೇಶಕರು ಭಾಗಿಯಾಗಿದ್ದರು.

ನಂತರ ನಡೆದ ಸಮಾರಂಭದಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ಪ್ರಮಾಣಪತ್ರ ವಿತರಿಸಲಾಯಿತು. ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು, ಅಧ್ಯಾಪಕರು, ಸಿಬ್ಬಂದಿ, ಸ್ವಯಂಸೇವಕರು ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಆಯೋಜಕರಿಗೆ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಭಿನಂದನೆ ಸಲ್ಲಿಸಿದರು.

ವಿಜೇತರಿವರು: ಪುರುಷರ ವಿಭಾಗ- ಹುಲ್ಲಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎ.ಆರ್.ರೋಹಿತ್ (ಪ್ರ), ಸಿ.ಆರ್.ಸೃಜನ್(ದ್ವಿ), ಮೈಸೂರು ಯುವರಾಜ ಕಾಲೇಜಿನ ಕೆ.ಯತಿನ್(ತೃ), ಮಹಾರಾಜ ಕಾಲೇಜಿನ ಟಿ.ಎನ್.ಸುಜನ್(ಚ), ಹುಣಸೂರು ಡಿ.ಡಿ.ಅರಸ್ ಕಾಲೇಜಿನ ಎಚ್.ಎಂ.ಮನೋಹರ್(ಐದನೇ ಸ್ಥಾನ), ಮೈಸೂರು ಮಹಾರಾಜ ಕಾಲೇಜಿನ ಶಶಾಂಕ್ ಆರನೇ ಸ್ಥಾನ ಪಡೆದರು.

ಮಹಿಳಾ ವಿಭಾಗ- ಮೈಸೂರು ಟೆರೇಷಿಯನ್ ಕಾಲೇಜಿನ ಅಶ್ವಿನಿಪೊಲೀಸ್(ಪ್ರ), ಮೈಸೂರು ಮಹಾರಾಜ ಕಾಲೇಜಿನ ಎಂ.ಮಂದಾರ(ದ್ವಿ), ತಿ.ನರಸೀಪುರ ಪಿಆರ್‌ಎಂ.ಕಾಲೇಜಿನ ವೃಷ್ಚಿತಾ(ತೃ), ಪಿಜಿಎಸ್‌ಸಿ ಎಂಜಿಎಂ ಕಾಲೇಜಿನ ಎಚ್.ಪ್ರವಲಿಕಾ(ಚ), ಪಿಆರ್‌ಎಂ ಕಾಲೇಜಿನ ಕೆ.ಎಂ.ಪ್ರಕೃತಿ(ಐದನೇ ಸ್ಥಾನ) ಹಾಗೂ ಟೆರೇಷಿಯನ್ ಕಾಲೇಜಿನ ಎಚ್.ಅರ್ಪಿತ ಆರನೇ ಸ್ಥಾನ ಪಡೆದರು.

ಟೀಮ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಹಾಗೂ ಮಹಿಳೆಯರ ವಿಭಾಗದಲ್ಲಿ ತಿ.ನರಸೀಪುರದ ಪಿಆರ್‌ಎಂ ಕಾಲೇಜು ಪಡೆದುಕೊಂಡಿವೆ.